
ಮಡಿಕೇರಿ NEWS DESK ಫೆ.5 : ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ಕೊಡಗು ಜಿಲ್ಲಾಧ್ಯಕ್ಷರಾಗಿ ಕೆ.ಹೆಚ್.ಅಣ್ಣ ಷರೀಫ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ರಜಾಕ್ ಎಂ.ಎ ಆಯ್ಕೆಯಾಗಿದ್ದಾರೆ.
ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕಾರ್ಮಿಕ ಮಾಹಿತಿ ಶಿಬಿರ ಕುಶಾಲನಗರದ ಇಂದಿರಾ ಬಡಾವಣೆಯ ಮಲಯಾಳಿ ಮಹಿಳಾ ಸಮಾಜದ ಸಭಾಂಗಣದಲ್ಲಿ ನಡೆಯಿತು.
ಉಪಾಧ್ಯಕ್ಷರಾಗಿ ಇಬ್ರಾಹಿಂ ಹೊಸ ತೋಟ, ಕಾರ್ಯದರ್ಶಿಯಾಗಿ ಆಲಿ ಕೂಡಿಗೆ, ಸದಸ್ಯರಾಗಿ ಅಲ್ತಾಫ್ ಕೊಂಡಂಗೇರಿ, ಮೊಹಿದ್ದೀನ್ ಮಡಿಕೇರಿ, ಇಲ್ಯಾಸ್ ಕುಶಾಲನಗರ, ಹಸೀನಾ ಮಡಿಕೇರಿ ಹಾಗೂ ಅಜೀಜ್ ಕುಶಾಲನಗರ ಆಯ್ಕೆಯಾದರು.
ನೂತನ ಜಿಲ್ಲಾ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಸಿ ಮಾತನಾಡಿದ ಎಸ್‌ಡಿಟಿಯು ರಾಜ್ಯ ಸಂಚಾಲಕ ಅಥಾವುಲ್ಲ ಜೋಕಟ್ಟೆ ಕಾರ್ಮಿಕರ ಹೋರಾಟ ಮತ್ತು ತ್ಯಾಗದ ಫಲವಾಗಿ ಶ್ರಮಿಕ ವರ್ಗದ ಶ್ರೇಯೋಭಿವೃದ್ಧಿಗಾಗಿ ಹಲವು ಯೋಜನೆ ಹಾಗೂ ಕಾನೂನು ವಿವಿಧ ದೇಶಗಳಲ್ಲಿ ಅಸ್ತಿತ್ವಕ್ಕೆ ಬಂತು. ಭಾರತದಲ್ಲಿ ಸ್ವಾತಂತ್ರ್ಯ ನಂತರ ಹಲವು ರಾಜಕೀಯ ಪಕ್ಷಗಳು ವಿವಿಧ ಕಾರ್ಮಿಕ ಯೂನಿಯನ್ ಗಳನ್ನು ಹುಟ್ಟು ಹಾಕಿದವು. ಆದರೆ ಇಂದಿಗೂ ಕಾರ್ಮಿಕರು ವಿವಿಧ ರೀತಿಯ ಶೋಷಣೆಗಳನ್ನು ಅನುಭವಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ಮನಗಂಡು ದುಡಿಯುವ ಕೈಗಳಿಗೆ ನ್ಯಾಯ ಎಂಬ ಧ್ಯೇಯದೊಂದಿಗೆ ಕಳೆದ 15 ವರ್ಷಗಳ ಹಿಂದೆ ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ನನ್ನು ಅಸ್ತಿತ್ವಕ್ಕೆ ತರಲಾಯಿತು ಎಂದರು. ಕೊಡಗು ಜಿಲ್ಲಾ ಕಾರ್ಮಿಕ ಅಧಿಕಾರಿ ಕಾವೇರಿ ಅವರು ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳ ಬಗ್ಗೆ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರಿಗೆ ಸಮಗ್ರ ಮಾಹಿತಿ ನೀಡಿದರು.
ಎಸ್‌ಡಿಟಿಯು ರಾಜ್ಯ ಸಹ ಸಂಚಾಲಕ ಖಾದರ್ ಪರಂಗಿಪೇಟೆ, ರಾಜ್ಯ ಸಮಿತಿ ಸದಸ್ಯ ಅಬೂಬಕ್ಕರ್ ಮದ್ದ, ಮಡಿಕೇರಿ ನಗರಸಭಾ ಸದಸ್ಯರಾದ ಅಮೀನ್ ಮೊಹಿಸಿನ್, ಎಂ.ಕೆ.ಮನ್ಸೂರ್ ಆಲಿ, ಕುಶಾಲನಗರದ ಮಾಜಿ ಸೈನಿಕ ಮೊಹಮ್ಮದ್ ನಬಿ, ಗುತ್ತಿಗೆದಾರ ಝಕ್ರಿಯ, ಕಾರ್ಮಿಕರ ಮತ್ತು ಚಾಲಕರ ಸಂಘದ ಜಿಲ್ಲಾಧ್ಯಕ್ಷ ಕುಮಾರ ಮತ್ತಿತರರು ಉಪಸ್ಥಿತರಿದ್ದರು.
ಕಳೆದ ಮೂರು ವರ್ಷಗಳ ಅವಧಿಯ ವರದಿಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಜಾಕ್ ಎಂ.ಎ ಸಭೆಗೆ ಮಂಡಿಸಿದರು.










