
ವಿರಾಜಪೇಟೆ ಮಾ.17 NEWS DESK : ವಿರಾಜಪೇಟೆಯ ಮೀನುಪೇಟೆಯಲ್ಲಿರುವ ಚೈತನ್ಯ ಮಠಪುರ ಶ್ರೀ ಮುತ್ತಪ್ಪ ದೇವಾಲಯದ ವತಿಯಿಂದ ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ 82ನೇ ವರ್ಷದ ಶ್ರೀ ಮುತ್ತಪ್ಪ ತೆರೆ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಮಾ.19ರ ವರೆಗೆ ಮೂರು ದಿನಗಳ ಕಾಲ ಮಹೋತ್ಸವವು ನಡೆಯಲಿದೆ. ಗಣಪತಿ ಹೋಮದೊಂದಿಗೆ ತೆರೆ ಮಹೋತ್ಸವಕ್ಕೆ ಚಾಲನೆ ದೊರೆಯಿತು. ಬಳಿಕ ದೇವಾಲಯದ ಆವರಣದಲ್ಲಿರುವ ಧ್ವಜಸ್ಥಂಭದಲ್ಲಿ ಧ್ವಜಾರೋಹಣ ನೆರವೇರಿತು. ಸಂಜೆ ಶ್ರೀ ಮುತ್ತಪ್ಪ ದೇವರ ವೆಳ್ಳಾಟಂ ನಡೆಯಿತು. ಈ ಸಂದರ್ಭ ಶ್ರೀ ಮುತ್ತಪ್ಪ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ಶ್ರೀ ಮುತ್ತಪ್ಪ ಮಲಯಾಳಿ ಸಂಘದ ಸದಸ್ಯರು ಸೇರಿದಂತೆ ಭಕ್ತಾಧಿಗಳು ಇದ್ದರು. ಮಾ.18 ರಂದು ಮಧ್ಯಾಹ್ನ 2 ಗಂಟೆಗೆ ದೇವರ ಮಲೆ ಇಳಿಸುವುದು, ಸಂಜೆ 5 ಗಂಟೆಗೆ ಶ್ರೀ ಮುತ್ತಪ್ಪ ವೆಳ್ಳಾಟ ನಡೆಯಲಿದೆ. ಸಂಜೆ 5.30 ಗಂಟೆಗೆ ಮೊದಕಲಶದೊಂದಿಗೆ ತಾಲಪೋಲಿ ಮೆರವಣಿಗೆ, ಕಾಳಿಂಗ ಕಲಾ ಸಮಿತಿಯವರ ಸಿಂಗಾರಿ ಮೇಳ ಹಾಗೂ ತತ್ವಮಸಿ ಸಹಸ್ರ ವೆಳಕಾಟ್ಟಂ ಚಂಡೆಮೇಳದೊಂದಿಗೆ, ಮಹಿಳೆಯರ ತಾಲಪ್ಪೊಲಿ ಮೆರವಣಿಗೆಯು ತೆಲುಗರ ಬೀದಿಯಿಂದ ಹೊರಟು, ಮುಖ್ಯ ಬೀದಿಗಾಗಿ 8 ಗಂಟೆಗೆ ಶ್ರೀ ಮುತ್ತಪ್ಪ ದೇವಸ್ಥಾನಕ್ಕೆ ತಲುಪಲಿದೆ. ಸಂಜೆ 6 ಗಂಟೆಯಿಂದ ಕುಟ್ಟಿಚಾತನ್, ಗುಳಿಗನ್, ವಸೂರಿಮಾಲ, ಪೋದಿ, ವಿಷ್ಣುಮೂರ್ತಿ ವೆಳ್ಳಾಟಂ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಭಾಗವಹಿಸಲಿದ್ದಾರೆ. ರಾತ್ರಿ 8 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ. ಮಾ.19 ರಂದು ಗುರುವಾರ ಪ್ರಾತಃಕಾಲ 1 ಗಂಟೆಗೆ ಶಾಸ್ತಪ್ಪನ್ ಹಾಗೂ ಗುಳಿಗನ ಕೋಲ, 4 ಗಂಟೆಗೆ ತಿರುವಪ್ಪನ್, ಬೆಳಿಗ್ಗೆ 8 ಗಂಟೆಗೆ ಭಗವತಿ(ಪೋದಿ), 10 ಗಂಟೆಗೆ ವಸೂರಿಮಾಲ, 11 ಗಂಟೆಗೆ ವಿಷ್ಣುಮೂರ್ತಿ, 12 ಗಂಟೆಗೆ ಅನ್ನ ಸಂತರ್ಪಣೆ ಅಪರಾಹ್ನ 3 ಗಂಟೆಗೆ ವಿಷ್ಣುಮೂರ್ತಿ ವಾರಣದೊಂದಿಗೆ 2026 ನೇ ಸಾಲಿನ ಉತ್ಸವ ಮುಕ್ತಾಯಗೊಳ್ಳಲಿದೆ.









