ಮಡಿಕೇರಿ, NEWS DESK ಮಾ.31 : ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಅವರ ಜನ್ಮ ದಿನಾಚರಣೆಯನ್ನು ನಗರದ ಜನರಲ್ ಕೆ.ಎಸ್.ತಿಮ್ಮಯ್ಯ ಸ್ಮಾರಕ ಭವನ (ಸನ್ನಿಸೈಡ್)ದಲ್ಲಿ ಮಂಗಳವಾರ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಜನರಲ್ ತಿಮ್ಮಯ್ಯ ಸ್ಮಾರಕ ಭವನದಲ್ಲಿ ದೀಪ ಬೆಳಗಿ, ಜನರಲ್ ತಿಮ್ಮಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಗೌರವ ನಮನ ಸಲ್ಲಿಸಿದರು.
ಬಳಿಕ ಮಾತನಾಡಿದ ಶಾಸಕರು ಜನರಲ್ ಕೋಡಂದೇರ ಸುಬ್ಬಯ್ಯ ತಿಮ್ಮಯ್ಯ ಅವರು ಭಾರತೀಯ ಸೇನಾ ಕ್ಷೇತ್ರದಲ್ಲಿ ಅತ್ಯಂತ ಧೈರ್ಯಶಾಲಿ, ತಂತ್ರಗಾರಿಕೆ ಹಾಗೂ ಚತುರತೆಯ ನಾಯಕರಾಗಿದ್ದರು ಎಂದು ಹೇಳಿದರು.
1957 ರಿಂದ 1961 ರವರೆಗೆ ಸೇನಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದ ಕೆ.ಎಸ್.ತಿಮ್ಮಯ್ಯ ಅವರು ಎರಡನೇ ಮಹಾಯುದ್ಧ ಮತ್ತು 1948 ರ ಕಾಶ್ಮೀರ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದರು.
ಮಡಿಕೇರಿಯ ಸನ್ನಿಸೈಡ್‌ನಲ್ಲಿ ಜನಿಸಿದ ಇವರು ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಯಲ್ಲೂ ಸಹ ಸೇವೆ ಸಲ್ಲಿಸಿ ದಾಖಲೆ ನಿರ್ಮಿಸಿದ್ದಾರೆ ಎಂದು ಎ.ಎಸ್.ಪೊನ್ನಣ್ಣ ಅವರು ವಿವರಿಸಿದರು.
ಸಣ್ಣ ವಯಸ್ಸಿನಲ್ಲಿಯೇ ಸೇನೆಗೆ ಸೇರಿ ಭಾರತೀಯ ಸೇನಾ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರ ಸೇನಾ ಕ್ಷೇತ್ರದಲ್ಲಿನ ಕೆಲಸಗಳು ಇಂದಿಗೂ ಸಹ ಮಾದರಿ ಹಾಗೂ ಮಾರ್ಗದರ್ಶನವಾಗಿದೆ ಎಂದು ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ನುಡಿದರು.
ಶಿಸ್ತು, ಸಮಯಪ್ರಜ್ಞೆ, ಬದ್ಧತೆ ಮತ್ತು ಪ್ರಾಮಾಣಿಕತೆಗೆ ಹೆಸರಾಗಿದ್ದ ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಸೇನಾ ಕ್ಷೇತ್ರದ ಇತಿಹಾಸದಲ್ಲಿ ಮರೆಯಲಾಗದ ಸಾಧನೆ ಮಾಡಿದ್ದಾರೆ ಎಂದು ಎ.ಎಸ್.ಪೊನ್ನಣ್ಣ ಅವರು ಹೇಳಿದರು.
ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಮಾತನಾಡಿ ಜನರಲ್ ತಿಮ್ಮಯ್ಯ ಅವರ ಸೇನಾ ಕ್ಷೇತ್ರದಲ್ಲಿನ ಸಾಧನೆಯನ್ನು ಪ್ರತಿಯೊಬ್ಬರೂ ಸ್ಮರಿಸಬೇಕು. ಅವರ ಮೌಲ್ಯಯುತ ಜೀವನ ಮತ್ತು ಬದುಕು ಸೇನಾ ಕ್ಷೇತ್ರದಲ್ಲಿ ಇಂದಿಗೂ ಸಹ ಮಾದರಿಯಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಮಾತನಾಡಿ ಪದ್ಮಭೂಷಣ ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಭಾರತೀಯ ಸೇನೆಯಲ್ಲಿ ನೀಡಿರುವ ಕೊಡುಗೆ ಅಪಾರವಾಗಿದೆ. ಆ ನಿಟ್ಟಿನಲ್ಲಿ ಇದು ಪೊಲೀಸ್ ಇಲಾಖೆಗಳಲ್ಲಿಯೂ ಸಹ ಅಳವಡಿಸಿಕೊಳ್ಳಬೇಕಿದೆ. ಇಂತಹ ಮಹಾನ್ ಸೇನಾನಿಯ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಜನರಲ್ ತಿಮ್ಮಯ್ಯ ಅವರ ಕರ್ತವ್ಯ ಪ್ರಜ್ಞೆ, ಭಾರತೀಯ ಸೇನೆಗೆ ನೀಡಿರುವ ಕೊಡುಗೆಯನ್ನು ತಿಳಿದುಕೊಂಡು ಇಂದಿನ ಯುವಜನರು ಅವರ ಬದುಕನ್ನು ಅಳವಡಿಸಿಕೊಳ್ಳಬೇಕು ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರು ಮಾತನಾಡಿ ರಾಷ್ಟçಕಂಡ ಮೇರುಶಿಖರ ಜನರಲ್ ತಿಮ್ಮಯ್ಯ ಅವರಾಗಿದ್ದು, ಇಂಡೋ-ಚೈನಾ ಯುದ್ಧ ಸಂದರ್ಭದಲ್ಲಿ ದೇಶದ ರಕ್ಷಣೆ ಮತ್ತು ಸುರಕ್ಷತೆಗಾಗಿ ಚತುರತೆಯಿಂದ ಸೇನೆಯನ್ನು ಕಟ್ಟಿದ್ದಾರೆ ಎಂದು ಹೇಳಿದರು.
ಜನರಲ್ ತಿಮ್ಮಯ್ಯ ಅವರ ಮೌಲ್ಯಯುತ ಬದುಕು, ಸಮಯ ಮತ್ತು ಕರ್ತವ್ಯ ಪ್ರಜ್ಞೆಯನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದು ನುಡಿದರು.
ನಿವೃತ್ತ ಸೇನಾನಿ ಗೌಡಂಡ ತಿಮ್ಮಯ್ಯ ಅವರು ಮಾತನಾಡಿ 1906 ರ ಮಾರ್ಚ್, 31 ರಂದು ಜನಿಸಿದ ಜನರಲ್ ತಿಮ್ಮಯ್ಯ ಅವರು ಊಟಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು, ನಂತರ ಬೆಂಗಳೂರಿನ ಬಿಷಪ್ ಕಾಟನ್ ಬಾಲಕರ ಶಾಲೆಯಲ್ಲಿ, ಡೆಹರಾಡೂನ್‌ನ ಪ್ರಿನ್ಸ್ ಆಪ್ ವೇಲ್ಸ್ ರಾಯಲ್ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ ಶಿಕ್ಷಣ ಪಡೆದು, ನಂತರ ಇಂಗ್ಲೆAಡ್‌ನ ಸ್ಯಾಂಡ್‌ಅರ್ಟ್ಸ್ ರಾಯಲ್ ಮಿಲಿಟರಿ ಕಾಲೇಜಿನಲ್ಲಿ ತರಬೇತಿ ಪಡೆದು ಸೇನಾ ಕ್ಷೇತ್ರದಲ್ಲಿ ಅಗಾಧ ಸಾಧನೆ ಮಾಡಿದ್ದಾರೆ ಎಂದು ಹೇಳಿದರು.
1926 ರಲ್ಲಿ ಭಾರತೀಯ ಸೇನೆಗೆ ಸೇರ್ಪಡೆಯಾದ ಜನರಲ್ ತಿಮ್ಮಯ್ಯ ಅವರು ಎರಡನೇ ಮಹಾಯುದ್ಧದ ಸಮಯದಲ್ಲಿ ಇನ್‌ಪೆಂಟ್ರಿ ಬ್ರಿಗೇಡಿಗೆ ನೇತೃತ್ವ ವಹಿಸಿ ಏಕೈಕ ಭಾರತೀಯ ಸೈನಿಕ ಎಂಬ ಹೆಗ್ಗಳಿಕೆ ಅವರದ್ದಾಗಿದೆ ಎಂದು ಗೌಡಂಡ ತಿಮ್ಮಯ್ಯ ಅವರು ವಿವರಿಸಿದರು.
1948 ರಲ್ಲಿ ಪಾಕಿಸ್ತಾನದ ವಿರುದ್ಧದ ಕಾಶ್ಮೀರ ಕಾರ್ಯಾಚರಣೆಯಲ್ಲಿ ಟ್ಯಾಂಕ್‌ಗಳನ್ನು ಬಳಸಿಕೊಂಡು ಜಯ ಸಾಧಿಸುವಲ್ಲಿ ಜನರಲ್ ಕೆ.ಎಸ್.ತಿಮ್ಮಯ್ಯ ಅವರು ಪ್ರಮುಖ ಪಾತ್ರ ವಹಿಸಿದ್ದರು ಎಂದು ಅವರು ಸ್ಮರಿಸಿದರು.
1957 ರಲ್ಲಿ ಸೇನಾ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡು ಭಾರತೀಯ ಸೇನೆಯನ್ನು ಅತ್ಯುನ್ನತ ಸ್ಥಾನಕ್ಕೆ ಕೊಂಡೊಯ್ಯುತ್ತಾರೆ ಎಂದು ಅವರು ತಿಳಿಸಿದರು.
1961 ರಲ್ಲಿ ಸೇನೆಯಿಂದ ನಿವೃತ್ತರಾದ ನಂತರ ವಿಶ್ವ ಸಂಸ್ಥೆಯ ಶಾಂತಿಪಾಲನಾ ಪಡೆಯ ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ ಎಂದು ಗೌಡಂಡ ತಿಮ್ಮಯ್ಯ ಅವರು ಸ್ಮರಿಸಿದರು.

ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ತಹಶೀಲ್ದಾರರಾದ ಶ್ರೀಧರ, ನಗರಸಭೆ ಸದಸ್ಯರಾದ ಅನಿತಾ ಪೂವಯ್ಯ, ಸವಿತಾ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಪಪ್ಪು ತಿಮ್ಮಯ್ಯ, ಸಂಜು ಕಾವೇರಪ್ಪ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಪೌಂಡೇಶನ್‌ನ ಗೌರವ ಸಂಚಾಲಕರಾದ ತಮ್ಮು ಪೂವಯ್ಯ, ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷರಾದ ರತ್ನಾಕರ ರೈ, ನಿರ್ದೇಶಕರಾದ ಅನಿಲ್ ಎಚ್.ಟಿ., ವಿನೋದ್ ಅಂಬೆಕಲ್ಲು, ರೆಡ್‌ಕ್ರಾಸ್ ನಿರ್ದೇಶಕರಾದ ಪಿ.ಆರ್.ರಾಜೇಶ್, ರೋಟರಿ ವುಡ್ಸ್ ಕಾರ್ಯದರ್ಶಿ ಪ್ರಮಿಳಾ ಶೆಟ್ಟಿ, ನಿರ್ದೇಶಕರಾದ ಸ್ಮಿತಾ ಚಂಗಪ್ಪ, ಧನಂಜಯ ಶಾಸ್ತಿç, ಕೊಡವ ಮಕ್ಕಡ ಕೂಟದ ಸಂಚಾಲಕರಾದ ಬೊಳ್ಳಜಿರ ಅಯ್ಯಪ್ಪ, ಚೆಯ್ಯಂಡ ಸತ್ಯ, ಪೊಲೀಸ್ ಇಲಾಖೆಯ ವೃತ್ತ ನಿರೀಕ್ಷಕರಾದ ಪಿ.ಆರ್.ರಾಜು, ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್ ಕುಮಾರ್ ಇತರರು ಇದ್ದರು.
ವಿದ್ಯಾರ್ಥಿನಿಯರಾದ ಎ.ಎಸ್.ರಿಷಿತಾ ಮುತ್ತಮ್ಮ, ಯಶ್ಮಿತಾ ಎ.ಎಚ್., ಎ.ಆರ್.ದೇಚಮ್ಮ, ಚಿನ್ಮಯಿ ಎ.ಆರ್. ಅವರು ದೇಶಭಕ್ತಿಗೀತೆ ಹಾಡಿ ಗಮನ ಸೆಳೆದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಕುಮಾರ ಸ್ವಾಗತಿಸಿದರು. ರಮ್ಯ ಮಾಚಯ್ಯ ಪ್ರಾರ್ಥಿಸಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು. ಫೋಟೋ :: ತಿಮ್ಮಯ್ಯ







