
ಸುಂಟಿಕೊಪ್ಪ ಏ.2 NEWS DESK : ಯಾವುದೇ ಶಾಲಾ ಕಾಲೇಜುಗಳಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ಎದುರಿಗೆ ಕಂಡಾಗ ನಮಸ್ಕರಿಸಿ ಗೌರವಿಸಲು ಆಗದಿದ್ದರೂ ಕನಿಷ್ಠ ಕಿರುನಗೆಯನ್ನಾದರೂ ಬಿರುವಂತೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಹೇಳಿದರು. ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಗದ್ದೆಹಳ್ಳದಲ್ಲಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಮಕ್ಕಳು ತಾವು ಕಲಿತ ಶಾಲೆಯನ್ನು ಮರೆಯಬಾರದು, ಶಿಕ್ಷಣ ನೀಡದ ಶಿಕ್ಷಕರನ್ನು ಎಂದಿಗೂ ಕಡೆಗಣಿಸ ಬೇಡಿ ಪ್ರಾಥಮಿಕ ಹಂತದಲ್ಲಿ ಪಡೆದಿರುವ ಶಿಕ್ಷಣವೇ ಪ್ರಮುಖ ಘಟ್ಟವಾಗಿರುತ್ತದೆ. ವಿದ್ಯಾರ್ಥಿಗಳು ಉತ್ತಮ ಸಾಧನೆಯನ್ನು ತೋರುವಂತಾಗಬೇಕು ಎಂದು ಪಿ.ಆರ್.ಸುನಿಲ್‍ಕುಮಾರ್ ಕರೆ ನೀಡಿದರು. ಶಾಲೆಯ ಮುಖ್ಯೋಪಾದ್ಯಾಯನಿ ಹೆಚ್.ಸಿ.ಹೇಮಕುಮಾರಿ ಮಾತನಾಡಿ, ಕಠಿಣ ಪರಿಶ್ರಮದಿಂದ ಮಾತ್ರ ಶಿಕ್ಷಣದಲ್ಲಿ ಉತ್ತಮ ಸಾಧನೆಯನ್ನು ಮಾಡಲು ಸಾಧ್ಯ. ಇದರಿಂದ ಉನ್ನತ ಹುದ್ದೆಗಳು ದೊರೆಯಲು ಸಾಧ್ಯವೆಂದು ಹೇಮಲತಾ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷೆ ಅನಿತಾ ವಹಿಸಿದ್ದರು. ಇದೇ ಸಂದರ್ಭ ತಮ್ಮಗೆ ಶಿಕ್ಷಣ ನೀಡಿದ ಶಿಕ್ಷಕರುಗಳನ್ನು ನೆನಪಿನ ಕಾಣಿಕೆಗಳನ್ನು ನೀಡಿ ವಿದ್ಯಾರ್ಥಿಗಳು ಗೌರವಿಸಿದರು. ವೇದಿಕೆಯಲ್ಲಿ ಗ್ರಾ.ಪಂ ಮಾಜಿ ಅಧ್ಯಕ್ಷ ಕೆ.ಇ.ಕರೀಂ, ಮಾಜಿ ಉಪಾಧ್ಯಕ್ಷೆ ನಳಿನಿ ಲೋಕೇಶ್, ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ರವಿ, ಎಸ್‍ಡಿಎಂಸಿ ಮಾಜಿ ಅಧ್ಯಕ್ಷೆ ಬಲ್ಕಿಸ್, ಸಹ ಶಿಕ್ಷಕರುಗಳಾದ ಮಂಜುನಾಥ್, ಮೀನಾಕುಮಾರಿ, ಅನಿತಾ, ಯಶೋಧ ಎಸ್‍ಡಿಎಂಸಿ ಸದಸ್ಯರು ಈ ಸಂದರ್ಭದಲ್ಲಿ ಇದ್ದರು.









