ಮಡಿಕೇರಿ, NEWS DESK ಮಾ.೩೧ : ಕುಶಾಲನಗರ ತಾಲ್ಲೂಕಿನ ಚೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಪೊನ್ನತ್ ಮೊಟ್ಟೆಯಲ್ಲಿ ಸರಕಾರಿ ಜಾಗದಲ್ಲಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವ ಬಡವರಿಗೆ ನಿವೇಶನದ ಹಕ್ಕು ಪತ್ರ ನೀಡಬೇಕೆಂದು ಬಹುಜನ ಕಾರ್ಮಿಕ ಸಂಘ ಮತ್ತು ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಕೊಡಗು ಘಟಕ ಒತ್ತಾಯಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಹುಜನ ಕಾರ್ಮಿಕ ಸಂಘದ ಚೆಟ್ಟಳ್ಳಿ ವಲಯ ಅಧ್ಯಕ್ಷ ಬಿ.ಎ.ಶೌಕತ್ ಆಲಿ ಹಾಗೂ ಮೇಲುಸ್ತುವಾರಿ ವಿ.ಚಂದ್ರಶೇಖರ್ ಪೊನ್ನತ್ ಮೊಟ್ಟೆಯಲ್ಲಿ ಬಡವರಿಗೆ ನಿವೇಶನ ಹಂಚಿಕೆ ಮಾಡಲೆಂದೇ ೨೦೨೧ ರಲ್ಲಿ ತಾ.ಪಂ ಆಡಳಿತ ೧.೮೦ ಎಕರೆ ಸರಕಾರಿ ಜಾಗವನ್ನು ಕಾಯ್ದಿರಿಸಿದೆ. ಇದೇ ಜಾಗದಲ್ಲಿ ಸುಮಾರು ೨೮ಕ್ಕೂ ಅಧಿಕ ಬಡ ಕುಟುಂಬಗಳು ಗುಡಿಸಲುಗಳನ್ನು ನಿರ್ಮಿಸಿಕೊಂಡು ವಾಸಿಸುತ್ತಿವೆ. ಕಳೆದ ಹಲವು ವರ್ಷಗಳಿಂದ ನಿವೇಶನದ ಹಕ್ಕು ಪತ್ರಕ್ಕಾಗಿ ಅರ್ಜಿ ಸಲ್ಲಿಸುತ್ತಾ ಬಂದಿದ್ದರೂ ಇಲ್ಲಿಯವರೆಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆತ್ತಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಬಡವರು ವಾಸಿಸುತ್ತಿರುವ ಪ್ರದೇಶದಲ್ಲೇ ಕಸ ವಿಲೇವಾರಿ ಘಟಕವನ್ನು ಆರಂಭಿಸಲಾಗಿದೆ. ಆದರೆ ವೈಜ್ಞಾನಿಕ ರೂಪದಲ್ಲಿ ಕಸ ವಿಲೇವಾರಿ ಮಾಡದೆ ಪ್ಲಾಸ್ಟಿಕ್ ಗಳನ್ನು ಸುಟ್ಟು ಹಾಕಿ ಪರಿಸರವನ್ನು ಕಲುಷಿತಗೊಳಿಸಲಾಗುತ್ತಿದೆ. ಆ ಮೂಲಕ ಬಡವರಿಗೆ ತೊಂದರೆ ನೀಡಲಾಗುತ್ತಿದ್ದು, ಒಕ್ಕಲೆಬ್ಬಿಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಆರೋಪಿಸಿದರು.
ಪೊನ್ನತ್ ಮೊಟ್ಟೆಯಲ್ಲಿ ವಾಸಿಸುತ್ತಿರುವ ನಿವೇಶನ ರಹಿತ ಬಡವರಿಗೆ ಹಕ್ಕುಪತ್ರ ನೀಡಲು ಕ್ಷೇತ್ರದ ಶಾಸಕರು ಕಾಳಜಿ ತೋರಬೇಕು. ಶೀಘ್ರ ಹಕ್ಕುಪತ್ರ ನೀಡದಿದ್ದಲ್ಲಿ ಮುಂಬರುವ ಜಿ.ಪಂ, ಗ್ರಾ.ಪಂ ಸೇರಿದಂತೆ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸಲಾಗುವುದು. ಒಂದು ವೇಳೆ ಒಕ್ಕಲೆಬ್ಬಿಸಿದರೆ ಗ್ರಾ.ಪಂ ಎದುರು ಗುಡಿಸಲು ನಿರ್ಮಿಸಿ ವಾಸಿಸಲು ಆಂಭಿಸಲಾಗುವುದು ಎಂದು ಬಿ.ಎ.ಶೌಕತ್ ಆಲಿ ಹಾಗೂ ವಿ.ಚಂದ್ರಶೇಖರ್ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಹುಜನ ಕಾರ್ಮಿಕ ಸಂಘದ ಸದಸ್ಯರುಗಳಾದ ಶಫಿ ಹಾಗೂ ಸುರೇಶ್ ಬಿ.ಎಂ ಉಪಸ್ಥಿತರಿದ್ದರು. ಫೋಟೋ :: ಬಹುಜನ
*ನಿವೇಶನದ ಹಕ್ಕು ಪತ್ರ ನೀಡದಿದ್ದರೆ ಚುನಾವಣೆ ಬಹಿಷ್ಕಾರ : ಗ್ರಾ.ಪಂ ಎದುರು ವಾಸ*
1 Min ReadBy admin







