
ಸೋಮವಾರಪೇಟೆ ಮಾ.5 NEWS DESK : ಹಿಂದೂ ಸಂಗಮ ಹಿಂದೂಗಳ ಐಕ್ಯತೆಯ, ಒಗ್ಗಟ್ಟಿನ, ಸಂಘಟನೆಯ ಬಲವನ್ನು ಹೆಚ್ಚಿಸುವ ಮಂತ್ರವಾಗಿದೆ ಎಂದು ಬೆಂಗಳೂರು ಉತ್ತರ ಜಿಲ್ಲೆಯ ಸಂಘ ಪ್ರಚಾರಕ್ ಸುಧಾಕರ್ ಅಭಿಪ್ರಾಯಿಸಿದರು. ಚೌಡ್ಲು ಹಿಂದೂ ಸಂಗಮ ಆಯೋಜನ ಸಮಿತಿ ವತಿಯಿಂದ ಪಟ್ಟಣದ ಆರ್‍ಎಂಸಿ ಆವರಣದಲ್ಲಿ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಭಾರತ ದೇಶ ತನ್ನದೇ ಆದ ವಿಶಿಷ್ಟ ಪರಂಪರೆಯನ್ನು ಹೊಂದಿದೆ. ಈ ಕಾರಣದಿಂದಲೇ ಪ್ರಪಂಚಕ್ಕೆ ಭಾರತ ಧಾರ್ಮಿಕತೆಯ ಮಾದರಿ ರಾಷ್ಟ್ರವಾಗಿ ಹೊರಹೊಮ್ಮಿದೆ. ಇಂದಿನ ಮಕ್ಕಳಿಗೆ ದೇಶಪ್ರೇಮದ ಪಾಠವನ್ನು ಪ್ರಾರಂಭಿಕ ಹಂತದಲ್ಲಿಯೇ ಕಲಿಸಿಕೊಡುವ ಮಹತ್ಕಾರ್ಯ ಪೋಷಕರಿಂದ ಆಗಬೇಕಿದೆ ಎಂದರು. ಮಾರಿಯಮ್ಮ ದೇವಾಲಯದಿಂದ ನಡೆದ ಮೆರವಣಿಗೆಯಲ್ಲಿ ಭಜನಾ ನೃತ್ಯ, ಚಂಡೆ ಮದ್ದಳೆ, ಛದ್ಮವೇಶಗಳು, ಶ್ರೀ ರಾಮನ ಘೋಷಣೆಗಳು, ಬಾಬಾ ಸಾಹೇಬ್ ಅಂಬೇಡ್ಕರ್ ಸ್ಥಬ್ದಚಿತ್ರ ಹಾಗು ದೇಶ ಪ್ರೇಮವನ್ನು ಪ್ರತಿಬಿಂಬಿಸುವ ವಿವಿಧ ಕಲಾ ಕೃತಿಗಳು ಗಮನ ಸೆಳೆದವು. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ, ಯಸಳೂರು ತೆಂಕಲಗೂಡು ಬೃಹನ್ಮಠದ ಪೀಠಾಧ್ಯಕ್ಷರಾದ ಚೆನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ, ಹಿಂದೂ ರಾಷ್ಟ್ರದ ಏಕತೆಯ ಮನೋಭಾವನೆಯನ್ನು ಮಕ್ಕಳಲ್ಲಿ ಬಿತ್ತುವ ಕಾರ್ಯ ಆಗಬೇಕಿದೆ. ಸನಾತನ ಧರ್ಮದ ವಿಚಾರಗಳನ್ನು ಮಕ್ಕಳಿಗೆ ತಿಳಿಸುವ ಕಾರ್ಯ ನಿರಂತರವಾಗಿ ನಡೆಯಬೇಕು. ಬದುಕಿನ ಮೌಲ್ಯಗಳನ್ನು ಕೇಂದ್ರೀಕರಿಸುವ ಉದ್ದೇಶವೇ ಧರ್ಮದ ಮೂಲವಾಗಿದೆ ಎಂದರು. ಮಂಡಲ ಅಧ್ಯಕ್ಷ ಚಿಂತು, ನಿವೃತ್ತ ಮುಖ್ಯ ಶಿಕ್ಷಕಿ ಲಕ್ಷ್ಮೀ, ಹಿಂದೂ ಸಂಗಮ ಸಮಿತಿಯ ಪ್ರಮುಖರಾದ ಸನತ್, ಉದ್ಯಮಿ ಎಸ್.ಎಲ್.ಸೀತಾರಾಮ್, ಹಿರಿಯ ಸ್ವಯಂ ಸೇವಕರಾದ ಕಿಬ್ಬೆಟ್ಟ ಶೇಷಪ್ಪ ಮತ್ತಿತರರು ಇದ್ದರು.









