

ಮಡಿಕೇರಿ NEWS DESK ಮಾ.23 : ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗದ ವರದಿಯನ್ನು ತಿರಸ್ಕರಿಸಿ ಒಳಮೀಸಲಾತಿ ರಹಿತ ಹಳೆ ಮೀಸಲಾತಿಯನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಬಲಗೈ ಸಮುದಾಯಗಳ ಒಕ್ಕೂಟದ ವತಿಯಿಂದ ಮಾ.25ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ನಡೆಸಲಾಗುವುದು ಎಂದು ಒಕ್ಕೂಟದ ಜಿಲ್ಲಾ ಸಂಚಾಲಕ ಮೋಹನ್ ಮೌರ್ಯ ಸಿ.ಜೆ ಹಾಗೂ ಮಡಿಕೇರಿ ಸಂಚಾಲಕ ಎಸ್.ಸಿ.ಸತೀಶ್ ತಿಳಿಸಿದ್ದಾರೆ. ಬುಧವಾರ ಬೆಳಿಗ್ಗೆ 11 ಗಂಟೆಗೆ ನಡೆಯುವ ಸಮಾವೇಶದಲ್ಲಿ ಕೊಡಗು ಜಿಲ್ಲೆಯಿಂದ 500 ಕ್ಕೂ ಅಧಿಕ ಮಂದಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಅವೈಜ್ಞಾನಿಕ, ಅಪೂರ್ಣ, ದೋಷಪೂರಿತ ಹಾಗೂ ಪಕ್ಷಪಾತದಿಂದ ಕೂಡಿರುವ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಆಯೋಗದ ವರದಿಯನ್ನು ರಾಜ್ಯ ಸರಕಾರ ತಿರಸ್ಕರಿಸಬೇಕು. ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕೈಗೊಂಡಿರುವ ಕುಟುಂಬಗಳ ಸಮೀಕ್ಷೆಯ ಅಂಕಿಅoಶಗಳೊoದಿಗೆ ನ್ಯಾಯಮೂರ್ತಿ ನಾಗಮೋಹನ್‌ದಾಸ್ ರವರ ಆಯೋಗದ ಅಂಕಿ ಅಂಶಗಳನ್ನು ಹೋಲಿಕೆ ಮಾಡಬೇಕು. ವ್ಯತ್ಯಾಸಗಳು ಕಂಡುಬoದಲ್ಲಿ ಪರಿಶಿಷ್ಟ ಜಾತಿಯ ಎಲ್ಲಾ ಕುಟುಂಬಗಳ ಸಮೀಕ್ಷೆಯನ್ನು ಮತ್ತೊಮ್ಮೆ ಕೈಗೊಳ್ಳಬೇಕು.
ಯಾವುದೇ ಮಾನದಂಡವನ್ನು ಅನುಸರಿಸದೆ ರಾಜ್ಯ ಸರಕಾರ 3.09.2025ರಂದು ಅವೈಜ್ಞಾನಿಕವಾಗಿ ಹೊರಡಿಸಿರುವ ಮೀಸಲಾತಿ ಆದೇಶವನ್ನು ಹಿಂಪಡೆಯಬೇಕು. ಸಮಾಜ ಕಲ್ಯಾಣ ಇಲಾಖೆಯ 8.10.2025ರ ನಿರ್ದೇಶನದಂತೆ ಜಾತಿ ಪ್ರಮಾಣ ಪತ್ರಗಳನ್ನು ಪ್ರವರ್ಗ – ಎ, ಬಿ ಮತ್ತು ಸಿ ಎಂದು ವರ್ಗೀಕರಿಸಿರುವುದನ್ನು ಹಿಂಪಡೆದು ಮೂಲ ಜಾತಿಗಳನ್ನು ನಮೂದಿಸಿ ಜಾತಿ ಪ್ರಮಾಣ ಪತ್ರಗಳನ್ನು ನೀಡಲು ಸೂಕ್ತ ಆದೇಶ ಹೊರಡಿಸಬೇಕು. ಪರಿಶಿಷ್ಟ ಜಾತಿ ಸಮುದಾಯಕ್ಕೆ ಈಗಾಗಲೇ ನೀಡಿರುವ ಖಾಯಂ ಜಾತಿ ಪ್ರಮಾಣ ಪತ್ರಗಳನ್ನು ಹೊಸ ಜಾತಿ ಪ್ರಮಾಣ ಪತ್ರಗಳೊಂದಿಗೆ ಪರಿಗಣಿಸಲು ಆದೇಶ ನೀಡಬೇಕು. ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ಸೇರಿರುವ 63 ಜಾತಿಗಳನ್ನು ಬಲಗೈ ಗುಂಪಿನಲ್ಲಿ ಉದ್ಯೋಗ, ಶಿಕ್ಷಣ ಮತ್ತು ಇತರೆ ಸೌಲಭ್ಯ ಪಡೆಯಲು ಅಧಿಸೂಚನೆ ಹೊರಡಿಸಬೇಕು. ಚಿತ್ರದುರ್ಗ ಜಿಲ್ಲೆಯಲ್ಲಿ ಉದ್ದೇಶ ಪೂರ್ವಕವಾಗಿ ಬಲಗೈ ಸಮುದಾಯದ ಜನಸಂಖ್ಯೆಯನ್ನು ಕಡಿಮೆ ಮಾಡಿರುವ ಆಯೋಗದ ಅಧ್ಯಕ್ಷರು ಹಾಗೂ ಅಧಿಕಾರಿಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆಯನ್ವಯ ಮೊಕದ್ದಮೆ ದಾಖಲಿಸಿ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸಬೇಕು. 27.03.2026ರಂದು ನಡೆಯುವ ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯಲ್ಲಿ ಶೇಕಡ 15+3ರ ಮೀಸಲಾತಿಯಲ್ಲಿ ಒಳಮೀಸಲಾತಿಯನ್ನು ಅಳವಡಿಸಬಾರದು. ಎಂಬಿತ್ಯಾದಿ ಬೇಡಿಕೆಗಳನ್ನು ಸಮಾವೇಶದಲ್ಲಿ ಮಂಡಿಸಲಾಗುವುದು ಎಂದು ಮೋಹನ್ ಮೌರ್ಯ ಸಿ.ಜೆ ಹಾಗೂ ಎಸ್.ಸಿ.ಸತೀಶ್ ತಿಳಿಸಿದ್ದಾರೆ. ರಾಜ್ಯ ಸರಕಾರ ಈ ಬೇಡಿಕೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದಿದಲ್ಲಿ ಹೋರಾಟ ತೀವ್ರಗೊಳ್ಳಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.








