ಮಡಿಕೇರಿ, NEWS DESK ಮಾ.೭ : ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆ ಜಿಲ್ಲಾಧಿಕಾರಿ ಎಸ್.ಜೆ.ಸೋಮಸೇಖರ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ ಅವರು ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿ ಸ್ವೀಕೃತವಾಗಿರುವ ಅನುಮೋದಿಸಿರುವ ಹಾಗೂ ತಿರಸ್ಕರಿಸಿರುವ ಅರ್ಜಿಗಳ ವಿವರವನ್ನು ಸಭೆಗೆ ತಿಳಿಸಿದರು.
ಸಭೆಯಲ್ಲಿ ಬಾಳೆಕೋವು ಹಾಡಿಯಿಂದ ನಾಗರಹೊಳೆ ಗದ್ದೆಹಾಡಿ, ಗೋಣಿಗದ್ದೆ ಹಾಡಿ ಕೊಡಂಗೆ ಹಾಡಿ, ನಾಣಚ್ಚಿಗದ್ದೆ ಹಾಡಿ ಮತ್ತು ಕೊಲ್ಲಿಹಾಡಿಯಲ್ಲಿ ಭೂಗತ ಕೇಬಲ್ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಸೆಸ್ಕ್ ವತಿಯಿಂದ ನಿರ್ವಹಿಸಲು ಅನುಮೋದನೆ ನೀಡಲಾಯಿತು.
ಸಮುದಾಯ ಹಕ್ಕು ಪತ್ರ ಪಡೆದಿರುವ ಕ್ಲೇಮುದಾರರಿಗೆ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಜಂಟಿ ಗುರುತಿನ ಚೀಟಿ ನೀಡಲು ತೀರ್ಮಾನಿಸಲಾಯಿತು.
ಹಕ್ಕುಪತ್ರ ವಿತರಿಸಲು ಬಾಕಿ ಇರುವ ೨೨ ಸಮುದಾಯ ಹಕ್ಕು ಅರ್ಜಿಗಳಿಗೆ ಸಂಬಂಧಿಸಿದಂತೆ ೧೫ ದಿವಸದೊಳಗೆ ಸರ್ವೇ ಕಾರ್ಯ ಪೂರ್ಣಗೊಳಿಸಿ ಸಲ್ಲಿಸುವಂತೆ ಉಪ ವಿಭಾಗೀಯ ಮಟ್ಟದ ಅರಣ್ಯ ಹಕ್ಕು ಸಮಿತಿಗೆ ಸೂಚಿಸಲಾಯಿತು.

ಸಾಕ್ಷಿಗಳ ಕೊರತೆಯಿಂದ ತಿರಸ್ಕರಿಸಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಸಂಬಂದಿಸಿದ ಇಲಾಖೆಗಳು ಜಂಟಿ ಸ್ಥಳ ಮಹಜರ್ ನಡೆಸಿ ಈ ವರದಿಯನ್ನು ಸಾಕ್ಷಿಯಾಗಿ ಪರಿಗಣಿಸಲು ಕ್ರಮವಹಿಸಿ ನಿಗದಿತ ನಮೂನೆಯಲ್ಲಿ ಮಾಹಿತಿ ನೀಡಲು ಗ್ರಾಮ ಮಟ್ಟದ ಅರಣ್ಯ ಹಕ್ಕು ಸಮಿತಿಗಳಿಗೆ ನಿರ್ದೇಶನ ನೀಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರು, ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ವಿರಾಜಪೇಟೆ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಮಡಿಕೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಉಪ ವಿಭಗಾಧಿಕಾರಿ ನಿತಿನ್ ಚಕ್ಕಿ, ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ, ಸೆಸ್ಕ್ ಕಾರ್ಯಪಾಲಕ ಅಭಿಯಂತರರು, ನಾಗರಹೊಳೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ತಿತಿಮತಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿಗಳು ಹಾಜರಿದ್ದರು.







