
ಮಡಿಕೇರಿ NEWS DESK ಮಾ.29 : “ಕೆಪಿಎಸ್ ಮ್ಯಾಗ್ನೆಟ್” ಯೋಜನೆ ಜಾರಿಯಾದರೆ ಕೊಡಗಿನ ಬಹುತೇಕ ಸರಕಾರಿ ಶಾಲೆಗಳು ಮುಚ್ಚುವ ಸಾಧ್ಯತೆಗಳಿದೆ ಎಂದು ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಯೂನಿಯನ್(ಎಐಡಿಎಸ್‌ಓ) ಸಂಘಟನೆ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ನೇತೃತ್ವದಲ್ಲಿ ಕುಶಾಲನಗರದ ಮಹಿಳಾ ಸಮಾಜ ಭವನದಲ್ಲಿ ಪ್ರತಿಭಟನಾ ಸಮಾವೇಶ ನಡೆಸಿದ ಪ್ರಮುಖರು ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಎಐಡಿಎಸ್‌ಓ ರಾಜ್ಯ ಉಪಾಧ್ಯಕ್ಷರಾದ ಅಭಯ ದಿವಾಕರ್ ಮಾತನಾಡಿ, ಹಿಂದಿನ ಬಿಜೆಪಿ ಸರ್ಕಾರವು “ಸಂಯೋಜನೆ” ಹೆಸರಿನಲ್ಲಿ 13,800 ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿತ್ತು. ಆ ಸಂದರ್ಭ ರಾಜ್ಯಾದ್ಯಂತ ಹೋರಾಟ ನಡೆಸಿ ಸರಕಾರಿ ಶಾಲೆಗಳನ್ನು ಉಳಿಸಿದ್ದೆವು. ಪ್ರಸ್ತುತ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಡಿಯಲ್ಲಿ 40ಸಾವಿರ ಶಾಲೆಗಳನ್ನು ಮುಚ್ಚಲು ಹೊರಟಿದೆ. ಸರಕಾರಿ ಶಾಲೆಗಳನ್ನು ಮುಚ್ಚಿ ಬಡ ವಿದ್ಯಾರ್ಥಿಗಳಿಂದ ಶಿಕ್ಷಣವನ್ನು ಕಸಿದುಕೊಳ್ಳುವುದೇ ಸರಕಾರದ ಉದ್ದೇಶವಾಗಿದೆ ಎಂದು ಆರೋಪಿಸಿದರು.
ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಸರಕಾರವು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕಿನಿoದ 2,500 ಕೋಟಿ ಸಾಲ ಮಾಡಿ ತೆರೆಯುತ್ತಿದೆ. ಕೆಪಿಎಸ್ ಮ್ಯಾಗ್ನೆಟ್ ಶಾಲೆಗಳನ್ನು ಹೊರಗುತ್ತಿಗೆ ನೀಡುವ ಮೂಲಕ ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳನ್ನಾಗಿ ಪರಿವರ್ತಿಸುವ ಹುನ್ನಾರವನ್ನು ಸರಕಾರ ಮಾಡುತ್ತಿದೆ. ಪ್ರತಿ ಕಿಲೋಮೀಟರ್ ವ್ಯಾಪ್ತಿಯಲ್ಲಿ ಪ್ರಾಥಮಿಕ ಶಾಲೆ ಇರಬೇಕೆನ್ನುವ ಶಿಕ್ಷಣ ಹಕ್ಕು ಕಾಯ್ದೆಯನ್ನು ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಉಲ್ಲಂಘಿಸುವ ಸಾಧ್ಯತೆ ಇದೆ ಎಂದರು. ರಾಜ್ಯ ಖಜಾಂಚಿ ಸುಭಾಷ್ ಬೆಟ್ಟದಕೊಪ್ಪ ಮಾತನಾಡಿ, ಕುಶಾಲನಗರ ತಾಲ್ಲೂಕಿನ ಕುಶಾಲನಗರದ ಸರಕಾರಿ ಶಾಲೆ, ಕೂಡಿಗೆ ಶಾಲೆ, ಶಿರಂಗಾಲ ಶಾಲೆ ಹಾಗೆಯೇ ವಿರಾಜಪೇಟೆ ತಾಲ್ಲೂಕಿನ ಗೋಣಿಕೊಪ್ಪ ಶಾಲೆ, ಕುಟ್ಟ ಶಾಲೆ ಸೇರಿದಂತೆ 5 ಶಾಲೆಗಳನ್ನು ಆಯ್ಕೆ ಮಾಡಿ 135 ಶಾಲೆಗಳನ್ನು ಮ್ಯಾಗ್ನೆಟ್ ಯೋಜನೆಯಡಿ ವಿಲೀನಗೊಳಿಸಿ ಮುಚ್ಚುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶ. ಎಷ್ಟೋ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇಲ್ಲ. ಮಳೆಗಾಲದಲ್ಲಿ ನಾಲ್ಕು ತಿಂಗಳು ಸುರಿಯುವ ಮಳೆಯಲ್ಲಿ ಒಂದನೇ ತರಗತಿ, ಎರಡನೇ ತರಗತಿ ಓದುವ ಚಿಕ್ಕ ಮಕ್ಕಳು ಐದು ಆರು ಕಿಲೋ ಮೀಟರ್ ನಡೆದುಕೊಂಡು ಹೋಗುವುದು ಅಸಾಧ್ಯದ ಮಾತು. ಜಿಲ್ಲೆಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿಯಾದರೆ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳು, ಕಾಡಿನ ಅಂಚಿನಲ್ಲಿ ವಾಸಿಸುತ್ತಿರುವ ಆದಿವಾಸಿ ಮಕ್ಕಳು ಹಾಗೂ ರೈತರ, ಬಡವರ ಮಕ್ಕಳು, ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಆದ್ದರಿಂದ ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು. ಅತಿಥಿಗಳಾಗಿ ಆಗಮಿಸಿದ್ದ ಕುಶಾಲನಗರದ ಕಸಾಪ ಅಧ್ಯಕ್ಷ ನಾಗೇಶ್ ಕೆ.ಎಸ್ ಮಾತನಾಡಿ, ಶಾಲೆಗಳು ಪ್ರತಿಯೊಂದು ಗ್ರಾಮಗಳಲ್ಲಿ ಇರಬೇಕು. ಐದರಿಂದ ಆರು ಕಿಲೋಮೀಟರ್ ದೂರದ ಶಾಲೆಗೆ ಚಿಕ್ಕ ಮಕ್ಕಳು, ಹೆಣ್ಣು ಮಕ್ಕಳು ತೆರಳಿ ಶಿಕ್ಷಣ ಪಡೆದುಕೊಳ್ಳುವುದು ಅಸಾಧ್ಯವಾದೀತೆಂದು ಕಳವಳ ವ್ಯಕ್ತಪಡಿಸಿದರು. ಕಾರ್ಮಿಕ ಮುಖಂಡರಾದ ಹರೀಶ್, ಕೆಪಿಎಸ್ ಮ್ಯಾಗ್ನೆಟ್ ಯೋಜನೆಯಿಂದ ಕಾರ್ಮಿಕರ ಮಕ್ಕಳು ಶಿಕ್ಷಣದಿಂದ ವಂಚಿತರಾಗುವ ಆತಂಕ ವ್ಯಕ್ತಪಡಿಸಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯಿಂದ ವಿಜಯನಗರದ ಸುರೇಶ್, ಚಿಕ್ಕತ್ತೂರು ಹರೀಶ್, ತೊರೆನೂರು ಸಾಗರ್ ಮಾತನಾಡಿದರು.
ಸಮಾವೇಶದ ಅಧ್ಯಕ್ಷತೆಯನ್ನು ಎಐಡಿಎಸ್‌ಓ ಸಂಘಟನಾಕಾರಾದ ಸ್ವಾತಿ ವಹಿಸಿದ್ದರು. ಯುವಜನ ಪದಾಧಿಕಾರಿಗಳಾದ ಪೂರ್ಣಿಮಾ, ನೀತು, ಮಂಜು ಹಾಗೂ ವಿವಿಧ ಹಳ್ಳಿಗಳ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.
*62 ಸಾವಿರ ಶಿಕ್ಷಕರ ಹುದ್ದೆ ಖಾಲಿ* ಪ್ರಸ್ತುತ ರಾಜ್ಯದಲ್ಲಿ 62 ಸಾವಿರ ಶಿಕ್ಷಕರ ಹುದ್ದೆ ಖಾಲಿ ಇದೆ, 7 ಸಾವಿರಕ್ಕೂ ಹೆಚ್ಚಿನ ಏಕೋಪಾಧ್ಯಾಯ ಶಾಲೆಗಳಿವೆ. 23 ಸಾವಿರಕ್ಕೂ ಹೆಚ್ಚಿನ ಸರ್ಕಾರಿ ಶಾಲೆ ಕಟ್ಟಡಗಳು ದುರಸ್ತಿಯಾಗಬೇಕಾಗಿದೆ. ಸರ್ಕಾರಿ ಶಾಲೆಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ, ಅವುಗಳನ್ನು ಸೊರಗುವಂತೆ ಮಾಡಿ ಸರ್ಕಾರ ಹಿಂಬಾಗಿಲಿನಿoದ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿದೆ. (ಸುಭಾಷ್ ಬೆಟ್ಟದ ಕೊಪ್ಪ)
*ಸಮಿತಿ ರಚನೆ* ಸಾರ್ವಜನಿಕ ಶಿಕ್ಷಣ ಉಳಿಸಲು ಮುಂದಿನ ದಿನಗಳಲ್ಲಿ ಸಶಕ್ತವಾಗಿ ಹೋರಾಟವನ್ನು ರೂಪಿಸಲು ಕೊಡಗು ಜಿಲ್ಲಾ ಮಟ್ಟದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯನ್ನು ಇದೇ ಸಂದರ್ಭ ರಚಿಸಲಾಯಿತು. ಸಮಿತಿಯ ಅಧ್ಯಕ್ಷರಾಗಿ ವಿಜಯನಗರದ ಸುರೇಶ, ಕಾರ್ಯದರ್ಶಿಯಾಗಿ ಎಐಟಿಎಸ್‌ಓದ ಸ್ವಾತಿ ಹಾಗೂ ಉಪಾಧ್ಯಕ್ಷರಾಗಿ ವಿಜಯನಗರದ ಅಕ್ಷಯ್, ಚಿಕ್ಕತ್ತೂರಿನ ಹರೀಶ್, ತೊರೆನೂರಿನ ಸಾಗರ್, ಬ್ಯಾಡಗೂಟ್ಟ ಹಾಡಿಯ ಚಿಮ್ಮಿ, ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಶಾಂತಿ, ಯುವಜನ ಸಂಘಟನೆಯ ಪೂರ್ಣಿಮಾ ಹಾಗೂ ಸಲಹೆಗಾರರುಗಳನ್ನಾಡಿ ಕುಶಾಲನಗರ ತಾಲ್ಲೂಕು ಕಸಾಪ ಅಧ್ಯಕ್ಷ ನಾಗೇಶ್ ಕೆ.ಎಸ್. ಮತ್ತು ಕೆಲ ಪ್ರಮುಖರನ್ನು ಆಯ್ಕೆ ಮಾಡಲಾಯಿತು. ವಿವಿಧ ಗ್ರಾಮೀಣ ಭಾಗಗಳ ನೂರಕ್ಕೂ ಹೆಚ್ಚು ಮಂದಿಯನ್ನು ಸದಸ್ಯರನ್ನಾಗಿ ನೇಮಕ ಮಾಡಲಾಯಿತು.









