
ಮಡಿಕೇರಿ NEWS DESK ಮಾ.15 : ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನವಾದ ಮಾ.21 ರಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ವತಿಯಿಂದ ಮಡಿಕೇರಿ ಹೊರ ವಲಯದ ಕ್ಯಾಪಿಟಲ್ ವಿಲೇಜ್ ನಲ್ಲಿ “ವಿಚಾರ ಸಂಕಿರಣ” ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ. ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿ ಆರಾಧಕ ಆನಿಮಿಸ್ಟಿಕ್ ಕೊಡವರಿಗಾಗಿ ಸಂವಿಧಾನದ ಅಡಿಯಲ್ಲಿ “ಭೂ-ರಾಜಕೀಯ ಸ್ವಾಯತ್ತತೆ” ಮತ್ತು “ವಿಶೇಷ ಸ್ಥಾನಮಾನ”ಕ್ಕಾಗಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಂಡಿರುವ “ಕೊಡವ ಕ್ವೆಸ್ಟ್” ವಿಚಾರ ಸಂಕಿರಣದಲ್ಲಿ ಶಾಸನ ರೂಪಿಸುವವರು, ನ್ಯಾಯವಾದಿಗಳು ಹಾಗೂ ಶಿಕ್ಷಣ ತಜ್ಞರು ಹಕ್ಕೊತ್ತಾಯದ ಕುರಿತು ಚರ್ಚಿಸಲಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಭಾರತದ ಈಶಾನ್ಯ ರಾಜ್ಯಗಳಿಗೆ 244 ಮತ್ತು 371 ನೇ ವಿಧಿಗಳಡಿಯಲ್ಲಿ ನೀಡಲಾಗಿರುವ ಮಾದರಿಯಲ್ಲೇ, ಅಲ್ಪಸಂಖ್ಯಾತ ಸೂಕ್ಷö್ಮ ಕೊಡವ ಜನಾಂಗದ ಭೂಮಿ, ಎಸ್‌ಟಿ ಜನಾಂಗೀಯ ವರ್ಗೀಕರಣ, ಕೊಡವರ ಧಾರ್ಮಿಕ ಸಂಸ್ಕಾರವಾದ ಸಾಂಪ್ರದಾಯಿಕ ಬಂದೂಕು ಹಕ್ಕು, ಭಾಷೆ, ಸಾಂಸ್ಕೃತಿಕ ಪರಂಪರೆ, ಸಾಂಪ್ರದಾಯಿಕ ಕಾನೂನು ಹಾಗೂ ಆರ್ಥಿಕ ಮತ್ತು ರಾಜಕೀಯ ಸ್ವಾತಂತ್ರ‍್ಯಕ್ಕಾಗಿ ಕಳೆದ 36 ವರ್ಷಗಳಿಂದ ಕೊಡವ ಜನಾಂಗದ ಅಪ್ರತಿಮ ಧ್ವನಿಯಾಗಿ ಸಿಎನ್‌ಸಿ ಶಾಂತಿಯುತ ಮತ್ತು ನಿರಂತರವಾಗಿ ಸಂವಿಧಾನಬದ್ಧವಾಗಿ ಹೋರಾಟವನ್ನು ನಡೆಸುತ್ತಾ ಬಂದಿದೆ. ಇದೀಗ ಕೊಡವರ ಹಕ್ಕುಗಳು, ಸ್ವಯಂ ಆಡಳಿತ ಮತ್ತು ಸ್ವಾಯತ್ತತೆಯನ್ನು ಎತ್ತಿ ತೋರಿಸುವ ಉದ್ದೇಶದಿಂದ ಸಿಎನ್‌ಸಿ ಆಯೋಜಿಸಿರುವ ಈ ವಿಚಾರ ಸಂಕಿರಣವು ಒಂದು ಮಹತ್ವದ ಹೆಜ್ಜೆಯಾಗಿದೆ. ರಾಷ್ಟ್ರೀಯ ಜನಗಣತಿಯಲ್ಲಿ ಕೊಡವರಿಗಾಗಿ ಪ್ರತ್ಯೇಕ ಕೋಡ್ ಮತ್ತು ಕಾಲಮ್ ಅನ್ನು ಕೋರುವ ಮೂಲಕ, ಸಾಂವಿಧಾನಿಕ ಹಕ್ಕುಗಳಿಗೆ ಬಲವಾದ ಅಡಿಪಾಯವನ್ನು ಸ್ಥಾಪಿಸುವ ಗುರಿ ಸಿಎನ್‌ಸಿ ಹೊಂದಿದೆ. ಸಂವಿಧಾನದ 244 ಮತ್ತು 371 ನೇ ವಿಧಿಗಳೊಂದಿಗಿನ ಹೋಲಿಕೆಯು ಗಮನಾರ್ಹವಾಗಿದೆ, ಭಾರತದ ಈಶಾನ್ಯ ರಾಜ್ಯಗಳಂತೆಯೇ ಮಾನ್ಯತೆ ಮತ್ತು ಸ್ವಾಯತ್ತತೆಯನ್ನು ಪಡೆಯುವ ಆಶಯ ನಮ್ಮದಾಗಿದೆ. ವಿಚಾರಣ ಸಂಕಿರಣದ ಮೂಲಕ ವಿಶ್ವ ಜನಾಂಗೀಯ ತಾರತಮ್ಯ ನಿರ್ಮೂಲನಾ ದಿನವನ್ನು ಅರ್ಥಪೂರ್ಣಗೊಳಿಸಲಾಗುವುದು ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.








