
ಮಡಿಕೇರಿ NEWS DESK ಮಾ.30 : ನಾಪೋಕ್ಲುವಿನ ಎಮ್ಮೆಮಾಡುವಿನಲ್ಲಿ ಮುಸ್ಲಿಂ ಸಮುದಾಯದ ಮದುವೆ ಸಮಾರಂಭದಲ್ಲಿ ದೈವವನ್ನೇ ಹೋಲುವ ರೀತಿಯಲ್ಲಿ ಮದುಮಗನು ವೇಷ ಹಾಕಿ ಅತಿರೇಕದ ವರ್ತನೆ ತೋರಿದ್ದು, ಇದು ದೈವಕ್ಕೆ ಅಪಮಾನ ಮಾಡಿದಂತ್ತಾಗಿದೆ ಎಂದು ಆರೋಪಿಸಿ ದೈವ ಆರಾಧಕರು ಮತ್ತು ದೈವ ನರ್ತಕರ ಸಂಘ ಕೊಡಗು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ಸಲ್ಲಿಸಿದೆ. ಎಮ್ಮೆಮಾಡುವಿನಲ್ಲಿ ಕೆಲ ದಿನಗಳ ಹಿಂದೆ ಮುಸ್ಲಿಂ ಸಮುದಾಯದ ಮದುವೆ ಸಮಾರಂಭದಲ್ಲಿ ಮದುಮಗನು ತುಳುನಾಡಿನ ದೈವ ಕೋಲದ ಮಾದರಿ ಮುಖಕ್ಕೆ ಬಣ್ಣ ಬಳಿದು ದೈವವನ್ನೇ ಅಣಕಿಸುವ ರೀತಿಯಲ್ಲಿ ನಡೆದುಕೊಂಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದನ್ನು ದೈವ ಆರಾಧಕರು ಮತ್ತು ದೈವ ನರ್ತಕರ ಸಂಘ ತೀವ್ರವಾಗಿ ಖಂಡಿಸುತ್ತದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೈವ ಆರಾಧನೆ ನಮ್ಮ ಹಿರಿಯರು ಹಾಕಿಕೊಟ್ಟಿರುವ ಮೂಲನಂಬಿಕೆ, ಮೂಲ ಪದ್ಧತಿ, ಮೂಲ ಆಧಾರವಾಗಿದೆ. ದೈವ ಆರಾಧನೆ ಪ್ರದರ್ಶನದ ಕಲೆಯಲ್ಲ ಹಾಗೂ ಜಾನಪದ ಕಲೆಯೂ ಅಲ್ಲ. ಈ ರೀತಿಯಲ್ಲಿ ದೈವವನ್ನೇ ಹೊಲುವ ರೀತಿ ವೇಷಭೂಷಣ ಹಾಕಿ ದೈವಕ್ಕೆ ಅಪಮಾನ ಅಪಹಾಸ್ಯ ಮಾಡಿದಲ್ಲದೇ ದೈವಾರಾಧನೆ ಮಾಡುವ ಸಮುದಾಯಕ್ಕೆ ನಿಂದನೆ ಮಾಡಿದಂತಾಗಿದೆ ಎಂದು ಆರೋಪಿಸಿರುವ ಸಂಘದ ಪ್ರಮುಖರು ಪ್ರಕರಣದ ಕುರಿತು ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ದೈವ ಆರಾಧಕರು ಮತ್ತು ದೈವ ನರ್ತಕರ ಸಂಘದ ಜಿಲ್ಲಾಧ್ಯಕ್ಷ ಸದಾಶಿವ ರೈ, ಸಂಘದ ಸ್ಥಾಪಕಾಧ್ಯಕ್ಷ ಪಿ.ಎಂ.ರವಿ, ಪ್ರಮುಖರಾದ ಹರೀಶ್ ಜಿ.ಆಚಾರ್ಯ ಮತ್ತಿತರರು ಡಿವೈಎಸ್‌ಪಿ ಸೂರಜ್ ಅವರಿಗೆ ಮನವಿ ಸಲ್ಲಿಸುವ ಸಂದರ್ಭ ಹಾಜರಿದ್ದರು.








