
ಮಡಿಕೇರಿ NEWS DESK ಮಾ.22 : ಕಾನಡ್ಕ ಕುಟುಂಬದ ವತಿಯಿಂದ 12ನೇ ವರ್ಷದ ಯುಗಾದಿ ಕ್ರೀಡಾಕೂಟ ಸಂಭ್ರಮದಿoದ ನಡೆಯಿತು.
ಮರಗೋಡಿನ ಕಾನಡ್ಕ ಐನ್‌ಮನೆಯಲ್ಲಿ ನಡೆದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿಗಳು ಹಾಗೂ ಸಮಾಜಸೇವಕ ಚೆರಿಯಮನೆ ರತ್ನಕುಮಾರ್ ಅವರು ಯುಗಾದಿ ಹಬ್ಬವು ಹಿಂದೂಗಳಿಗೆ ಹೊಸ ವರ್ಷದ ಪವಿತ್ರ ದಿನವಾಗಿದೆ, ಈ ಶುಭ ಸಂದರ್ಭದಲ್ಲಿ ದಿಟ್ಟ ಗುರಿಯನ್ನು ಹೊಂದಿ ಹೊಸ ಗುರಿಗಳ ಸಾಧನೆಗೆ ನಾವುಗಳು ಕಾರ್ಯಪ್ರವೃತ್ತರಾಗಬೇಕು ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮರಗೋಡಿನ ವಿವೇಕಾನಂದ ಯುವಕ ಸಂಘದ ಮಾಜಿ ಅಧ್ಯಕ್ಷರು ಹಾಗೂ ಸಮಾಜ ಸೇವಕರಾದ ಬಡುವಂಡ್ರ ಲಕ್ಷ್ಮೀಪತಿ ಅವರು ಹಬ್ಬಗಳ ಸಂದರ್ಭ ಕ್ರೀಡಾಕೂಟಗಳನ್ನು ಆಯೋಜಿಸಿದರೆ ಹಬ್ಬದ ಮೆರುಗು ಮತ್ತಷ್ಟು ಹೆಚ್ಚಾಗುತ್ತದೆ. ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ನೆಮ್ಮದಿ ಹೆಚ್ಚಾಗುತ್ತದೆ, ಅಲ್ಲದೆ ಆರೋಗ್ಯ ವೃದ್ಧಿಯಾಗುತ್ತದೆ ಎಂದರು. ಕಾನಡ್ಕ ಕುಟುಂಬದ ಹಿರಿಯರಾದ ಉಲ್ಲಾಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಕಾನಡ್ಕ ದೇವಯ್ಯ ಉಪಸ್ಥಿತರಿದ್ದರು. ವಿಶ್ಮ, ಪೂಜಾ, ಸಂಧ್ಯಾ ಹಾಗೂ ಲಕ್ಷಿತ ಪ್ರಾರ್ಥಿಸಿದರು, ಕಾನಡ್ಕ ಪ್ರಸಾದ್ ಸ್ವಾಗತಿಸಿ, ಕಾನಡ್ಕ ಹನೀಶ್ ನಿರೂಪಿಸಿ, ಕಾನಡ್ಕ ಚರಣ್ ವಂದಿಸಿದರು. ಪುಟಾಣಿಗಳಿoದ ಹಿರಿಯರವರೆಗೆ ವಿವಿಧ ವಿಭಾಗಗಳಲ್ಲಿ ಕ್ರೀಡಾ ಸ್ಪರ್ಧೆಗಳನ್ನು ನಡೆಸಲಾಯಿತು. ದಂಪತಿಗಳಿಗೆ ಕೃಷ್ಣ ರುಕ್ಮಿಣಿ ಓಟ, ರಾಮ ಸೀತೆ ಓಟ, ಹನುಮಂತನ ಓಟ, ಬಾಲ್ ಬ್ಯಾಲೆನ್ಸ್ ಓಟ, ಹಗ್ಗ ಜಗ್ಗಾಟ ಹೀಗೆ ವಿವಿಧ ಬಗೆಯ 21 ಆಟೋ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಕುಟುಂಬದ ಸದಸ್ಯರು ಹಾಗೂ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. *ಸಮಾರೋಪ ಸಮಾರಂಭ* ಸoಜೆ ನಡೆದ ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಗೌಡ ಅಕಾಡೆಮಿಯ ಮಾಜಿ ಅಧ್ಯಕ್ಷ ತುಂತಜೆ ಗಣೇಶ್ ಅವರು ಮಾತೃಭಾಷೆಯಾಗಿರುವ ಅರೆಭಾಷೆಯನ್ನು ಪ್ರತಿಯೊಬ್ಬರು ಮಾತನಾಡಬೇಕು. ಮಕ್ಕಳಿಗೆ ಅರೆಭಾಷೆ ಆಚಾರ, ವಿಚಾರ ಮತ್ತು ಸಂಸ್ಕೃತಿಯನ್ನು ಕಲಿಸಬೇಕು, ಮನೆಯಲ್ಲಿ ಅರೆಭಾಷೆಯನ್ನೇ ಮಾತನಾಡಬೇಕು. ಒಳ್ಳೆಯ ಸಂಸ್ಕಾರವನ್ನು ಕಲಿಸಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಬೇಕು. ಆ ಮೂಲಕ ಅರೆಭಾಷೆ ಗೌಡ ಜನಾಂಗದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು. ಕಟ್ಟೆಮಾಡಿನ ಕಾಫಿ ಬೆಳೆಗಾರ ಹಾಗೂ ಸಮಾಜ ಸೇವಕ ತೋಟಂಬೈಲು ಪ್ರದೀಪ್ ಅವರು ಮಾತನಾಡಿ ಈ ರೀತಿಯ ಕಾರ್ಯಕ್ರಮಗಳನ್ನು ನಡೆಸುವುದರಿಂದ ಕುಟುಂಬದಲ್ಲಿ ಸಂಭ್ರಮ ಹಾಗೂ ಒಗ್ಗಟ್ಟು ಮೂಡುತ್ತದೆ ಎಂದರು. ಮರಗೋಡಿನ ಮಾಜಿ ಯೋಧ ಮುಕ್ಕಾಟಿರ ಗಿರೀಶ್ ಮಾತನಾಡಿ ಮಕ್ಕಳು ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಲು ಹಿರಿಯರ ಪ್ರೋತ್ಸಾಹ ಬಹಳ ಮುಖ್ಯ. ಕ್ರೀಡೆಗಳಲ್ಲಿ ಭಾಗವಹಿಸುವಂತೆ ಪೋಷಕರು ಪ್ರೇರಣೆ ನೀಡಬೇಕು. ಈ ರೀತಿಯ ಕ್ರೀಡಾಸ್ಪರ್ಧಗಳನ್ನು ನಡೆಸುವುದರಿಂದ ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆ ಸಿಗುತ್ತದೆ ಎಂದು ಹೇಳಿದರು. ಮರಗೋಡಿನ ಕಾಫಿ ಕಲ್ಟ್ ಎಸ್ಟೇಟ್ ಮಾಲೀಕರಾದ ಸುರೇಶ್ ಉಪಸ್ಥಿತರಿದ್ದರು.
ಕಾನಡ್ಕ ಉಲ್ಲಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸ್ಪರ್ಧಾ ವಿಜೇತರಿಗೆ ಇದೇ ಸಂದರ್ಭ ಬಹುಮಾನ ವಿತರಿಸಲಾಯಿತು. ಕಾನಡ್ಕ ಹನೀಶ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. 10 ಮೀ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕಾನಡ್ಕ ದನ್ವಿ ಹಾಗೂ ಹಾಕಿ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಕಾನಡ್ಕ ದರ್ಶಿನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.









