
ಸೋಮವಾರಪೇಟೆ ಜ.28 NEWS DESK : ಅನೇಕ ವರ್ಷಗಳಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಹಿಳೆಯನ್ನು ಮಾನವೀಯ ದೃಷ್ಟಿಯಿಂದ ಮೊಗೇರ ಸಮಾಜದ ವತಿಯಿಂದ ರಕ್ಷಿಸಿ ಚಿಕಿತ್ಸೆ ಒದಗಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಸೋಮವಾರಪೇಟೆ ಪಟ್ಟಣದಲ್ಲಿ ಅಲೆದಾಡುತ್ತಾ ಬಸ್ ನಿಲ್ದಾಣದಲ್ಲಿ ಮಲಗುತ್ತಿದ್ದ ಮಹಿಳೆಯನ್ನು ಕೆಲವರು ಸಾಮಾಜಿಕ ಜಾಲತಾಣದ ಗುಂಪುಗಳಲ್ಲಿ ಅವರ ಫೋಟೋಗಳನ್ನು ಹಂಚಿಕೊಂಡಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ ಸೋಮವಾರಪೇಟೆ ಮೊಗೇರ ಸಮಾಜದ ಸದಸ್ಯರು ಸಭೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲು ತೀರ್ಮಾನಿಸಿದರು. ಸಭೆಯ ತೀರ್ಮಾನದಂತೆ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷರು ಹಾಗೂ ಮೊಗೇರ ಸಮಾಜದ ಉಪಾಧ್ಯಕ್ಷರಾದ ಪಿ.ಕೆ.ಚಂದ್ರು, ಜಿಲ್ಲಾ ಮೊಗೇರ ಸಮಾಜದ ಸದಸ್ಯರಾದ ಕೆ.ಬಿ.ನಂದ, ಹರೀಶ್ ತಣ್ಣೀರುಹಳ್ಳ, ವಿಜಯ್ ಕಾಗಡಿಕಟ್ಟೆ, ಹರೀಶ್ ಬಿಲ್ಕಿಕೊಪ್ಪ ಹಾಗೂ ರವಿ ಕರ್ಕಲಿ ಅವರುಗಳು ಸುನಂದ ಅವರ ಕುಟುಂಬದವರೊಂದಿಗೆ ಹರೀಶ್ ಅವರ ಕಾರಿನಲ್ಲಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಕರೆತಂದರು. ಈ ಸಂದರ್ಭದಲ್ಲಿ ಜಿಲ್ಲಾ ಮೊಗೇರ ಸಮಾಜದ ಅಧ್ಯಕ್ಷರಾದ ಜನಾರ್ದನ್ ಮರಗೋಡು ಹಾಗೂ ರವಿ ಪಿ.ಎಂ. ಅವರುಗಳು ಕೈಜೋಡಿಸಿದರು. ಜಿಲ್ಲಾ ಆಸ್ಪತ್ರೆಯಲ್ಲಿ ಮಾನಸಿಕ ವೈದ್ಯರಾದ ಡಾ. ರೂಪೇಶ್ ಅವರನ್ನು ಭೇಟಿಯಾಗಿ ವಿಷಯ ವಿವರಿಸಲಾಯಿತು. ತಕ್ಷಣ ಸ್ಪಂದಿಸಿದ ಡಾ. ರೂಪೇಶ್ ಅವರು ಸಿಬ್ಬಂದಿಯ ಸಹಾಯದಿಂದ ಸುನಂದ ಅವರನ್ನು ಸ್ವಚ್ಛಗೊಳಿಸಿ ಚಿಕಿತ್ಸೆ ಆರಂಭಿಸಿದರು. ಸುನಂದ ಅವರಿಗೆ ಯಾವುದೇ ದಾಖಲಾತಿಗಳು ಇಲ್ಲದ ಹಿನ್ನೆಲೆಯಲ್ಲಿ, ಅವರು ವಿದ್ಯಾಭ್ಯಾಸ ಮಾಡಿದ ಸುಂಟಿಕೊಪ್ಪದ ಕಾನ್‌ಬೈಲ್ ಶಾಲೆಯಿಂದ ವರ್ಗಾವಣೆ ಪ್ರಮಾಣಪತ್ರವನ್ನು ಪಡೆದು ಆಸ್ಪತ್ರೆಗೆ ಸಲ್ಲಿಸಲಾಯಿತು. ಸದ್ಯ ಸುನಂದ ಅವರು ಚಿಕಿತ್ಸೆಗಾಗಿ ಉತ್ತಮವಾಗಿ ಸ್ಪಂದಿಸುತ್ತಿದ್ದು, ಕೆಲವು ದಾನಿಗಳು ಹಣಕಾಸಿನ ಸಹಾಯವನ್ನು ಕೂಡ ಒದಗಿಸಿದ್ದಾರೆ. ಮೊಗೇರ ಸಮಾಜದ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ : ಅಶೋಕ್_ಮಡಿಕೇರಿ









