
ಕುಶಾಲನಗರ ಮಾ.21 NEWS DESK : ಕೂಡಿಗೆ ಕ್ಲಸ್ಟರ್ ಕೇಂದ್ರ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಗೊಂಡ ಶಿಕ್ಷಕರನ್ನು ಕ್ಲಸ್ಟರ್ ಕೇಂದ್ರ ಹಾಗೂ ಸರ್ಕಾರಿ ಶಾಲಾ ಶಿಕ್ಷಕರ ಬಳಗದ ವತಿಯಿಂದ ಕೂಡುಮಂಗಳೂರು ಸಮೀಪದ ವಿಜಯನಗರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಸಮಾರಂಭದಲ್ಲಿ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು. ನಿವೃತ್ತಗೊಂಡ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಉಪನ್ಯಾಸಕ ಎಂ.ಎಂ.ಸತೀಶ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಜೇನುಕಲ್ಲುಬೆಟ್ಟ ಶಾಲೆಯ ಶಿಕ್ಷಕ ಎಂ.ಎನ್.ರಾಮೇಗೌಡ, ಕೂಡುಮಂಗಳೂರು ಶಾಲೆಯ ಶಿಕ್ಷಕಿ ಎ. ಭೋಜಮ್ಮ, ಸೀಗೆಹೊಸೂರು ಶಾಲೆಯ ಶಿಕ್ಷಕಿ ಟಿ.ಎಸ್.ವಿನೋದ, ಚಿಕ್ಕತ್ತೂರು ಶಾಲೆಯ ಶಿಕ್ಷಕ ಎಚ್.ಎಂ.ಪ್ರಕಾಶ್ , ದೊಡ್ಡತ್ತೂರು ಶಾಲೆಯ ಶಿಕ್ಷಕ ಎಸ್. ಸಿ.ಗೋವಿಂದರಾಜ್ ಸೇರಿದಂತೆ ಇದೇ ವೇಳೆಯಲ್ಲಿ ಕೂಡಿಗೆ ಕ್ಲಸ್ಟರ್ ವ್ಯಾಪ್ತಿಯ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಇದೀಗ ಬೇರೆ ಕ್ಲಸ್ಟರ್ ಗಳ ಶಾಲೆಗಳಿಗೆ ವರ್ಗಾವಣೆಗೊಂಡಿರುವ ಎಸ್.ಆರ್.ಸುನಿತ, ಕೆ.ವಿ.ಕಮಲ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಶುಭಾಶಯಗಳನ್ನು ಕೋರಲಾಯಿತು. ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಸ್.ಎ.ಯೋಗೇಶ್, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಶಿಕ್ಷಕರ ಪಾತ್ರ ದೊಡ್ಡದು, ಇಂದಿನ ಶಿಕ್ಷಣ ಪದ್ಧತಿ ಸಾಕಷ್ಟು ಬದಲಾಗಿದೆ. ಮಕ್ಕಳಿಗೆ ಶಿಕ್ಷಿಸದೇ ಪಾಠ ಮಾಡಬೇಕು ಎಂದು ಪಾಲಕರು ತಾಕೀತು ಮಾಡುತ್ತಿರುವುದು ಮಕ್ಕಳಿಗೆ ಪಾಠ ಮಾಡುವುದೇ ಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ.
ಆದರೂ, ಶಿಕ್ಷಕರು ಶಿಕ್ಷಣ ಇಲಾಖೆಯ ನಿಯಮದಡಿ ಮತ್ತು ಹಲವು ಕಾರ್ಯಕ್ರಮಗಳ ಒತ್ತಡದ ನಡುವೆ ಹಲವಾರು ಸವಾಲುಗಳನ್ನು ಎದುರಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಹೆಮ್ಮೆಯ ವಿಷಯ ಎಂದರು. ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿ ಕೂಡ ಉತ್ತಮವಾಗಿದೆ. ಈ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯನ್ನು ವೃದ್ಧಿಸುವುದರೊಂದಿಗೆ ಸರ್ಕಾರಿ ಶಾಲೆಗಳ ಸಬಲೀಕರಣ ಮಾಡಬೇಕಾಗಿರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಸ್.ಪ್ರಸನ್ನ ಮಾತನಾಡಿ, ಈ ಕ್ಲಸ್ಟರ್ ನಲ್ಲಿ ಶಿಕ್ಷಕರು ಜತೆಗೂಡಿ ಶಿಕ್ಷಕರ ಅವಿಸ್ಮರಣೀಯ ಸೇವೆಯನ್ನು ಶ್ಲಾಘಿಸಿ ನಿವೃತ್ತ ಶಿಕ್ಷಕರನ್ನು ಆತ್ಮೀಯವಾಗಿ ಬೀಳ್ಕೊಡುತ್ತಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು. ಮಕ್ಕಳಿಗೆ ಪಾಠ ಹೇಳಿ, ಮಕ್ಕಳ ಬದುಕಿಗೆ ಬೆಳಕಾದ ಶಾಲೆ ಶಿಕ್ಷಕರನ್ನು ಎಂದಿಗೂ ಮರೆಯಬಾರದು. ಜೀವನದ ಕೊನೆ ಕ್ಷಣದವರೆಗೂ ಅವರಿಗೆ ಋಣಿಗಳಾಗಬೇಕು ಎಂದರು. ಸನ್ಮಾನಿತರಾದ ನಿವೃತ್ತ ಉಪನ್ಯಾಸಕ ಎಂ.ಎಂ.ಸತೀಶ್ ಮಾತನಾಡಿ, ಶಿಕ್ಷಕರು ಉತ್ತಮ ಸಂಸ್ಕಾರ ನೀಡಿ ಮಕ್ಕಳ ಉಜ್ವಲ ಭವಿಷ್ಯ ರೂಪಿಸುತ್ತಾರೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲೂ ಶಿಕ್ಷಕರ ಪಾತ್ರ ಅವಿಸ್ಮರಣೀಯ ಎಂದರು. ಸಿ.ಆರ್.ಪಿ.ಕೆ.ಶಾಂತಕುಮಾರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಶಿಕ್ಷಕರು ಮತ್ತು ಪಾಲಕರ ಸಂಬಂಧ ಉನ್ನತೀಕರಣಗೊಂಡು ಮಕ್ಕಳ ಶೈಕ್ಷಣಿಕ ಪ್ರಗತಿ ಉತ್ತಮಗೊಳ್ಳಲು ಸಂಘಟಿತ ಪ್ರಯತ್ನ ಎಂದರು. ತಾಲ್ಲೂಕು ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಿವಶಂಕರ್, ವಿವಿಧ ಶಾಲಾ ಮುಖ್ಯ ಶಿಕ್ಷಕರಾದ ಎಚ್.ಎಸ್.ಸುಜಾತ, ಕೆ.ಡಿ.ನವೀನ, ಸಣ್ಣಕ್ಕ, ರಾಜಣ್ಣ, ಎನ್.ಡಿ.ಚಂದ್ರಿಕ, ರೇಣುಕ , ಶಿಕ್ಷಕಿ ಎಚ್.ವಿ.ಲತಾಮಣಿ ಅನಿಸಿಕೆ ವ್ಯಕ್ತಪಡಿಸಿದರು. ಶಾಲಾ ಶಿಕ್ಷಕರು ಇದ್ದರು. ತಾವು ಪ್ರೌಢಶಾಲೆಯ ಶಿಕ್ಷಕರಾಗಿ ಹಾಗೂ ಬಿ.ಆರ್.ಸಿ.ಕೇಂದ್ರದಲ್ಲಿ ಸೇವೆ ಸಲ್ಲಿಸಿದ ಕುರಿತು ಎಂ.ಎಂ.ಸತೀಶ್ ಸ್ಮರಿಸಿದರು.









