
ವಿರಾಜಪೇಟೆ ಮಾ.23 NEWS DESK : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪ ವಲಯ ಹಾತೂರು ಕಾರ್ಯಕ್ಷೇತ್ರದ ಅನುಗ್ರಹ ಜ್ಞಾನವಿಕಾಸ ಕೇಂದ್ರದಲ್ಲಿ ಹೊಲಿಗೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ನಡೆಯಿತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಾತೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಮಂಜುಳಾ ಅವರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನವಿಕಾಸ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅವಶ್ಯಕತೆ ಇರುವ ಮಾಹಿತಿಗಳನ್ನು ಹಾಗೂ ಸ್ವಾವಲಂಬಿ ಜೀವನವನ್ನು ನಡೆಸಲು ಮಹಿಳೆಯರಿಗೆ ಅಗತ್ಯವಾದ ತರಬೇತಿಗಳ ಸೌಲಭ್ಯವನ್ನು ನೀಡುತ್ತಿದ್ದು ಇದರಿಂದ ಅನೇಕ ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಸಹಕಾರವಾಗಿದೆ ಎಂದು ತಿಳಿಸಿದರು. ಹೋಮಿಯೋಪತಿ ವೈದ್ಯಾಧಿಕಾರಿ ಡಾ.ಶ್ವೇತಾ ಮಾತನಾಡಿ, ಮಹಿಳೆಯರ ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಕೇಂದ್ರದ ಅಧ್ಯಕ್ಷರಾದ ಗಿರಿಜಾ ಮಾತನಾಡಿ, ನಮ್ಮ ಕೇಂದ್ರಕ್ಕೆ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ತುಂಬಾ ಉಪಕಾರಿಯಾಯಿತು ಹಾಗೂ ಸದಸ್ಯರಲ್ಲಿ ಸ್ವಉದ್ಯೋಗ ಮಾಡಲು ಮತ್ತು ಸ್ವಾವಲಂಬಿಯಾಗಿ ಬದುಕಲು ಸಹಕಾರವಾಯಿತು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಹೊಲಿಗೆ ತರಬೇತಿ ನೀಡಿದ ವಿನೋದ, ಜ್ಞಾನವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಉಷಾರಾಣಿ, ಸೇವಾ ಪ್ರತಿನಿಧಿಗಳಾದ ಜಯಪ್ರಕಾಶ್ ಹಾಗೂ ಪದ್ಮ ಉಪಸ್ಥಿತರಿದ್ದರು. ತರಬೇತಿ ಶಿಬಿರದಲ್ಲಿ ಪಾಲ್ಗೊಂಡವರಿಗೆ ಪ್ರಮಾಣಪತ್ರ ವಿತರಿಸಲಾಯಿತು.









