
ಮಡಿಕೇರಿ ಮಾ.25 NEWS DESK : ಮಡಿಕೇರಿ ನಗರದ ಹೊರವಲಯದ ಇಬ್ಬನಿವಳವಾಡಿ ಗ್ರಾಮದಲ್ಲಿ ಹುಲಿ ಕಾಣಿಸಿಕೊಂಡಿದೆ. ಕಾಫಿ ತೋಟವೊಂದರಲ್ಲಿ ಹುಲಿ ರಾಜಾರೋಷವಾಗಿ ಸಂಚರಿಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿದ್ದು, ಗ್ರಾಮಸ್ಥರು ಎಚ್ಚರಿಕೆಯಿಂದ ಇರುವಂತೆ ಮನವಿ ಮಾಡಿದ್ದಾರೆ. ಕಳೆದ ಎರಡು ತಿಂಗಳಿನಿಂದ ಇಬ್ಬನಿವಳವಾಡಿ ಗ್ರಾಮದಲ್ಲಿ ಹುಲಿ ಸಂಚರಿಸುತ್ತಿದ್ದು, ಜನರು ಭಯದಲ್ಲಿ ಜೀವನ ನಡೆಸುತ್ತಿದ್ದಾರೆ. ಈ ಅವಧಿಯಲ್ಲಿ ನಮ್ಮ ಕರುಗಳು, ಹಸುಗಳು ಮತ್ತು ಎತ್ತುಗಳು ದಾಳಿಗೆ ಒಳಗಾದರೂ, ನಾವು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಳ್ಳಲಾಗಲಿಲ್ಲ ಎಂದು ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜನವರಿ ತಿಂಗಳಲ್ಲಿ ಚೆಟ್ರಂಡ ನಾಣಯ್ಯ ಎಂಬುವವರ 4 ಜಾನುವಾರುಗಳು ಹುಲಿ ದಾಳಿಗೆ ಒಳಗಾಗಿ ಮೃತಪಟ್ಟಿವೆ. ಫೆ.18ರಂದು ಸೋಮಯ್ಯ ಅವರ ಹಸು ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಮಾ.15ರಂದು ಮೃತಪಟ್ಟಿದೆ. ಕಳೆದ ಒಂದು ವಾರದಲ್ಲಿ ಮತ್ತೊಂದು ಹಸು ಕೂಡ ಸಾವನ್ನಪ್ಪಿದೆ. ಇಷ್ಟೊಂದು ನಷ್ಟಗಳಾದರೂ ಅಧಿಕಾರಿಗಳಿಂದ ಯಾವುದೇ ಸ್ಪಂದನೆ ಇರಲಿಲ್ಲ. ಇಂದು ಸಿಸಿಟಿವಿಯಲ್ಲಿ ಹುಲಿ ದೃಶ್ಯ ಸೆರೆಯಾಗುತ್ತಿದ್ದಂತೆ ಮಾತ್ರ ಅಧಿಕಾರಿಗಳು ಚುರುಕಾಗಿರುವುದು ದುರಂತಕರ. ನಮ್ಮ ಮಾತು, ನಮ್ಮ ನೋವು, ನಮ್ಮ ನಷ್ಟಗಳಿಗೆ ಬೆಲೆ ಇಲ್ಲವೇ? ಎರಡು ತಿಂಗಳ ಹಿಂದೆ ನಾವು ಮನವಿ ಮಾಡಿದಾಗ ಈ ತುರ್ತು ಕ್ರಮ ಎಲ್ಲಿತ್ತು? ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ. ಈ ನಿರ್ಲಕ್ಷ್ಯ ಮನೋಭಾವ ದೊಡ್ಡ ಅನಾಹುತಕ್ಕೆ ಕಾರಣವಾದರೆ ಅದರ ಹೊಣೆ ಯಾರು ಹೊರುತ್ತಾರೆ? ಜನರ ಜೀವ ಮತ್ತು ಆಸ್ತಿ ಅಪಾಯದಲ್ಲಿರುವ ಸಂದರ್ಭದಲ್ಲಿ ಇಂತಹ ನಿರ್ಲಕ್ಷ್ಯ ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಹುಲಿದಾಳಿ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಒದಗಿಸಬೇಕು. ಇಲ್ಲವಾದರೆ ನಾವು ಗಂಭೀರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.









