ಮಡಿಕೇರಿ NEWS DESK ಜೂ.23 : ಕೊಡವಲ್ಯಾಂಡ್, ಕೊಡವ ಸಂಸ್ಕೃತಿ, ಆಚಾರ ವಿಚಾರಗಳ ರಕ್ಷಣೆ ಮತ್ತು ಕೊಡವರ ಸಂವಿಧಾನಬದ್ಧ ಹಕ್ಕುಗಳ ಪ್ರತಿಪಾದನೆಯ ಮೂಲಕ ಕಳೆದ 36 ವರ್ಷಗಳಿಂದ ನಿರಂತರ ಹೋರಾಟಗಳನ್ನು ನಡೆಸಿಕೊಂಡು ಬರುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಜೂ.26ರಂದು “ಕೊಡವರಿಗೆ ವಿಶೇಷ ಸ್ಥಾನಮಾನ, ಸಾಂವಿಧಾನಿಕ ಮಾರ್ಗಗಳು ಮತ್ತು ಅಂತರಾಷ್ಟ್ರೀಯ ಕಾನೂನು” ವಿಷಯದ ಕುರಿತು ವಿಚಾರಗೋಷ್ಠಿ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ವಿಚಾರಗೋಷ್ಠಿ ನಡೆಯಲಿದ್ದು, ಸುಪ್ರೀಂ ಕೋರ್ಟ್ನ ಹಿರಿಯ ವಕೀಲ ವಿಕ್ರಮ್ ಹೆಗಡೆ ಅವರು “ಕೊಡವ ಧಾರ್ಮಿಕ ಆಚರಣೆ, ‘ಕೋವಿ-ತೋಕ್” ವಿಧಿ 25 ಮತ್ತು 26ರ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆ” ಕುರಿತು ವಿಷಯ ಮಂಡಿಸಲಿದ್ದಾರೆ. ಸುಪ್ರೀo ಕೋರ್ಟ್ ಹಾಗೂ ನ್ಯೂಯಾರ್ಕ್ನ ವಕೀಲರಾದ ಹಿಮಾ ಲಾರೆನ್ಸ್ ವಿಕ್ರಮ್ ಹೆಗಡೆ ಅವರು “ಅಂತರರಾಷ್ಟ್ರೀಯ ವಿಶ್ವಸಂಸ್ಥೆಯ ಕಾನೂನಿನಡಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ, ಸ್ವಯಂ-ಆಡಳಿತ ಮತ್ತು ಅದಿಮ ಸಂಜಾತ ಕೊಡವ ಜನಾಂಗೀಯ ಗುರುತು” ವಿಷಯದ ಕುರಿತು ಮಾತನಾಡಲಿದ್ದಾರೆ. ಹಿರಿಯ ವಕೀಲ ಹಾಗೂ ಸಾಹಿತಿ ಕೆ.ಪಿ.ಬಾಲಸುಬ್ರಹ್ಮಣ್ಯ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು. ಈ ವಿಚಾರಗೋಷ್ಠಿಯು ಕೊಡವರ ವಿಶೇಷ ಸ್ಥಾನಮಾನಕ್ಕಾಗಿ ನಮ್ಮ ದೀರ್ಘಕಾಲದ ಆಕಾಂಕ್ಷೆಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಪ್ರಸ್ತುತ ಸಂದರ್ಭದಲ್ಲಿ ಸಾಂವಿಧಾನಿಕ ಗಂಭೀರತೆಯನ್ನು ಪ್ರತಿಬಿಂಬಿಸುತ್ತದೆ. ಕೊಡವರ “ಕೋವಿ”ಗೆ 1949 ರಲ್ಲಿ ಸರ್ದಾರ್ ಪಟೇಲರು ನೀಡಿದ ಸಂಸದೀಯ ಮನ್ನಣೆ. ಶಾಸ್ತ್ರೀಯ “ಕೊಡವ” ಗುರುತನ್ನು ಮರುಸ್ಥಾಪಿಸಿದ 2021 ಡಿ.8 ರ ಕರ್ನಾಟಕ ಹೈಕೋರ್ಟ್ನ ತೀರ್ಪು, ಶಸ್ತ್ರಾಸ್ತ್ರ ಕಾಯ್ದೆ 2029 ರ ಅವಧಿ ಮುಗಿದ ನಂತರವೂ “ಕೋವಿ-ತೋಕ್” ಗೆ ಶಾಶ್ವತ ವಿನಾಯಿತಿ ನೀಡುವುದು, ಪರಕೀಯ ರಾಜರು ಮತ್ತು ಬ್ರಿಟಿಷರು ವಶಪಡಿಸಿಕೊಂಡ ವಂಶಪಾರoಪರ್ಯ ಜಮ್ಮಾಬಾಣೆ ಭೂಮಿಯ ಮರುಸ್ಥಾಪನೆ. ಅಂತರಾಷ್ಟ್ರೀಯ ಕಾನೂನಿನಡಿ ಕಂದಾಯ ರೈತರು ಮತ್ತು ಆದಿಮ ಸಂಜಾತ ಜನಾಂಗೀಯ ರೈತರ ನಡುವಿನ ವ್ಯತ್ಯಾಸ ಗುರುತಿಸಿಸುವಿಕೆ. ಸಿಕ್ಕಿಂನ ಬೌದ್ಧ ಸನ್ಯಾಸಿ ಸಮುದಾಯದ “ಸಂಘ” ಅಮೂರ್ತ ಕ್ಷೇತ್ರದ ಮಾದರಿಯಲ್ಲಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ. ನಮ್ಮ ಸಾಂವಿಧಾನಿಕ ಹಕ್ಕುಗಳನ್ನು ನಿರ್ಧರಿಸಲು, ಮುಂಬರುವ 2027 ರ ಭಾರತದ ರಾಷ್ಟ್ರೀಯ ಜನಗಣತಿ ಮತ್ತು ಜಾತಿ ಗಣತಿಯಲ್ಲಿ ಕೊಡವ ಜನಾಂಗಕ್ಕೆ ಪ್ರತ್ಯೇಕ “ಕೋಡ್” ಮತ್ತು “ಕಾಲಂ” ನೀಡುವುದು, ‘ಕೋವಿ-ತೋಕ್” ವಿಧಿ 25 ಮತ್ತು 26ರ ಅಡಿಯಲ್ಲಿ ಅತ್ಯಗತ್ಯ ಧಾರ್ಮಿಕ ಆಚರಣೆಗೆ ಸೇರ್ಪಡೆ ಸೇರಿದಂತೆ ಕಳೆದ 36 ವರ್ಷಗಳ ಸುದೀರ್ಘ ಶಾಂತಿಯುತ ಹೋರಾಟದ ಮೂಲಕ ಪ್ರತಿಪಾದಿಸಿದ ವಿವಿಧ ಬೇಡಿಕೆಗಳನ್ನು ವಿಚಾರಗೋಷ್ಠಿಯಲ್ಲಿ ಉಲ್ಲೇಖಿಸಲಾಗುವುದು ಎಂದು ತಿಳಿಸಿದರು. ಕೊಡವ ಸಮುದಾಯದ ಸಾಂವಿಧಾನಿಕ ಭವಿಷ್ಯದ ಕುರಿತಾದ ಈ ವೈಚಾರಿಕ ವಿಚಾರಗೋಷ್ಠಿಯಲ್ಲಿ ಸರ್ವ ಕೊಡವರ ಭಾಗವಹಿಸುವಿಕೆ ಅತ್ಯಗತ್ಯವಾಗಿದೆ ಎಂದು ಹೇಳಿದರು. *ರೆಸಾರ್ಟ್ ಗಳನ್ನು ತೆರವುಗೊಳಿಸಲು ಒತ್ತಾಯ* ಕೊಡಗು ಜಿಲ್ಲೆಯ 300 ಗ್ರಾಮಗಳಲ್ಲಿ ತಲಾ 10 ರೆಸಾರ್ಟ್ ಗಳು ತಲೆ ಎತ್ತಿವೆ, ಈ ರೆಸಾರ್ಟ್ ಗಳಿಂದ ಕೊಡವಲ್ಯಾಂಡ್ ಗೆ ಅಪಾಯ ಕಾದಿದೆ. ಜನಸಂದಣಿಯನ್ನು ತಪ್ಪಿಸಿ ಈ ಪವಿತ್ರ ಭೂಮಿಯನ್ನು ರಕ್ಷಿಸಿಕೊಳ್ಳಬೇಕಾದರೆ ರೆಸಾರ್ಟ್ಗಳನ್ನು ತೆರವುಗೊಳಿಸಬೇಕು. ಹೋಂಸ್ಟೇ ಪರಿಕಲ್ಪನೆ ಕೊಡವ ಸಂಸ್ಕೃತಿಗೆ ಪೂರಕವಾಗಿದೆ, ಆದರೆ ರೆಸಾರ್ಟ್ ಪ್ರವಾಸೋದ್ಯಮದ ಚಿಂತನೆ ರಾಜ್ಯಕ್ಕೆ ಲಾಭ ಮಾಡಿಕೊಡುತ್ತದೆಯೇ ಹೊರತು ಕೊಡಗು ಜಿಲ್ಲೆಗೆ ಯಾವುದೇ ಲಾಭವಿಲ್ಲ. ರೆಸಾರ್ಟ್ ಗಳಲ್ಲಿ ತಂಗುವ ಪ್ರವಾಸಿಗರಿಗಾಗಿ ಮಿತಿ ಮೀರಿ ನೀರಿನ ಬಳಕೆಯಾಗುತ್ತಿದೆ, ಜಲಮೂಲಗಳಿಗೆ ಹಾನಿಯಾಗುತ್ತಿದೆ. ಆದರೆ ಕೊಡಗಿನ ಮೂಲ ನಿವಾಸಿಗಳು ನೀರು ಬಳಸಿದರೆ ಆಡಳಿತ ವ್ಯವಸ್ಥೆ ಆಕ್ಷೇಪ ವ್ಯಕ್ತಪಡಿಸುತ್ತದೆ. ರಾಜ್ಯ, ದೇಶ ಮಾತ್ರವಲ್ಲದೆ ವಿದೇಶದಲ್ಲಿರುವವರು ಕೂಡ ಕೊಡಗಿನಲ್ಲಿ ಭೂಖರೀದಿಯಲ್ಲಿ ತೊಡಗಿದ್ದಾರೆ. ಖ್ಯಾತ ರಾಜಕಾರಣಿಗಳು ಹಾಗೂ ಕಪ್ಪು ಹಣ ಹೊಂದಿರುವವರು ಭೂಮಿಯನ್ನು ಖರೀದಿಸುತ್ತಿದ್ದಾರೆ. ಹಣಕ್ಕಾಗಿ ಭೂಪರಿವರ್ತನೆ ನಿಯಂತ್ರಣವಿಲ್ಲದೆ ನಡೆಯುತ್ತಿದೆ ಎಂದು ಎನ್.ಯು.ನಾಚಪ್ಪ ಇದೇ ಸಂದರ್ಭ ಆರೋಪಿಸಿದರು. ಕೊಡಗಿನ ಅಸ್ತಿತ್ವ, ಪರಿಸರ ಮತ್ತು ಸಂಸ್ಕೃತಿಗೆ ದಕ್ಕೆ ಉಂಟು ಮಾಡುತ್ತಿರುವ ನಿಯಮ ಮೀರಿದ ರೆಸಾರ್ಟ್ ಗಳನ್ನು ತಕ್ಷಣ ತೆರವುಗೊಳಿಸಬೇಕು ಎಂದು ಒತ್ತಾಯಿಸಿದ ಅವರು, ಈ ವಿಚಾರದ ಕುರಿತು ಮುಂದಿನ ದಿನಗಳಲ್ಲಿ ಬೃಹತ್ ಜನಜಾಗೃತಿ ಆಂದೋಲವನ್ನು ಆಯೋಜಿಸುವುದಾಗಿ ತಿಳಿಸಿದರು.







