
ಮಡಿಕೇರಿ ಏ.2 NEWS DESK : ಚೇರಂಬಾಣೆ ಸಮೀಪದ ಬೇಂಗೂರಿನ ಶ್ರೀ ಸುಬ್ರಹ್ಮಣ್ಯ ದೇವಾಲಯದ ಪಂಚ ಲೋಹದ ಬಿಂಬ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮ ಕಲಶಾಭೀಷೆಕ ಏ.8ರಿಂದ 10ರವರೆಗೆ ನಡೆಯಲಿದೆಯೆಂದು ದೇವಾಲಯ ಸಮಿತಿ ಅಧ್ಯಕ್ಷರಾದ ಪಟ್ಟಮಾಡ ಡಿ.ಪೊನ್ನಪ್ಪ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಪಟ್ಟಮಾಡ ಕುಟುಂಬಸ್ಥರ ವತಿಯಿಂದ ದೇವಸ್ಥಾನದಲ್ಲಿ ಕಾರ್ಯಕ್ರಮಗಳು ಆಯೋಜಿತವಾಗಿದೆಯೆಂದರು. ಏ.8 ರಂದು ಸಂಜೆ 7 ಗಂಟೆಗೆ ಪ್ರಾರ್ಥನೆ, ಬಿಂಬ ಪರಿಗ್ರಹ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ ಮತ್ತು ವಾಸ್ತು ಬಲಿ ನಡೆಯಲಿದೆ. ಏ.9 ರಂದು ಬೆಳಗ್ಗೆ 7 ಗಂಟೆಗೆ ಗಣಪತಿ ಹೋಮ, ಬಿಂಬ ಶುದ್ಧಿ, ಕಲಶ ಪೂಜೆ, ಸ್ಕಂದ ಪ್ರಾಯಶ್ಚಿತ್ತ ಹೋಮ, ಶಾಂತಿ ಹೋಮ, ಪ್ರೋಕ್ತ ಹೋಮ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಪ್ರಾರ್ಥನೆ, ಸಂಹಾರ ತತ್ವ ಹೋಮ, ಕಲಶಾಭಿಷೇಕ, ಜೀವಕಲಶ ಪೂಜೆ, ಜೀವೋದ್ವಾಸನೆ, ಜೀವಕಲಶ, ಶಯ್ಯಾಗಮನ, ಶಯನ ಬಿಂಬ ಶುದ್ಧಿ ಜರುಗಲಿದೆ. ಸಂಜೆ 6 ಗಂಟೆಗೆ ಆದಿವಾಸ ಹೋಮ, ಧ್ಯಾನಾದಿವಾಸ, ಕುಂಬೇಶ ಕರ್ಕರಿ ಕಲಶ ಪೂಜೆ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಕಲಶಾಧಿವಾಸ, ಪ್ರಸಾದ ಅಧಿವಾಸ ಧಾರ್ಮಿಕ ಕಾರ್ಯಗಳು ಜರುಗಲಿದೆಯೆಂದು ವಿವರಗಳನ್ನಿತ್ತರು. ಏ.10 ರಂದು ಬೆಳಗ್ಗೆ 7 ಗಂಟೆಯಿಂದ ಗಣಪತಿ ಹೋಮ, ತತ್ವ ಕಲಶ ಪೂಜೆ, ತತ್ವ ಹೋಮ, ಮಧ್ಯಾಹ್ನ 11.41 ಗಂಟೆಯ ಮಿಥುನ ಲಗ್ನ ಮುಹೂರ್ತದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ಬಿಂಬ ಪ್ರತಿಷ್ಠೆ, ಜೀವ ಕಲಶಾಭಿಷೇಕ, ಪ್ರಾಣ ಪ್ರತಿಷ್ಠೆ, ಕಲಶಾಭಿಷೇಕ, ತತ್ವ ಕಲಶಾಭಿಷೇಕ, ಮಧ್ಯಾಹ್ನ 12.30 ಗಂಟೆಗೆ ಬ್ರಹ್ಮ ಕಲಶಾಭೀಷೆಕ, 1.30 ಗಂಟೆಗೆ ಮಹಾಪೂಜೆ, ಮಂತ್ರಾಕ್ಷತೆ, ಪ್ರಸಾದ ವಿತರಣೆ ನಡೆಯಲಿದೆಯೆಂದು ತಿಳಿಸಿದರು. 65 ಲಕ್ಷ ವೆಚ್ಚದಲ್ಲಿ ದೇವಾಲಯ ನಿರ್ಮಾಣ- ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪುನರ್ ನಿರ್ಮಾಣ ಕಾರ್ಯ 2023ರಲ್ಲಿ ಆರಂಭಗೊಂಡು ಇದೀಗ ಪ್ರತಿಷ್ಠಾ ಕಾರ್ಯಗಳು ನಡೆಯುತ್ತಿದೆ. ಒಟ್ಟು 65 ಲಕ್ಷ ವೆಚ್ಚದಲ್ಲಿ ದೇವಸ್ಥಾನದ ನಿರ್ಮಾಣ ಕಾರ್ಯಗಳು ನಡೆದಿದೆ. ದೇವಾಲಯದ ಪಂಚ ಲೋಹದ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ವಿಗ್ರಹವನ್ನು ಕಾಂಞಗಾಡ್‍ನ ವಿ.ಪಿ.ಪ್ರಕಾಶ್ ಅವರು ನಿರ್ಮಿಸಿಕೊಟ್ಟಿದ್ದು, ದೇವಸ್ಥಾನದ ವಾಸ್ತು ಶಿಲ್ಪಿಗಳಾಗಿ ಕಾಸರಗೋಡಿನ ರಮೇಶ್ ಕಾರಂತ್ ಅವರು ಕಾರ್ಯನಿರ್ವಹಿಸಿದ್ದಾಗಿ ಹೇಳಿದರು. ತಲಕಾವೇರಿ ದೇಗುಲದ ಜೀರ್ಣೊದ್ಧಾರ ಸಂದರ್ಭ ನಡೆದ ಅಷ್ಟಮಂಗಲ ಪ್ರಶ್ನೆಯ ಸಂದರ್ಭ, ಪಟ್ಟಮಾಡ ಕುಟುಂಬ ಈ ಹಿಂದೆ ತಲಕಾವೇರಿಗೆ ಸಲ್ಲಿಸುತ್ತಿದ್ದ ಸೇವೆ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ದೋಷ ಉಂಟಾಗಿರುವುದು ಕಂಡು ಬಂದಿತ್ತು. ಅದರಂತೆ ಪಟ್ಟಮಾಡ ಐನ್ ಮನೆಯಲ್ಲಿ ನಡೆಸಿದ ಅಷ್ಟಮಂಗಲ ಪ್ರಶ್ನೆಯಲ್ಲಿ ಶ್ರೀ ಸುಬ್ರಹ್ಮಣ್ಯ ದೇವರ ದೇವಸ್ಥಾನವನ್ನು ವಾಸ್ತು ಪ್ರಕಾರ ನಿರ್ಮಿಸುವಂತೆ ಮತ್ತು ಬ್ರಹ್ಮಕಲಶ ಮಾಡುವಂತೆ ಕಂಡು ಬಂದ ಹಿನ್ನೆಲೆಯಲ್ಲಿ ದೇವಸ್ಥಾನವನ್ನು ನಿರ್ಮಿಸಲಾಗಿದೆಯೆಂದು ವಿವರಗಳನ್ನಿತ್ತರು.ಗೋಷ್ಠಿಯಲ್ಲಿ ದೇವಸ್ಥಾನ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕಾರ್ಯದರ್ಶಿಗಳಾದ ಪಟ್ಟಮಾಡ ಬೋಪಣ್ಣ, ಹಿರಿಯ ಸದಸ್ಯರುಗಳಾದ ಪಟ್ಟಮಾಡ ಸತೀಶ್ ಸುಬ್ಬಯ್ಯ, ಪಟ್ಟಮಾಡ ದೀನಾ ಬೆಳ್ಯಪ್ಪ, ಪಟ್ಟಮಾಡ ಮಧು ಬಿದ್ದಪ್ಪ ಉಪಸ್ಥಿತರಿದ್ದರು.









