ವಿರಾಜಪೇಟೆ, NEWS DESK ಮಾ.17: ಪಟ್ಟಣದ ಶ್ರೀ ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನಕ್ಕೆ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ವತಿಯಿಂದ ಸುಮಾರು ಒಂದು ಲಕ್ಷದ ಇಪ್ಪತ್ತು ಸಾವಿರ ರುಪಾಯಿ ಮೌಲ್ಯದ ಬೃಹತ್ ಅನ್ನ ಶೇಖರಿಸುವ ಸ್ಟೀಲ್ ಪಾತ್ರೆಯನ್ನು ಉದಾರವಾಗಿ ನೀಡಲಾಯಿತು. ವರ್ಷಂಪ್ರತಿ ಜರುಗುವ ಶ್ರೀ ಮುತ್ತಪ್ಪ ತೆರೆ ಮಹೋತ್ಸವದಲ್ಳಿ ದಾಸೋಹದ ಸೇವೆಗೆ ಉಪಯೋಗವಾಗುವ ನಿಟ್ಟಿನಲ್ಲಿ ಈ ಕೊಡುಗೆಯನ್ನು ದೇವಸ್ಥಾನಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಶ್ರೀ ಮುತ್ತಪ್ಪ ಮಲಯಾಳಿ ಸಮಾಜದ ಅಧ್ಯಕ್ಷರಾದ ಪಿ. ಜಿ. ಸುಮೇಶ್ ರವರು ಪಾತ್ರೆಯನ್ನು ಶ್ರೀ ಮುತ್ತಪ್ಪ ದೇವಸ್ಥಾನದ ಅಧ್ಯಕ್ಷರಾದ ಟಿ.ಕೆ.ರಾಜನ್ ರವರಿಗೆ ಹಸ್ತಾಂತರಿಸಿ ಮಾತನಾಡಿ 82 ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವವನ್ನು ಈ ಭಾರಿ ಆಚರಿಸುತ್ತಿದ್ದು ಪೂಜಾ ಕಾರ್ಯಕ್ರಮದ ಬಳಿಕ ಎಂಟರಿಂದ ಹತ್ತು ಕ್ವಿಂಟಾಲ್ ಅಕ್ಕಿ ಯಲ್ಲಿ ತಯಾರಿಸಿದ ಅನ್ನ ಸಂತರ್ಪಣ ಸೇವೆಯು ನಡೆಯಲಿದ್ದು ಅದಕ್ಕೆ ಸಹಕಾರಿಯಾಗಲೆಂದು ನಮ್ಮ ಸಂಘದ ಸರ್ವ ಸದಸ್ಯರ ಸಹಕಾರದಿಂದ ಹಾಗೂ ನನ್ನ ಆತ್ಮೀಯರಾದ ಚಿರಿಯಪಂಡ ಸುರೇಶ್ ನಂಜಪ್ಪ, ಮಾಲೆಟಿರ ಚುಕ್ಕು ದೇವಯ್ಯ , ಬಲ್ಲಚಂಡ ಸೃಜನ್ ಮತ್ತು ಮುಕ್ಕಾಟೀರ ಬೋಪಣ್ಣ ರವರ ಸಹಕಾರದಿಂದ ಈ ಕೊಡುಗೆಯನ್ನು ನೀಡಲಾಗಿದೆ ಎಂದರು. ಅದೇ ರೀತಿ ಮೂರು ದಿವಸಗಳ ಕಾಲ ಜರುಗುವ ಶ್ರೀ ಮುತ್ತಪ್ಪ ತೆರೆ ಮಹೋತ್ಸವದಲ್ಲಿ ಪಾಲ್ಗೊಂಡು ತೀರ್ಥ ಪ್ರಸಾದವನ್ನು ಪಡೆದುಕೊಂಡು ದೇವರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಮುತ್ತಪ್ಪ ಮಲಯಾಳಿ ಸಮಾಜದ ಸರ್ವ ಪದಾಧಿಕಾರಿಗಳು ಮತ್ತು ಚೈತನ್ಯ ಮಠಪುರ ಮುತ್ತಪ್ಪ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.








