
ಮಡಿಕೇರಿ NEWS DESK ಮಾ.20 : ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವಶದಲ್ಲಿರುವ ಭಾಗಮಂಡಲ ತಲಕಾವೇರಿ ದೇವಸ್ಥಾನ ಮತ್ತು ಅಂಜನಗೇರಿ ಬೆಟ್ಟಗೇರಿ ಗ್ರಾಮದ ಶ್ರೀ ಬೆಳ್ಳಾರಿಕಮ್ಮ ದೇವಾಲಯಕ್ಕೆ ಸೇರಿದ ಒತ್ತುವರಿಯಾಗಿರುವ ಜಾಗವನ್ನು, ಆಯಾ ಒತ್ತುವರಿದಾರರು ಸ್ವಯಂ ಇಚ್ಛೆಯಿಂದ ತೆರವುಗೊಳಿಸಬೇಕೆಂದು ಕೊಡಗು ಏಕೀಕರಣ ರಂಗ ಮನವಿ ಮಾಡಿದೆ. ಸುದ್ದಿಗೋಷ್ಠಿಯಲ್ಲಿ ಕೊಡಗು ಏಕೀಕರಣ ರಂಗದ ಪ್ರಮುಖರಾದ ಮಂದಪoಡ ಕೆ.ಅಪ್ಪಚ್ಚು ಅವರು ಮಾತನಾಡಿ, ಈ ಎರಡೂ ದೇವಸ್ಥಾನಗಳ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಸಮುದಾಯಗಳ ಸಮಾಜಕ್ಕೆ ಸಂಘಟನೆಯ ಮೂಲಕ ಪತ್ರವನ್ನು ಬರೆದು, ಒತ್ತುವರಿದಾರರ ಮನವೊಲಿಸಿ ದೇವಸ್ಥಾನದ ಜಾಗವನ್ನು ತೆರವು ಮಾಡುವಂತೆ ಕೇಳಿಕೊಳ್ಳಲಾಗಿದೆಯೆಂದು ತಿಳಿಸಿದರು. ಸಂಘಟನೆಯ ಮನವಿಗೆ ಸ್ಪಂದಿಸಿ ಒತ್ತುವರಿದಾರರು, ಒತ್ತುವರಿಯನ್ನು ತೆರವುಗೊಳಿಸಲಿ. ಇಲ್ಲವಾದಲ್ಲಿ ಸರ್ಕಾರದ ಮೂಲಕ ಒತ್ತುವರಿ ತೆರವಿನ ಪ್ರಕ್ರಿಯೆಗಳು ನಡೆಯಬೇಕೆಂದು ತಿಳಿಸಿದ ಅವರು, ಶ್ರೀ ಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯದ ಜಮೀನು ಮತ್ತು ಅಂಜನಗೇರಿ ಬೆಟ್ಟಗೇರಿ ಗ್ರಾಮದ ಶ್ರೀ ಬೆಳ್ಳಾರಿಕಮ್ಮ ದೇವಾಲಯದ ದೇವರಕಾಡು ಒತ್ತುವರಿಯಾಗಿ, ಕಾಫಿ ತೊಟಗಳಾಗಿ, ರೆಸಾರ್ಟ್ಗಳಾಗಿ ಬದಲಾಗುತ್ತಿದ್ದರು ಕ್ರಮ ಕೈಗೊಳ್ಳದ ಶ್ರೀ ಭಗಂಡೇಶ್ವರ ತಲಕಾವೇರಿ ದೇವಾಲಯದ ಕಾರ್ಯನಿರ್ವಹಣಾಧಿಕಾರಿ, ಕುಶಾಲನಗರ ಪ್ರಾದೇಶಿಕ ವಲಯದ ಅರಣ್ಯಾಧಿಕಾರಿ, ದೇವಾಲಯದ ಜಾಗದಲ್ಲಿ ರೆಸಾರ್ಟ್ ನಿರ್ಮಿಸಲು ಅನುಮತಿ ನೀಡಿದ ಭಾಗಮಂಡಲ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು. ಮಾಯವಾದ ಕಡತ-ಕೊಡಗು ಏಕೀಕರಣ ರಂಗವು 2012-13ನೇ ಸಾಲಿನಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ವಶದಲ್ಲಿರುವ ದೇವಾಲಯಗಳ ಜಮೀನಿನ ಒತ್ತುವರಿ ತೆರವಿಗೆ ಮನವಿ ಮಾಡಿತ್ತು, ಈ ಬಗ್ಗೆ ಭೂ ಮಾಪನ ಇಲಾಖೆ ಸಮಗ್ರವಾದ ವರದಿ ಸಲ್ಲಿಸಿತ್ತು. ಈ ವರದಿಯಂತೆ ಭಾಗಮಂಡಲ ತಲಕಾವೇರಿ ದೇವಸ್ಥಾನದ ಒತ್ತುವರಿ ತೆರವಿಗೆ ಸಂಘಟನೆ ಸರ್ಕಾರಕ್ಕೆ ಆಗ್ರಹಿಸಿತ್ತು. ಆದರೆ, ಪಟ್ಟಭದ್ರರ ಗುಂಪು ಆ ಕಡತವನ್ನೆ ಇಲ್ಲದಂತೆ ಮಾಡಿತ್ತೆಂದು ಮಂದಪoಡ ಕೆ. ಅಪ್ಪಚ್ಚು ತಿಳಿಸಿದರು. ಆ ಬಳಿಕ 2023 ರ ಜ.23 ರಂದು ಸಂಘಟನೆ ಲೋಕಾಯುಕ್ತಕ್ಕೆ ನೀಡಿದ ದೂರಿನ ಹಿನ್ನೆಲೆ, ಲೋಕಾಯುಕ್ತ ನೀಡಿದ ಸೂಚನೆಗಳಂತೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಭಾಗಮಂಡಲ, ತಾವೂರು ಮತ್ತು ತಣ್ಣಿಮಾನಿಯಲ್ಲಿ ಸರ್ವೇ ಮಾಡಿ, ಒತ್ತುವರಿ ಜಾಗವನ್ನು ಗುರುತಿಸಿತ್ತೆಂದು ಮಾಹಿತಿಯನ್ನಿತ್ತರು.
ಒತ್ತುವರಿ ಆದದ್ದೆಷ್ಟು- ಭಾಗಮಂಡಲ ಮತ್ತು ತಲಕಾವೇರಿ ದೇಗುಲಗಳಿಗೆ ಸಂಬoಧಿಸಿದoತೆ ಭಾಗಮಂಡಲ, ತಣ್ಣಿಮಾನಿ, ತಾವೂರು, ಚೇರಂಗಾಲ ಗ್ರಾಮಗಳಲ್ಲಿ ಒಟ್ಟು 158.27 ಏಕರೆ ಪ್ರದೇಶ ಒತ್ತುವರಿಯಾಗಿದ್ದರೆ, ಅಂಜನಗೇರಿ ಬೆಟ್ಟಗೇರಿ ಗ್ರಾಮದ ಶ್ರೀ ಬೆಳ್ಳಾರಿಕಮ್ಮ ದೇವಾಲಯಕ್ಕೆ ಸೇರಿದ ಜಮೀನಿನಲ್ಲಿ 12.51 ಏಕರೆ ಜಾಗ ಒತ್ತುವರಿಯಾಗಿರುವುದಾಗಿ ಮಾಹಿತಿ ನೀಡಿ, ಇದನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
15 ಸಾವಿರದಿಂದ 5 ಸಾವಿರಕ್ಕೆ… ಕೊಡಗು ಏಕೀಕರಣ ರಂಗದ ಪ್ರಮುಖರಾದ ತಮ್ಮು ಪೂವಯ್ಯ ಮಾತನಾಡಿ, 1900 ರಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ದೇವಾಲಯಗಳಿಗೆ ಸಂಬoಧಿಸಿದ 15 ಸಾವಿರ ಏಕರೆ ಜಾಗವಿತ್ತು, ಈ ಜಾಗ ನಂತರದ ವÀರ್ಷಗಳಲ್ಲಿ ಕಂದಾಯ ಇಲಾಖೆಯ ವ್ಯಾಪ್ತಿಗೆ ಒಳಪಡುವುದರೊಂದಿಗೆ 5 ಸಾವಿರ ಏಕರೆಗೆ ಕುಸಿಯಿತು. 1994 ರಲ್ಲಿ ದೇವರಕಾಡುಗಳನ್ನು ರಕ್ಷಿತಾರಣ್ಯವೆಂದು ಪರಿಗಣಿಸಲಾಗಿದ್ದು, ಲಭ್ಯವಿರುವ ದೇವರಕಾಡನ್ನು ಸಂರಕ್ಷಿಸುವುದರೊoದಿಗೆ, ಒತ್ತುವರಿಯನ್ನು ತೆರವು ಮಾಡಬೇಕಾಗಿದೆಯೆಂದು ತಿಳಿಸಿದರು. ಗೋಷ್ಠಿಯಲ್ಲಿ ಸಂಗಟನೆಯ ತೇಲಪಂಡ ಪ್ರಮೋದ್ ಸೋಮಯ್ಯ ಉಪಸ್ಥಿತರಿದ್ದರು.








