ಮಡಿಕೇರಿ, NEWS DESK ಫೆ.27 : ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕೊಡಗು ಜಿಲ್ಲಾ ಘಟಕ ಜಿಲ್ಲಾಡಳಿತದ ಮೂಲಕ ಇಂದು ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿತು.
ಕೇಂದ್ರ ಸರಕಾರದ ಪ್ರೋತ್ಸಾಹಧನ ಹಾಗೂ ರಾಜ್ಯ ಸರಕಾರದ ಗೌರವಧನ ಒಟ್ಟಿಗೆ ಸೇರಿಸಿ ಮಾಸಿಕ ರೂ.15 ಸಾವಿರ ನೀಡಬೇಕು. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಸರಕಾರ ಆಶಾ ಕಾರ್ಯಕರ್ತೆಯರ ಗೌರವಧನವನ್ನು ರೂ.5 ಸಾವಿರದಿಂದ ರೂ.8 ಸಾವಿರಕ್ಕೆ ಹೆಚ್ಚಿಸಬೇಕು. ನಿವೃತ್ತ ಆಶಾ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು. ತೀವ್ರತರ ರೋಗಗಳ ಚಿಕಿತ್ಸಾ ವೆಚ್ಚಕ್ಕಾಗಿ ಅಂಗನವಾಡಿ ಮಾದರಿಯಲ್ಲಿ ಕಾರ್ಪಸ್ ಫಂಡ್ ಮಾಡಿ, ಚಿಕಿತ್ಸಾ ವೆಚ್ಚ ಮರುಪಾವತಿಗೆ ವ್ಯವಸ್ಥೆ ಮಾಡಬೇಕು.

ಗಂಭೀರ ಖಾಯಿಲೆಗಳಿಂದ ಬಳಲುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಚೇತರಿಕೆ ಅವಧಿಯಲ್ಲಿ 3 ತಿಂಗಳು ಮಾಸಿಕ ನಿಶ್ಚಿತ ಗೌರವಧನವನ್ನು ಪಾವತಿ ಮಾಡಬೇಕು. ಆಶಾ ಕಾರ್ಯಕರ್ತೆಯರನ್ನು ತರ್ಕಬದ್ಧಗೊಳಿಸುವ ಹೆಸರಿನಲ್ಲಿ ಸಾವಿರಾರು ಕಾರ್ಯಕರ್ತೆಯರನ್ನು ಕೈಬಿಡುವ ಪ್ರಕ್ರಿಯೆ ನಿಲ್ಲಿಸಬೇಕು. ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು. ಆಶಾ ಸುಗಮಕಾರರಿಗೆ 2024-25ರಲ್ಲಿ ಹೆಚ್ಚಳವಾದ ಗೌರವಧನದ ಬಾಕಿ ಮೊತ್ತವನ್ನು ಪಾವತಿ ಮಾಡಬೇಕು. ರಾಜ್ಯದಾದ್ಯಂತ ಕೇಂದ್ರದ ಪ್ರೋತ್ಸಾಹಧನ ಆಶಾ ಕಾರ್ಯಕರ್ತೆಯರು ಕೆಲಸ ಮಾಡಿದಷ್ಟು ಬರುತ್ತಿಲ್ಲ. ಈ ಸಮಸ್ಯೆ ಬಗೆಹರಿಸಿ, ಆಶಾಗಳಿಗೆ ತಕ್ಷಣ ಬಾಕಿ ಇರುವ ಪ್ರೋತ್ಸಾಹಧನ ನೀಡಬೇಕು. “ರಾಜ್ಯ ಸರಕಾರದ ಗ್ಯಾರಂಟಿ” ಯೋಜನೆಗಳ ಸರ್ವೆ ಮಾಡಲು ನಿಗದಿಯಾಗಿದ್ದ ರೂ.1 ಸಾವಿರವನ್ನು ಬಿಡುಗಡೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳ ಮನವಿ ಪತ್ರವನ್ನು ಆಶಾ ಕಾರ್ಯಕರ್ತೆಯರು ಜಿಲ್ಲಾಡಳಿತಕ್ಕೆ ನೀಡಿದರು.
ಈ ಸಂದರ್ಭ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷೆ ಟಿ.ಬಿ.ಪೂರ್ಣಿಮ, ಕಾರ್ಯದರ್ಶಿ ನಾಗಮಣಿ ಕೆ.ಎಂ ಮತ್ತಿತರ ಪ್ರಮುಖರು ಹಾಜರಿದ್ದರು.







