ವಿರಾಜಪೇಟೆ, NEWS DESK ಮಾ.31: ವಿರಾಜಪೇಟೆ ಕೊಡವ ಸಮಾಜದ ಕೊಡವ ಪೊಮ್ಮಕ್ಕಡ ಒಕ್ಕೂಟದ ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಕೊಡವ ಸಮಾಜದಲ್ಲಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಕಲಾವಿದರು ಹಾಗೂ ಬರಹಗಾರರಾದ ಮೊನ್ನಂಡ ಶೋಭಾ ಸುಬ್ಬಯ್ಯ ರವರು ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ ಹೃದಯದ ಒಳಗೆ ಪ್ರೀತಿಯನ್ನು ಇಟ್ಟು ಮುನ್ನಡೆಸುವವಳು ಹೆಣ್ಣು. ಯಾವ ಲಾಭಕ್ಕೂ ಆಕೆ ಆಸೆ ಪಡದೇ ತನ್ನ ಜೀವನವನ್ನು ಸಂಸಾರಕ್ಕಾಗಿ ಮುಡಿಪಾಗಿಡುತ್ತಾಳೆ. ಗಂಡು ಹೆಣ್ಣು ಎಂಬ ಬೇಧವನ್ನು ಮಾಡದೇ ಎಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಎಲ್ಲರೂ ಬೆಳೆಸಿಕೊಳ್ಳಬೇಕು. ಹೆಣ್ಣು ಅಬಲೆಯಲ್ಲ ಆಕೆ ಸಬಲೆಯಾಗಿದ್ದಾಳೆ ಎಂದು ಹೇಳಿದರು. ಹೆಣ್ಣಿನ ಬಗೆಗಿನ ಕವನವನ್ನು ಅರ್ಥಪೂರ್ಣವಾಗಿ ರಚಿಸಿ ವಾಚಿಸಿದರು. ಕಾಣತಂಡ ಶೀಲ ರವರು ದಿನದ ಮಹತ್ವದ ಕುರಿತು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿರಾಜಪೇಟೆ ಕೊಡವ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ತಾತಂಡ ಜ್ಯೋತಿ ಪ್ರಕಾಶ್ ಮಾತನಾಡಿ ಮಹಿಳೆಯರು ಬುದ್ಧಿವಂತರು ಹಾಗೂ ಜ್ಞಾನವಂತರಾಗಿರುತ್ತಾರೆ. ಮಹಿಳೆಯರು ಮನೆಯಿಂದ ಹೊರಗೆ ಬಂದು ತಮ್ಮ ಜ್ಞಾನವನ್ನು ಪ್ರದರ್ಶಿಸಬೇಕು. ಜೊತೆಗೆ ಯಾವುದೇ ಸನ್ನಿವೇಶದಲ್ಲಿಯೂ ಸಮತೋಲನವನ್ನು ಸಾಧಿಸಿ ಸದೃಢ ಮನಸಿನಿಂದ ಸನ್ನಿವೇಶ ಅಥವಾ ಬದಲಾವಣೆಯನ್ನು ನಿಭಾಯಿಸಿ ಎಂದು ಕರೆ ಕೊಟ್ಟರು. ಈ ಸಂದರ್ಭದಲ್ಲಿ ಒಕ್ಕೂಟದ ಚುಮ್ಮಕ್ಕ ತಂಡದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕ್ರೀಡಾ ಹಾಗೂ ಭಾಷಣ ಸ್ಪರ್ಧೆಯನ್ನು ಆಯೋಜಿಸಿ ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಒಕ್ಕೂಟದ ಬ್ಯಾನರ್ ಹಾಗೂ ದೀಪವನ್ನು ಪೊನ್ನಕ್ಕ ತಂಡದವರಿಗೆ ಮುಂದಿನ ಕಾರ್ಯಕ್ರಮವನ್ನು ನಡೆಸಲು ಹಸ್ತಾಂತರಿಸಲಾಯಿತು. ಉದ್ದಪಂಡ ವಿಮಲ ಪ್ರಾರ್ಥಿಸಿ, ಮುರುವಂಡ ಉಷಾ ನೀಲಕಂಠ ಸ್ವಾಗತಿಸಿ , ಕಂಬಿರಂಡ ರೇಷ್ಮಾ ಚಿಣ್ಣಪ್ಪ ವಂದಿಸಿದರು. ಕಾರ್ಯಕ್ರಮದ ಬಳಿಕ ಸರ್ವರಿಗೂ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೊಡವ ಪೊಮ್ಮಕ್ಕಡ ಒಕ್ಕೂಟದ ಸರ್ವ ತಂಡಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.








