

ಮಡಿಕೇರಿ NEWS DESK ಮಾ.23 : ಕೇಂದ್ರ ಸರಕಾರ ಗೃಹಬಳಕೆ ಮತ್ತು ವಾಣಿಜ್ಯ ಅಡುಗೆ ಅನಿಲದ ಬೆಲೆ ಏರಿಕೆ ಮಾಡಿರುವ ಕ್ರಮವನ್ನು ವಿರೋಧಿಸಿ ಮಡಿಕೇರಿ ನಗರ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ನಗರದ ಇಂದಿರಾ ಗಾಂಧಿ (ಚೌಕಿ) ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು ಕೇಂದ್ರ ಸರ್ಕಾರ, ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವೆ ನಿರ್ಮಲ ಸೀತಾರಾಮ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಜಿಲಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಕೇಂದ್ರದ ಕ್ರಮವನ್ನು ಖಂಡಿಸಿದರು. ನಗರ ಕಾಂಗ್ರೆಸ್ ಅಧ್ಯಕ್ಷ ಪ್ರಕಾಶ್ ಆಚಾರ್ಯ ಅವರು ಮಾತನಾಡಿ ಅಡುಗೆ ಅನಿಲದ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರ ಸರಕಾರ ಜನವಿರೋಧಿ ನೀತಿ ಅನುಸರಿಸುತ್ತಿದೆ. ಬೆಲೆ ಇಳಿಕೆಯಾಗುವಲ್ಲಿಯವರೆಗೆ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದರು. ಕಾoಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಮಾತನಾಡಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ರೂ.430 ಇದ್ದ ಅನಿಲದ ಬೆಲೆ ಇಂದು ಸಾವಿರದ ಸನಿಹಕ್ಕೆ ತಲುಪಿದೆ. ಇದು ನರೇಂದ್ರ ಮೋದಿಯವರ ಆಡಳಿತದ ವೈಫಲ್ಯವನ್ನು ಎತ್ತಿ ತೋರಿಸುತ್ತದೆ ಎಂದು ಟೀಕಿಸಿದರು. ಅಂದು ಅನಿಲದ ಬೆಲೆ 450 ರೂ. ಆಗಿದೆ ಎಂದು ಬಿಜೆಪಿ ಪ್ರತಿಭಟನೆ ನಡೆಸಿತ್ತು. ಈಗ ಸಾವಿರ ರೂ. ಆದರೂ ಬಿಜೆಪಿ ಮಂದಿ ಮಾತನಾಡುತ್ತಿಲ್ಲ ವ್ಯಂಗ್ಯವಾಡಿದ ಅವರು, ಕೇಂದ್ರ ಸರಕಾರದ ಜನವಿರೋಧಿ ಆಡಳಿತದ ವಿರುದ್ಧ ನಿರಂತರವಾಗಿ ಹೋರಾಟ ನಡೆಸುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ವೈ.ರಾಜೇಶ್ ಅವರು ಮಾತನಾಡಿ ಬಿಜೆಪಿ ಸುಳ್ಳುಗಳನ್ನು ಹೇಳುತ್ತಲೇ ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ. ಸ್ಥಳೀಯ ಶಾಸಕರು ಉತ್ತಮ ಕೆಲಸ ಮಾಡುತ್ತಿದ್ದರೂ ವಿನಾಕಾರಣ ಟೀಕೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನಾ ಮಾತನಾಡಿ ಯುದ್ಧದ ನೆಪ ಹೇಳಿ ಗ್ಯಾಸ್ ಬೆಲೆ ಏರಿಕೆ ಮಾಡುವ ಮೂಲಕ ಕೇಂದ್ರದ ಸರಕಾರ ಬಡವರ ಮೇಲೆ ಬರೆ ಎಳೆಯುತ್ತಿದೆ. ಈ ಹಿಂದೆ 2003 ರಿಂದ 2011 ರವರೆಗೆ ಅಮೆರಿಕಾ ಮತ್ತು ಇರಾಕ್ ನಡುವೆ ಯುದ್ಧ ನಡೆದಿತ್ತು. ಆಗಲೂ ಇದೇ ಪರಿಸ್ಥಿತಿ ಇತ್ತು, ಆದರೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ನೇತೃತ್ವದ ಯು.ಪಿ.ಎ ಸರಕಾರ ಜಾಣ್ಮೆ ಮತ್ತು ಕೌಶಲ್ಯಪೂರ್ಣ ಆಡಳಿತದ ಮೂಲಕ ಯುದ್ಧದ ಬಿಸಿ ದೇಶದ ಜನತೆಗೆ ತಟ್ಟದ ಹಾಗೆ ಎಚ್ಚರ ವಹಿಸಿದ್ದರು ಎಂದರು. ನಗರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಸಂಪತ್ ರಾಜ್, ಕೋಚನ ಚೇತನ್, ಮಹಿಳಾ ಕಾಂಗ್ರೆಸ್ ನಗರಾಧ್ಯಕ್ಷೆ ಶಶಿ, ನಗರಸಭೆ ಸದಸ್ಯರಾದ ಮಂಡಿರ ಸದಾ ಮುದ್ದಪ್ಪ, ಜಿ.ಸಿ.ಜಗದೀಶ್, ಯಾಕುಬ್, ಜುಲೇಕಾಬಿ, ಸೇವಾದಳದ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಕಾರ್ಮಿಕ ಘಟಕದ ಅಧ್ಯಕ್ಷ ದಿನೇಶ್, ಪ್ರಮುಖರಾದ ಅಂಬೇಕಲ್ ನವೀನ್, ಸುದಯ್ ನಾಣಯ್ಯ, ಕೆ.ಜಿ.ಪೀಟರ್, ಟಿ.ಹೆಚ್.ಉದಯ, ಬೊಳ್ಳಿಯಂಡ ಗಣೇಶ್, ಇಮ್ರಾನ್, ಕಲೀಲ್ ಬಾಷ, ಜಾನ್ಸನ್ ಪಿಂಟೋ, ಮೀನಾಜ್ ಪ್ರವೀಣ್, ಆರ್.ಪಿ.ಚಂದ್ರಶೇಖರ್, ಫ್ಯಾನ್ಸಿ ಪಾರ್ವತಿ, ಪವಿತ್ರ, ಮಮ್ತಾಜ್ ಬೇಗಂ, ಪ್ರೇಮಾ ಕೃಷ್ಣಪ್ಪ, ಪ್ರೇಮಾ ಲಿಂಗಪ್ಪ, ಅರ್ಜುನ್, ಮುನೀರ್ ಮಾಚರ್, ಫಾರುಕ್, ಕೌಶರ್, ನಜೀರ್ ಹುಸೇನ್, ರಿಯಾಜ್, ಸುಬ್ರಮಣಿ, ರಾಜು, ಶ್ರೀಮತಿ ಬಂಗೇರ, ಪೊನ್ನಕ್ಕ, ಕುಮಾರ್, ಸನ್ನಿ, ಹಬೀಬ್, ಹಸೈನ್, ಚಂದ್ರಿಕಾ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.









