
ಚಿಕ್ಕ ಅಳುವಾರ ಮಾ.27 NEWS DESK : ನಾಟಕ ಎಂಬುದು ಕೇವಲ ಮನರಂಜನೆಯ ಭಾಗ ಅಲ್ಲ; ಅದು ಸಮಾಜದ ಚಿಂತನೆ, ನೈತಿಕ ಬೋಧನೆಗಳನ್ನು, ಅಗತ್ಯ ವಿಚಾರಗಳನ್ನು ನಮ್ಮ ಮನಸ್ಸಿನ ಆಳಕ್ಕೆ ಇಳಿಸುವ, ಹೃದಯಸ್ಪರ್ಶಿ ಪ್ರದರ್ಶನವನ್ನು ತೆರೆಯ ಮೇಲೆ ತರುವ ಕಲೆ. ಅಲ್ಲದೇ ರಂಗಭೂಮಿಯು ಸಮಾಜದ ಒಂದು ಜೀವಂತ ದರ್ಪಣ ಎಂದು ಕೊಡಗು ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ ಅಭಿಪ್ರಾಯಪಟ್ಟರು. ಚಿಕ್ಕ ಅಳುವಾರದ ಜ್ಞಾನ ಕಾವೇರಿ ಆವರಣದಲ್ಲಿ ಕೊಡಗು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ- 20026 ರ ಅಂಗವಾಗಿ ನಡೆದ ವಿಶೇಷ ಉಪನ್ಯಾಸ, ರಂಗಗೌರವ ಮತ್ತು ರಂಗಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಿನಿಮಾ ಮತ್ತು ರಂಗಭೂಮಿಗೂ ಬಹಳಷ್ಟು ವ್ಯತ್ಯಾಸವಿದೆ. ಅಂತಾರಾಷ್ಟಿಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬಹುತೇಕ ನಟರು ರಂಗಭೂಮಿ ಕಲಾವಿದರೇ ಆಗಿದ್ದಾರೆ. ಅವರ ನಟನೆಯಲ್ಲಿ ಒಂದು ಜೀವಂತಿಕೆ ಇತ್ತು. ಆದರೆ ಇಂದು ಈ ಜೀವಂತಿಕೆಯ ನಟನೆಯನ್ನು ಕಾಣುವುದು ವಿರಳವಾಗಿದೆ ಎಂದು ಅವರು ವಿಷಾದಿಸಿದರು. ಇಂದಿನ ಆಧುನಿಕ ಮತ್ತು ಡಿಜಿಟಲ್ ಸಾಧನಗಳನ್ನು ಬಳಸಿಕೊಂಡು ನಾಟಕವನ್ನು ವಿಶ್ವಮಟ್ಟದಲ್ಲಿ ಮುಂಚೂಣಿ ಸ್ಥಾನಕ್ಕೆ ಕೊಂಡೊಯ್ಯಲು ಸಾಧ್ಯವಿದೆ. ಇದಕ್ಕೆ ಸರಕಾರ, ಸಂಘ ಸಂಸ್ಥೆಗಳು, ಕಲಾವಿದರು ಮತ್ತು ಕಲಾ ಪ್ರೇಮಿಗಳು ಸಹ ಹಗಲಿರುಳು ಶ್ರಮಿಸಬೇಕು. ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳ ಜತೆಜತೆಗೆ ನಾಟಕಗಳನ್ನು ನೋಡುವ ಹವ್ಯಾಸ ಮತ್ತು ಅಭ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದು ಕುಲಪತಿ ಪ್ರೊ. ಅಶೋಕ ಅವರು ಹೇಳಿದರು. ನೀನಾಸಂ ಮತ್ತು ರಂಗಾಯಣದಂತಹ ರಂಗಭೂಮಿ ತರಬೇತಿ ಸಂಸ್ಥೆಗಳು ರಂಗಭೂಮಿ ಕ್ಷೇತ್ರವನ್ನು ಜೀವಂತ ಇಡುವಂತ ಕಾರ್ಯ ಮಾಡುತ್ತಿವೆ. ರಂಗಭೂಮಿ ಕ್ಷೇತ್ರದತ್ತ ಇಂದಿನ ಯುವಜನತೆ ಆಕರ್ಷಕರಾಗಿ ಒಲವು ತೋರುತ್ತಿದ್ದಾರೆ. ಇಂತಹ ಆಸಕ್ತ ಯುವಜನತೆಗೆ ಸರ್ಕಾರ ಮತ್ತು ಸಂಘ ಸಂಸ್ಥೆಗಳು ಸಹಕಾರ ನೀಡಬೇಕು. ಸಿನೆಮಾ ಮತ್ತು ಕ್ರಿಕೆಟ್ ಪ್ರೇಮಿಗಳ ಸಂಖ್ಯೆಗಿಂತ ನಾಟಕ ಪ್ರೇಮಿಗಳ ಸಂಖ್ಯೆ ಹೆಚ್ಚಾಗಬೇಕಿದೆ. ಈ ನಿಟ್ಟಿನಲ್ಲಿ ಹೆಚ್ಚು ಹೆಚ್ಚು ಪ್ರಯತ್ನಗಳಾಗಬೇಕು ಎಂದು ಕುಲಪತಿಗಳು ಸಲಹೆ ನೀಡಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕೊಡಗು ವಿಶ್ವವಿದ್ಯಾಲಯದ ಕುಲಸಚಿವರು ಮೌಲ್ಯಮಾಪನ ಡಾ. ಸುರೇಶ್ ಎಂ. ಮಾತನಾಡಿ, ಜೀವನದಲ್ಲಿ ಒಂದು ಬಾಗಿಲು ಮುಚ್ಚಿದರೂ ನೂರು ಬಾಗಿಲು ತೆರೆದುಕೊಳ್ಳುತ್ತವೆ. ಹಾಗೆಯೇ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಿಂದುಳಿದರು ಭವಿಷ್ಯದಲ್ಲಿ ಕಲೆ, ಸಂಗೀತ, ರಂಗಭೂಮಿ ಕ್ಷೇತ್ರಗಳು ಅವರ ಕೈಹಿಡಿಯುತ್ತವೆ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಬೆಂಗಳೂರಿನ “ಕುಹೂ” ತಂಡದ ಕಲಾವಿದೆ ಬಿಂದು ರಕ್ಷಿದಿ ಅವರು ಈ ವರ್ಷದ ವಿಶ್ವ ರಂಗಭೂಮಿ ದಿನಾಚರಣೆಯ ವಿಲಿಯಂ ಡೆಪೋ ಅವರ ಸಂದೇಶವನ್ನು ವಾಚಿಸಿದರು. ಹೆಗ್ಗೋಡಿನ ರಂಗನಿರ್ದೇಶಕರು ಮತ್ತು ನೀನಾಸಂ ಶಿಕ್ಷಕರು ಪಿ.ಎ ಮಂಜಪ್ಪ ಮಾಲ್ದಾರೆ ‘ರಂಗಭೂಮಿ ಎಂಬ ಚಿಕಿತ್ಸಕ ಮಾದರಿ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ “ಕುಹೂ” ತಂಡವು ರಂಗ ಸಂಗೀತ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. 2025-2026 ನೇ ಸಾಲಿನ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಪಿ.ಎ ಮಂಜಪ್ಪ ಮಾಲ್ದಾರೆ ಅವರಿಗೆ ವಿಶ್ವವಿದ್ಯಾಲಯದ ವತಿಯಿಂದ ರಂಗ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಅವರ್ತಿ ಆರ್. ಮಹದೇವಪ್ಪ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಬೆಂಗಳೂರಿನ “ಕುಹೂ” ತಂಡದ ಕಲಾವಿದರು, ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ . ಗುಣಶ್ರೀ ಬಿ. ಎಸ್., ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಕಲಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಡಾ.ಜಾಹಿದಾ ಕೊಡಗು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಮತ್ತು ಕೊಡಗು ವಿಶ್ವವಿದ್ಯಾಲಯ ಯುವ ರೆಡ್ ಕ್ರಾಸ್ ನ ನೋಡಲ್ ಅಧಿಕಾರಿ ಡಾ. ಜಮೀರ್ ಅಹಮದ್ ನಿರೂಪಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಡಾ. ಮಂಜುನಾಥ ವಂದಿಸಿದರು.









