
ಚಿಕ್ಕ ಅಳುವಾರ ಮಾ.27 NEWS DESK : ಯೂರೋಪಿನ ಎಲ್ಲ ರಂಗಭೂಮಿ ಕಲೆಗೂ ಸಹ ಸಣ್ಣ ಪುಟ್ಟ ಆಚರಣೆಗಳಿಂದ ಆರಂಭವಾಗಿವೆ. ಭಾರತದಲ್ಲಿ 3ನೇ ಶತಮಾನದಲ್ಲಿ ರಂಗಭೂಮಿಯ ಪರಿಚಯವಾಯಿತು. ಅಂದಿನಿಂದ ಇಂದಿನವರೆಗೂ ಭಾರತದಲ್ಲಿ ರಂಗಭೂಮಿ ಕ್ಷೇತ್ರವು ವಿಶ್ವದೆಲ್ಲೆಡೆ ತನ್ನ ಬಾಹುಗಳನ್ನು ಚಾಚಿದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ ಎಂದು ಹೆಗ್ಗೋಡಿನ ರಂಗನಿರ್ದೇಶಕರು ಮತ್ತು ನೀನಾಸಂ ಶಿಕ್ಷಕರಾದ ಪಿ.ಎ ಮಂಜಪ್ಪ ಮಾಲ್ದಾರೆ ಅವರು ‘ರಂಗಭೂಮಿ ಎಂಬ ಚಿಕಿತ್ಸಕ ಮಾದರಿ’ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಚಿಕ್ಕ ಅಳುವಾರದ ಜ್ಞಾನ ಕಾವೇರಿ ಆವರಣದಲ್ಲಿ ಕೊಡಗು ವಿಶ್ವವಿದ್ಯಾಲಯ ಮತ್ತು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ- 20026 ರ ಅಂಗವಾಗಿ ನಡೆದ ವಿಶೇಷ ಉಪನ್ಯಾಸ, ರಂಗಗೌರವ ಮತ್ತು ರಂಗಸಂಗೀತ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಇಂದಿನ ಪರಿಸ್ಥಿತಿ ಮತ್ತು ಮನಸ್ಥಿತಿಯಲ್ಲಿ ಮನುಷ್ಯ ತನ್ನ ಸಂಬಂಧಗಳ ಜೊತೆಗೆ ಮುಕ್ತ ಮನಸ್ಸಿನಿಂದ ಮಾತನಾಡಲು, ಭಾವನೆಗಳನ್ನು ಅರ್ಥೈಸಿಕೊಳ್ಳಲು, ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲ ಒಂದು ವೇದಿಕೆ ಕೊಡುವ, ಎಲ್ಲರನ್ನೂ ಎಲ್ಲರ ಮನಸ್ಸನ್ನು ಒಗ್ಗೂಡಿಸುವ ಕೆಲಸ ಮಾಡುವುದು ರಂಗಭೂಮಿ ಕ್ಷೇತ್ರ ಎಂದು ಅವರು ತಿಳಿಸಿದರು. ಕಲಾವಿದರಾಗಬೇಕೆಂಬ ಆಸಕ್ತಿ ಇರುವವರು ಕಲೆಯನ್ನು ಮೈಗೂಡಿಸಿಕೊಳ್ಳಲು ಮೊದಲಿಗೆ ತಮ್ಮನ್ನು ತಾವು ವಿಸರ್ಜಿಸಿಕೊಳ್ಳಬೇಕು. ಎಲ್ಲ ಆಕರ್ಷಣೆಗಳಿಂದ ಮುಕ್ತರಾಗಿ ಹಗಲಿರುಳು ಶ್ರಮಿಸಬೇಕು ಅಂದಾಗ ಮಾತ್ರ ಪರಿಪೂರ್ಣ ಕಲಾವಿದರಾಗಲು ಸಾಧ್ಯ ಎಂದರು. ಕೊಡಗು ಜಿಲ್ಲೆಯಲ್ಲಿ ಇಂದು ಕೇವಲ ಮೂರು ಸಿನಿಮಾ ಥಿಯೇಟರ್ ಗಳು ಮಾತ್ರ ಉಳಿದಿರುವುದು ಅತ್ಯಂತ ಖೇದದ ಸಂಗತಿ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ರಂಗಭೂಮಿ ಕೆಲಸಗಳಾಬೇಕಿದೆ. ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಸಾಹಿತ್ಯದ ಓದು, ಬರಹ, ಕಲೆಗಳತ್ತ ಹೆಚ್ಚು ಆಸಕ್ತಿ ವಹಿಸಬೇಕು. ಅಂದಾಗ ಇಂತಹ ರಂಗಭೂಮಿ ದಿನಾಚರಣೆಗಳಿಗೆ ಸಾರ್ಥಕತೆ ಸಿಗುತ್ತದೆ ಎಂದು ಅವರು ಕಿವಿಮಾತು ಹೇಳಿದರು. ರಂಗಭೂಮಿ ಕಲಾವಿದರು ಈ ಮಣ್ಣಿನ ಸೊಗಡನ್ನು, ಕಲೆ ಸಂಸ್ಕೃತಿಯನ್ನು ವಿಶ್ವಕ್ಕೆ ಪರಿಚಯಿಸುವ ರಂಗಕರ್ಮಿಗಳಿಗೆ ಸರಕಾರ ಗೌರವ, ಪ್ರಶಸ್ತಿಯ ಜತೆಗೆ ಭವಿಷ್ಯದ ಭದ್ರತೆಯನ್ನು ನೀಡಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಅಶೋಕ ಸಂಗಪ್ಪ ಆಲೂರ, ಕೊಡಗು ವಿಶ್ವವಿದ್ಯಾಲಯದ ಕುಲಸಚಿವರು ಮೌಲ್ಯಮಾಪನ ಡಾ. ಸುರೇಶ್ ಎಂ., ಕೊಡಗು ಛಾಯಾಚಿತ್ರಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಅವರ್ತಿ ಆರ್. ಮಹದೇವಪ್ಪ, ಬೆಂಗಳೂರಿನ “ಕುಹೂ” ತಂಡದ ಕಲಾವಿದರು, ಸೂಕ್ಷ್ಮಾಣು ಜೀವವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ . ಗುಣಶ್ರೀ ಬಿ. ಎಸ್., ವಿಶ್ವವಿದ್ಯಾಲಯದ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳು ಮತ್ತು ಕಲಾಸಕ್ತರು ಉಪಸ್ಥಿತರಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಡಾ.ಜಾಹಿದಾ ಕೊಡಗು ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಮತ್ತು ಕೊಡಗು ವಿಶ್ವವಿದ್ಯಾಲಯ ಯುವ ರೆಡ್ ಕ್ರಾಸ್ ನ ನೋಡಲ್ ಅಧಿಕಾರಿ ಡಾ. ಜಮೀರ್ ಅಹಮದ್ ನಿರೂಪಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮಾಜಕಾರ್ಯ ವಿಭಾಗದ ಉಪನ್ಯಾಸಕ ಡಾ. ಮಂಜುನಾಥ ವಂದಿಸಿದರು.









