
ವಿರಾಜಪೇಟೆ ಮಾ.16 NEWS DESK : ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿಯ ಚೇರಳ ಗೌಡ ಸಮಾಜದ ನೂತನ ಸಮುದಾಯ ಭವನದವನ್ನು ವಿಧಾನಸಭೆಯ ಮಾಜಿ ಅಧ್ಯಕ್ಷ ಕೊಂಬಾರನ ಜಿ.ಬೋಪಯ್ಯ ಅವರು ಲೋಕಾರ್ಪಣೆಗೊಳಿಸಿದರು. ಕೊಡಗಿನ ಗೌಡ ಸಂಪ್ರದಾಯದಂತೆ ಭವನ ಉದ್ಘಾಟನಾ ಕಾರ್ಯಕ್ರಮ ನಡೆದು ಗೌಡ ಜನಾಂಗದವರು ತಮ್ಮ ಸಾಂಪ್ರಾದಾಯಿಕ ಉಡುಪಿನಲ್ಲಿ ಕಂಗೊಳಿಸಿದರು. ಚೇರಳ ಭಾಗಕ್ಕೆ ಸೇರಿದ 80 ಗೌಡ ಕುಟುಂಬಗಳಿಂದ ಮದುವೆಯಾಗಿ ತೆರಳಿದ ಮಹಿಳೆಯರನ್ನು ತವರೂರಿನಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೇ ಕಟ್ಟಡ ನಿರ್ಮಾಣ ಕತೃಗಳಾದ ಕೆಮ್ಮಾರನ ಸುರೇಶ್, ನೂಜಿಬೈಲು ಗಣಪತಿ, ಕೋಳಿಮಾಡು ಪಾಪು ಉತ್ತಪ್ಪ, ಸಮಾಜಕ್ಕೆ ಅತಿ ಹೆಚ್ಚಿನ ಧನಸಹಾಯ ನೀಡಿದ ಹೊಸಮನೆ ಪೂವಯ್ಯ ಅವರ ಪರವಾಗಿ ಮಗ ಜಿತೇಂದ್ರ, ಪೇರಿಯನ ಉದಯಕುಮಾರ್, ಗೌಡ ಸಮಾಜದ ಸಂಸ್ಥಾಪಕರಾದ ಮರದಾಳು ಉಲ್ಲಾಸ, ಮರದಾಳು ಗೋಪಾಲ, ಮರದಾಳು ಜನಾರ್ಧನ, ಪೇರಿಯನ ಪ್ರಕಾಶ್ ಸೇರಿದಂತೆ ಸಮುದಾಯ ಭವನಕ್ಕೆ ಧನಸಹಾಯ ನೀಡಿದವರನ್ನು, ಕಟ್ಟಡ ನಿರ್ಮಾಣದ ಕನಸು ಹೊತ್ತು ಸದಾ ಕೈ ಜೊಢಿಸಿದ ಮಹನೀಯರನ್ನು, ಗೌಡ ಸಮಾಜದ ಸಭೆ ನಡೆಸಲು ಸ್ಥಳಾವಕಾಶ ಮಾಡಿದವರನ್ನು, ಕಟ್ಟಡ ನಿರ್ಮಿಸಿದ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿದೆಡೆಗಳಿಂದ ಗೌಡ ಸಮುದಾಯಗಳ ವಿವಿಧ ಸಂಘಟನೆಗಳ ಆಡಳಿತ ಮಂಡಳಿ ಪದಾಧಿಕಾರಿಗಳು ಮತ್ತು ಚೇರಳ ಭಾಗದ ಸುತ್ತಮುತ್ತಲಿನ ಸಮುದಾಯ ಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. :: ಸಭಾ ಕಾರ್ಯಕ್ರಮ :: ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗೌಡ ಸಮುದಾಯ ಎಲ್ಲಾ ಕ್ಷೇತ್ರಗಳಿಗೂ ತನ್ನದೇ ಆದ ಕೊಡುಗೆ ನೀಡಿದೆ. ಸಮುದಾಯ ಭವನ ನಿರ್ಮಾಣ ಮಾಡುವುದರ ಮೂಲಕ ಈ ಗ್ರಾಮದ ಗೌಡ ಜನಾಂಗ ಭಾಂದವರ ಮೂಲ ಉದ್ದೇಶ ಈಡೇರಿದಂತಾಗಿದ್ದು, ಗೌಡರ ಅಸ್ತಿತ್ವ ಕಾಣುವಂತಾಗಿದೆ. ಈ ನೂತನ ಸಮುದಾಯ ಭವನ ಇಲ್ಲಿನ ಎಲ್ಲಾ ಜನಾಂಗದವರಿಗೂ ಸದುಪಯೋಗ ಆಗುವಂತಾಗಲಿ ಎಂದು ಆಶಿಸಿದರು. ಸ್ವಾಭಿಮಾನದ ಪ್ರತೀಕವಾಗಿ ಸ್ವಂತ ಕಟ್ಟಡವನ್ನು ಪ್ರಾರಂಭಿಸಿರುವುದು ಸಮುದಾಯಕ್ಕೆ ಹೆಮ್ಮೆಯ ಸಂಗತಿ. ಈ ಎಲ್ಲಾ ಕಾರ್ಯಗಳಿಗೆ ಸಮುದಾಯದ ಹಿರಿಯರ ಪೆÇ್ರೀತ್ಸಾಹ, ಸದಸ್ಯರೆಲ್ಲರ ಕಾರ್ಯ ಚಟುವಟಿಕೆ ಮುಖ್ಯ ಕಾರಣ. ಪ್ರತಿಯೊಬ್ಬ ನಾಗರಿಕನಿಗೆ ಆರ್ಥಿಕ ಚೈತನ್ಯ ನೀಡುವ ನಿಟ್ಟಿನಲ್ಲಿ ಸಮಾಜದ ಒಗ್ಗಟ್ಟು ಒಳಿತನ್ನು ಕೂಡ ಕಾಪಾಡುವ ಮತ್ತು ಸಾಂಪ್ರದಾಯಿಕ ಆಚಾರ ವಿಚಾರಗಳನ್ನು ಮೈಗೂಡಿಸಿಕೊಳ್ಳಲು ಈ ಸಮುದಾಯ ಒಕ್ಕೂಟ ಸಹಕಾರವಾಗಲಿ ಎಂದು ಆಶಯ ವ್ಯಕ್ತಪಡಿಸಿದರು. ಇಲ್ಲಿ ಎಲ್ಲರೂ ಹೊಂದಾಣಿಕೆಯಿಂದ ಬದುಕಬೇಕು. ವಿಶ್ವಾಸದಿಂದ ಕೆಲಸ ಮಾಡಿದ ಪರಿಣಾಮ ಇಲ್ಲಿ ಸಮುದಾಯ ಭವನ ಎದ್ದು ನಿಂತಿದೆ. ಇವರ ಪ್ರಯತ್ನವನ್ನು ಎಲ್ಲರೂ ಅಭಿನಂದಿಸಬೇಕಾಗಿದೆ. ಗೌಡ ಸಮುದಾಯ ಸಮಾಜದಲ್ಲಿರುವ ಇತರ ಸಮುದಾಯದೊಂದಿಗೆ ಸೌರ್ಹಾದತೆಯಿಂದ ಇದ್ದಾರೆ. ಇತರ ಸಮುದಾಯಗಳ ನಡುವೆ ಭಾವನಾತ್ಮಕ ಸಂಬಂಧ ಅಗತ್ಯ. ಜನಾಂಗದ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ನಾವು ಮಾಡಬೇಕು ಎಂದು ಹೇಳಿದರು. ಚೇರಳ ಗ್ರಾಮ ವಿಶ್ವಮಾನವ ಸಂದೇಶ ಸಾರುವಂತಾಗಬೇಕು ಎಂದರಲ್ಲದೆ ಸಮುದಾಯ ಭವನ ನಿರ್ಮಾಣದ ಜವಾಬ್ದಾರಿ ಹೊತ್ತು ಹಗಲು ರಾತ್ರಿ ಶ್ರಮಿಸಿದವರನ್ನು ಶ್ಲಾಘಿಸಿದರು. ವಿಧಾನಸಭಾ ಮಾಜಿ ಸಭಾಪತಿ ಕೆ.ಜಿ.ಬೋಪಯ್ಯ ಮಾತನಾಡಿ, ಸುಮಾರು 17 ವರ್ಷಗಳ ಸತತ ಪ್ರಯತ್ನದ ನಂತರ ನೂತನ ಭವ್ಯವಾದ ಸಮುದಾಯ ಭವನ ನಿರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ. ಸಮಾಜ, ಸಂಘಟನೆಗಳು ಇತರ ಜಾತಿಗಳೊಂದಿಗೆ ಸಂಘರ್ಷಕ್ಕಾಗಿಯೋ, ಸವಾಲಿಗಾಗಿಯೋ ಅಲ್ಲ. ಬದಲು ತಮ್ಮ ಆಚಾರ ವಿಚಾರಗಳನ್ನು ಉಳಿಸುತ್ತಾ ಸಮಾಜದಲ್ಲಿ ಸೌಹಾರ್ದತೆಯಿಂದ ಕೂಡಿ ಬಾಳಿ ಬದುಕುವುದಕ್ಕಾಗಿ. ತಮ್ಮ ಆಚಾರ, ವಿಚಾರ ಪದ್ದತಿ ಪರಂಪರೆಯನ್ನು ಉಳಿಸಿ ಬೆಳೆಸುವುದಕ್ಕಾಗಿ. ಇಲ್ಲಿ ಸೇರಿರುವ ಪ್ರತಿಯೊಬ್ಬರು ತಮ್ಮ ಸಾಂಪ್ರಾದಾಯಿಕ ಉಡುಪಿನಲ್ಲಿ ಭಾಗವಹಿಸಿ ಜನಾಂಗದ ಹಿರಿಮೆಯನ್ನು ಕಾಪಾಡಿದಂತಾಗಿದೆ. ಇದು ಎಲ್ಲ ಸಮಾಜದವರಿಗೂ ಮಾದರಿಯಾಗಿದೆ ಎಂದರಲ್ಲದೆ ನಮ್ಮ ಸಂಪ್ರದಾಯದ ಬೆಳವಣಿಗೆಗೆ ಪೂರಕವಾಗಿ ಸಮುದಾಯ ಭವನ ತಲೆಯೆತ್ತಿದೆ. ಇದು ಇಲ್ಲಿನ ಎಲ್ಲಾ ಸಮುದಾಯ ಬಾಂದವರಿಗೂ ದೊರಕುವಂತಾಗಿ, ಸಹಬಾಳ್ವೆಯಿಂದ ಜೀವನ ಸಾಗಿಸುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಮಾಜಿ ಸಚಿವ ಮಂಡೇಪಂಡ ಪಿ.ಅಪ್ಪಚ್ಚುರಂಜನ್ ಮಾತನಾಡಿ, ಗೌಡ ಮತ್ತು ಕೊಡವ ಸಮುದಾಯದ ನಡುವೆ ಉತ್ತಮ ಬಾಂಧವ್ಯವಿದ್ದು, ಮದುವೆಯಂತಹ ಸಂಬಂಧಗಳಿವೆ. ಹಾಗಿರುವಾಗ ನಾವೆಲ್ಲರೂ ಒಗ್ಗಟ್ಟಾಗಿ ಬದುಕಬೇಕು ಎಂದು ಹೇಳಿದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ ಮಾತನಾಡಿ, ಗೌಡ ಸಮಾಜದ ನೂತನ ಕಟ್ಟಡ ಕಾಮಗಾರಿ ನಡೆದುಬಂದ ಹಾದಿ ಬಗ್ಗೆ ವಿವರಿಸಿದರಲ್ಲದೆ, ಪ್ರತಿಯೊಬ್ಬರೂ ತಮ್ಮಿಂದ ಆದಷ್ಟು ಅಳಿಲು ಸೇವೆಯನ್ನು ಸಮಾಜದ ಉಳಿವಿಗಾಗಿ ಮಾಡಬೇಕು. ದಾನ ಮಾಡಿದರೆ ಮಾತ್ರ ಸಮಾಜ ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಇಂದಿನಿಂದಲೇ ಎಲ್ಲರೂ ಒಂದಷ್ಟು ಹಣವನ್ನು ಸಮಾಜದ ಏಳಿಗೆಗೆ ಮೀಸಲಿಡುವಂತೆ ಕರೆ ನೀಡಿದರು. ಉಪಾಧ್ಯಕ್ಷ ಡಾ.ತೇನನ ರಾಜೇಶ್ ಮಾತನಾಡಿ, ಕೆದಂಬಾಡಿ ರಾಮಯ್ಯ ಮತ್ತು ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡ ಅವರ ಪೋಟೋವನ್ನು ಸಮುದಾಯ ಭವನದಲ್ಲಿ ಅಳವಡಿಸುವಂತೆ ತಿಳಿಸಿದರು. ಗೌಡ ಸಮುದಾಯದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದರ ಜೊತೆಗೆ ನಮ್ಮಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಇದರ ಬಗ್ಗೆ ಜಾಗೃತಿ ಮೂಡಬೇಕು ಎಂದರು. ಕೊಡಗು ಗೌಡ ಸಮಾಜದ ಮಾಜಿ ಅಧ್ಯಕ್ಷ ಪೇರಿಯನ ಜಯಾನಂದ ಅವರು ನೂತನ ಸಮುದಾಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿ.ಪಂ ಮಾಜಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಮಾತನಾಡಿ, ಶ್ರಮಜೀವಿಗಳಾದ ಗೌಡ ಜನಾಂಗ ಬಾಂಧವರು ತಮ್ಮ ಕನಸನ್ನು ಸಾಕಾರಗೊಳಿಸಿದ್ದಾರೆ. ತಮ್ಮಲ್ಲಿರುವ ತುಂಡುಭೂಮಿಯನ್ನು ಇತರರಿಗೆ ಮಾರಿ ಬೆಂಗಳೂರಿಗೆ ಹತ್ತುವವರ ಮಧ್ಯೆ ತಮಗೆ ಇರುವ ಭೂಮಿಯನ್ನು ರಕ್ಷಣೆ ಮಾಡಿಕೊಂಡು ತಮ್ಮ ಆಚಾರ, ವಿಚಾರವನ್ನು ಪಾಲಿಸಿಕೊಂಡು ಸಂಸ್ಕøತಿ ಉಳಿವಿಗೆ ಕಾರಣರಾಗಿದ್ದಾರೆ ಎಂದರು. ಚೇರಳ ಗೌಡ ಸಮಾಜದ ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದಾನಿಗಳು, ಸಮಾಜದ ಬಾಂಧವರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ನೂತನ ಸಮುದಾಯ ಭವನವನ್ನು ಎಲ್ಲಾ ಮೂಲಭೂತ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ. 1.75 ಕೋಟಿ ರೂ. ವೆಚ್ಚದ ಕಟ್ಟಡ ಇದಾಗಿದ್ದು, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 5 ಗ್ರಾಮಗಳ ಪೈಕಿ ಚೇರಳ ಗ್ರಾಮದ ಆಗ್ನೇಯ ಭಾಗದಲ್ಲಿ ನೆಲೆಸಿರುವ 22 ಕುಟುಂಬದ ಗೌಡ ಸಮುದಾಯದ ಸಮಾನ ಮನಸ್ಕ ಬಂಧುಗಳು 2008ರಲ್ಲಿ ಮರದಾಳು ದೊಡ್ಡ ಮನೆಯಲ್ಲಿ ಸಭೆ ಸೇರಿ ಒಂದು ಸಂಘವನ್ನು ರಚಿಸಲಾಯಿತು. ಇದಕ್ಕೆ ಚೇರಳ ಗೌಡ ಸಂಘ ಎಂದು ಹೆಸರಿಡಲಾಯಿತು ಎಂದು ಸ್ಮರಿಸಿದರು. ವೇದಿಕೆಯಲ್ಲಿ ಕೊಂಬಾರನ ಕುಂತಿ ಬೋಪಯ್ಯ, ಕಾಫಿ ಬೆಳೆಗಾರ ಮರದಾಳು ಬಸಪ್ಪ ಹಾಜರಿದ್ದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ವಿಶೇಷ ಸಲಹೆಗಾರರಾದ ಮೇಚನ ವಾಸು, ಖಜಾಂಚಿ ಮುಕ್ಕಾಟಿರ ಪಳಂಗಪ್ಪ, ಉಪ ಕಾರ್ಯದರ್ಶಿಗಳಾದ ಮರದಾಳು ಜನರ್ದಾನ, ನೂಜಿಬೈಲು ನಾಣಯ್ಯ, ಸಂಘಟನಾ ಕಾರ್ಯದರ್ಶಿ ಪೇರಿಯನ ಪೂಣಚ್ಚ, ಉಪ ಖಜಾಂಚಿ ಪೇರಿಯನ ಉದಯಕುಮಾರ್, ನಿರ್ದೆಶಕರುಗಳಾದ ಮರದಾಳು ಗೋಪಾಲ, ಸಿದ್ದಿಕಲ್ಲು ದಿನೇಶ್ ಕುಮಾರ್, ನೂಜಿಬೈಲು ಕೆಂಚಪ್ಪ, ಮರದಾಳು ಉಲ್ಲಾಸ, ಕೊಂಬನ ಶೇಖರ, ಕಲ್ಪಡ ಶೋಭ, ಅಮ್ಮವನ ಲೀಲಾವತಿ, ಗುಡ್ಡಂಡ್ರ ಬಿದ್ದಪ್ಪ, ಕಡ್ಯದ ಉದಯಕುಮಾರ್, ಕೊಳಂಬೆರ ಆನಂದ, ನೂಜಿಬೈಲು ಅರುಣಾಕ್ಷಿ, ಕೊಳಂಬೆರ ಸುಬ್ರಮಣಿ, ಮರದಾಳು ಚೇತನ್, ಬಾಡನ ಪೊನ್ನಪ್ಪ, ಮರದಾಳು ತೇಜಸ್, ನೂಜಿಬೈಲು ಜಗತ್, ಮರದಾಳು ಭವನ್, ಪದೋಳಿ ರಮ್ಯ ಸೇರಿದಂತೆ ಅಂಬೆಕಲ್ ನವೀನ್, ಮುಕ್ಕಾಟಿರ ವಿನಿತ, ನೂಜಿಬೈಲು ತುಳಸಿಮಣಿ, ನೂಜಿಬೈಲು ರಿತೀಶ್ ಇದ್ದರು. ಖಜಾಂಚಿ ಪೇರಿಯನ ಉದಯ ಹಾಗೂ ಕಾರ್ಯದರ್ಶಿ ಆಜೀರ ಧನಂಜಯ ಕಾರ್ಯಕ್ರಮ ನಿರ್ವಹಿಸಿದರು.











