
ಮಡಿಕೇರಿ ಮಾ.16 NEWS DESK : ದಕ್ಷಿಣ ಕೊಡಗಿನ ತಿತಿಮತಿ ಬಳಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಜಿಲ್ಲಾ ಪೊಲೀಸರು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಚೆನ್ನಯ್ಯನಕೋಟೆಯ ಕೆ.ಎಂ.ಉಬೈದ್(36), ಕೇರಳದ ಮಾನಂದವಾಡಿಯ ಕಾಟಿಕೊಳಂನ ಅಬ್ದುಲ್ ರೆಹಮಾನ್.ಪಿ, (34) ಹಾಗೂ ನಾಪೋಕ್ಲು ಸಮೀಪದ ಕೊಟ್ಟಮುಡಿಯ ಪಿ.ಎಂ.ಮುಜೀಬ್(36) ಬಂಧಿತ ಆರೋಪಿಗಳು. ಬಂಧಿತರಿಂದ 1,43,500 ರೂ. ನಗದು, ಮಹೀಂದ್ರ ಸ್ಕಾರ್ಪಿಯೋ, ಮಹೀಂದ್ರ ಬೊಲೇರೋ ಪಿಕ್‍ಅಪ್, ಚವರ್ ಲೆಟ್ ವಾಹನ ಹಾಗೂ 2 ಎತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಬಿಳಿಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2 ಎತ್ತುಗಳನ್ನು ಹಾಗೂ ಹುಣಸೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹೀಂದ್ರ ಬೊಲೆರೋ ವಾಹನವನ್ನು ಕಳವು ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ. ತಿತಿಮತಿ ಉಪಠಾಣೆ ಸಮೀಪ ಹೆದ್ದಾರಿಯಲ್ಲಿ ಅಕ್ರಮವಾಗಿ ದನ ಸಾಗಾಟ ಮಾಡುತ್ತಿರುವ ಕುರಿತು ದೊರೆತ ಮಾಹಿತಿ ಮೇರೆಗೆ ಪೊಲೀಸರು ವಾಹನ ತಪಾಸಣೆ ನಡೆಸಿದರು. ಈ ಸಂದರ್ಭ ಒಂದು ಕಾರನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು, ಸದರಿ ವಾಹನವನ್ನು ಪರಿಶೀಲಿಸಿದಾಗ ಎರಡು ಎತ್ತುಗಳನ್ನು ಸಾಗಿಸುತ್ತಿರುವುದು ಕಂಡು ಬಂದಿತ್ತು. ಈ ಬಗ್ಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ, ಹಿಂಸೆ ನಿಷೇಧ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವಿರಾಜಪೇಟೆ ಉಪ ವಿಭಾಗದ ಡಿವೈಎಸ್‍ಪಿ ಮಹೇಶ್ ಕುಮಾರ್, ಗೋಣಿಕೊಪ್ಪಲು ಸಿಪಿಐ ಶಿವರಾಜ್ ಆರ್.ಮುಧೋಳ್, ಗೋಣಿಕೊಪ್ಪಲು ಪಿಎಸ್‍ಐ ಪ್ರದೀಪ್ ಕುಮಾರ್ ಬಿ.ಕೆ., ಪೊನ್ನಂಪೇಟೆ ಠಾಣಾ ಪಿಎಸ್‍ಐ ನವೀನ್ ಜಿ. ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.









