
ಮಡಿಕೇರಿ ಏ.9 NEWS DESK : ನಗರದ ನಗರಸಭೆ ಆವರಣದಲ್ಲಿರುವ ಹಳೆಯ ಕಾವೇರಿ ಕಲಾಕ್ಷೇತ್ರ(ಟೌನ್ ಹಾಲ್) ಕಟ್ಟಡವನ್ನು ತೆರವುಗೊಳಿಸಿ ಸುಸಜ್ಜಿತವಾದ ಎರಡು ಅಂತಸ್ತಿನ ವಾಹನ ನಿಲುಗಡೆ ಹಾಗೂ 450 ಆಸನ ಒಳಗೊಂಡ ಸಭಾಭವನ ಕಟ್ಟಡ ನಿರ್ಮಾಣಕ್ಕೆ ಶಾಸಕರಾದ ಡಾ.ಮಂತರ್ ಗೌಡ ಅವರು ಗುರುವಾರ ಭೂಮಿ ಪೂಜೆ ನೆರವೇರಿಸಿದರು. ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ, ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚುರಂಜನ್, ಎಂ.ಸಿ.ನಾಣಯ್ಯ, ನಗರಸಭೆ ಉಪಾಧ್ಯಕ್ಷರಾದ ಮಹೇಶ್ ಜೈನಿ, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಅರುಣ್ ಮಾಚಯ್ಯ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷರಾದ ತೀತಿರ ಧರ್ಮಜ ಉತ್ತಪ್ಪ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ವಿಧಾನ ಪರಿಷತ್ ಮಾಜಿ ಸದಸ್ಯರಾದ ವೀಣಾ ಅಚ್ಚಯ್ಯ, ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷರಾದ ಮಂದ್ರೀರ ಮೋಹನ್‍ದಾಸ್, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕಾಳಚಂಡ ಅಪ್ಪಣ್ಣ, ಎಸ್.ಸಿ.ಸತೀಶ್, ಅರುಣ್ ಶೆಟ್ಟಿ, ಶಾರದಾ ನಾಗರಾಜ್, ನಗರಸಭೆ ಸದಸ್ಯರಾದ ಅನಿತಾ ಪೂವಯ್ಯ, ಸವಿತಾ ರಾಕೇಶ್, ಉಮೇಶ್ ಸುಬ್ರಮಣಿ, ಚಂದ್ರಶೇಖರ್, ಸಬಿತಾ, ಶ್ವೇತಾ ಪ್ರಶಾಂತ್, ಚಿತ್ರಾವತಿ, ಅಮೀನ್ ಮೊಹಿಸಿನ್, ಬಶೀರ್ ಅಹ್ಮದ್, ಮನ್ಸೂರ್, ಮೇರಿ ವೇಗಸ್, ಮುತ್ತುರಾಜು, ಜಗದೀಶ್, ಜುಲೈಕಾಬಿ, ಸದಾ ಮುದ್ದಪ್ಪ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಅಜ್ಜಿನಿಕಂಡ ಮಹೇಶ್ ನಾಚಯ್ಯ,, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿ, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಕೇಶವ ಕಾಮತ್, ಜಾನಪದ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ.ಜಿ.ಅನಂತಶಯನ, ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ರಾಣಿ ಮಾಚಯ್ಯ, ಪ್ರಮುಖರಾದ ಶಾಂತೆಯಂಡ ರವಿಕುಶಾಲಪ್ಪ, ನಾಪಂಡ ರವಿಕಾಳಪ್ಪ, ಟಿ.ಪಿ.ರಮೇಶ್, ಕೆ.ಪಿ.ಚಂದ್ರಕಲಾ, ಚುಮ್ಮಿ ದೇವಯ್ಯ, ಎಚ್.ಎಂ.ನಂದಕುಮಾರ್, ಎಂ.ಪಿ.ಮುತ್ತಪ್ಪ, ಜಿ.ರಾಜೇಂದ್ರ, ಎಂ.ಎ.ನಿರಂಜನ, ಜಿ.ಚಿದ್ವಿಲಾಸ್, ಅಂಬೆಕಲ್ಲು ಕುಶಾಲಪ್ಪ, ನಗರಸಭಾ ಸದಸ್ಯರು, ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಇತರರು ಇದ್ದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರಾದ ಡಾ.ಮಂತರ್ ಗೌಡ ಅವರು 9.50 ಕೋಟಿ ರೂ. ವೆಚ್ಚದಲ್ಲಿ ಮುಖ್ಯಮಂತ್ರಿ ಅವರ ಅಮೃತ ನಗರೋತ್ಥಾನ ಯೋಜನೆಯಡಿ ಹಳೆ ಕಾವೇರಿ ಕಲಾಕ್ಷೇತ್ರ ಕಟ್ಟಡ ತೆರವುಗೊಳಿಸಿ ನೂತನ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಎಂದು ಹೇಳಿದರು. 1953 ರಲ್ಲಿ ಆರಂಭವಾದ ಟೌನ್‍ಹಾಲ್, ಅಂದಿನ ಕಾಲದಲ್ಲಿ ಉನ್ನತ ಕಟ್ಟಡವಾಗಿತ್ತು. ಕಾಲ ಕ್ರಮೇಣ ಎಲ್ಲವೂ ಬದಲಾವಣೆ ಅನಿವಾರ್ಯ. ಆ ನಿಟ್ಟಿನಲ್ಲಿ ಟೌನ್‍ಹಾಲ್ ಇತಿಹಾಸ ಪುಟ ಸೇರುತ್ತಿದೆ ಎಂದು ಶಾಸಕರು ಹೇಳಿದರು. 2013 ಕ್ಕೂ ಹಿಂದೆ ದಸರಾವನ್ನು ಕಾವೇರಿ ಕಲಾಕ್ಷೇತ್ರದಲ್ಲಿಯೇ ಆಯೋಜಿಸುತ್ತಿದ್ದರು. ನಂತರದ ದಿನಗಳಲ್ಲಿ ಗಾಂಧಿ ಮೈದಾನಕ್ಕೆ ಸ್ಥಳಾಂತರವಾಯಿತು. ಆ ನಿಟ್ಟಿನಲ್ಲಿ ಪ್ರವಾಸಿ ಕೇಂದ್ರವಾದ ರಾಜಾಸೀಟು ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ರಜೆ ಅವಧಿಯ ವಾರಾಂತ್ಯದಲ್ಲಿ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡುವುದು ಸೇರಿದಂತೆ ಹಲವು ಅಭಿವೃದ್ಧಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆ ನಿಟ್ಟಿನಲ್ಲಿ ನೂತನ ಕಾವೇರಿ ಕಲಾಕ್ಷೇತ್ರದಲ್ಲಿ ತಳ ಮಹಡಿಯಲ್ಲಿ ಎರಡು ಅಂತಸ್ತಿನಲ್ಲಿ 150 ಕಾರುಗಳು ಮತ್ತು 100 ಬೈಕ್‍ಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗುತ್ತದೆ. ಹಾಗೆಯೇ 500 ಜನರು ಕುಳಿತುಕೊಳ್ಳುವ ಸಭಾಭವನವನ್ನು ನಿರ್ಮಿಸಲಾಗುತ್ತದೆ ಎಂದು ಡಾ.ಮಂತರ್ ಗೌಡ ಅವರು ವಿವರಿಸಿದರು. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ., ಭದ್ರತಾ ಕೊಠಡಿ, ವಾಣಿಜ್ಯ ಮಳಿಗೆಗಳನ್ನು ಒಳಗೊಂಡಿರುತ್ತದೆ ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ಹೇಳಿದರು.
ಅಭಿವೃದ್ದಿ ವಿಚಾರದಲ್ಲಿ ಪಕ್ಷಾತೀತವಾಗಿ ಮತ್ತು ಜಾತ್ಯಾತೀತವಾಗಿ ಎಲ್ಲರ ಸಹಕಾರ ಪಡೆದು ಕೆಲಸ ಮಾಡಲಾಗುತ್ತದೆ. ಎಲ್ಲರೂ ಕೈಜೋಡಿಸಿದಾಗ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಲ್ಲಿ ಶ್ರಮಿಸಲಾಗುತ್ತಿದೆ ಎಂದು ಹೇಳಿದರು. ಮಡಿಕೇರಿಯಲ್ಲಿ ಹೆಚ್ಚಿನ ಮಳೆಯಾಗುವುದರಿಂದ ಗುಣಮಟ್ಟದ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ. ಒಟ್ಟಾರೆ ಜಿಲ್ಲಾ ಕೇಂದ್ರದ ಕಾವೇರಿ ಕಲಾಕ್ಷೇತ್ರ ಕಲಾಭವನ ಸುಸಜ್ಜಿತ ಕಟ್ಟಡ ಹೊಂದಿ ಎಲ್ಲರಿಗೂ ಉಪಯುಕ್ತವಾಗಬೇಕು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಈಗಿರುವ ನಗರಸಭೆ ಕಟ್ಟಡವನ್ನು ಮೇಲ್ದರ್ಜೆಗೇರಿಸಲು ಪ್ರಯತ್ನಿಸಲಾಗುವುದು ಎಂದು ಶಾಸಕರಾದ ಡಾ.ಮಂತರ್ ಗೌಡ ಅವರು ತಿಳಿಸಿದರು. ವಿಧಾನ ಪರಿಷತ್ ಸದಸ್ಯರಾದ ಎಂ.ಪಿ.ಸುಜಾ ಕುಶಾಲಪ್ಪ ಅವರು ಮಾತನಾಡಿ ಕೊಡಗು ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದ್ದರಿಂದ ಮಡಿಕೇರಿ ನಗರದಲ್ಲಿ ವಾಹನ ನಿಲುಗಡೆ, ಸುಗಮ ಸಾರಿಗೆ ಸಂಚಾರ, ಮತ್ತಿತರ ಮೂಲ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಆ ನಿಟ್ಟಿನಲ್ಲಿ ಕಾವೇರಿ ಕಲಾಕ್ಷೇತ್ರ ಹಳೇ ಕಟ್ಟಡದ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣವಾಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದರು. ಇಂದಿನ ಕಂಪ್ಯೂಟರ್ ಯುಗದಲ್ಲಿ ಜಗತ್ತು ವೇಗವಾಗಿ ಬೆಳೆಯುತ್ತಿದ್ದು, ಬದಲಾವಣೆ ಅತ್ಯಗತ್ಯ. ಆ ನಿಟ್ಟಿನಲ್ಲಿ ಸಾರ್ವಜನಿಕರಿಗೆ, ಎಲ್ಲರಿಗೂ ಅನುಕೂಲವಾಗುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ ಎಂದರು. ಸ್ಥಳೀಯರಿಗೆ ಆದ್ಯತೆ ಮೇಲೆ ಕೆಲಸ ಮಾಡಿಕೊಡಬೇಕಿದೆ. ಹೊಸ ಕಟ್ಟಡವನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಬೇಕು ಎಂದು ಸುಜಾ ಕುಶಾಲಪ್ಪ ಅವರು ಹೇಳಿದರು. ಮಾಜಿ ಸಚಿವರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಾತನಾಡಿ ಕಾವೇರಿ ಕಲಾಕ್ಷೇತ್ರ ಹಳೇ ಕಟ್ಟಡವನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕೆ ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಸವರಾಜು ಬೊಮ್ಮಾಯಿ ಅವರು 2023 ರ ಮಾರ್ಚ್, 18 ರಂದು ಭೂಮಿ ಪೂಜೆ ನೆರವೇರಿಸಿದ್ದರು (ಗಾಂಧಿ ಮೈದಾನದಲ್ಲಿ ಸರ್ಕಾರದ ಹಲವು ಕಾಮಗಾರಿಗಳಿಗೆ ಭೂಮಿ ಪೂಜೆ ಮತ್ತು ಉದ್ಘಾಟನಾ ಕಾರ್ಯಕ್ರಮ) ಎಂದು ಸ್ಮರಿಸಿದರು. ಹಿಂದಿನ ಸರ್ಕಾರದ ಅವಧಿಯಲ್ಲಿಯೇ 9.50 ಕೋಟಿ ರೂ.ವನ್ನು ಬಿಡುಗಡೆ ಮಾಡಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಉಳಿದಂತೆ 7 ಕೋಟಿ ರೂ.ವನ್ನು ಶಾಸಕರು ಬಿಡುಗಡೆ ಮಾಡಿಸಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡುವಂತಾಗಲಿ ಎಂದು ಅಪ್ಪಚ್ಚು ರಂಜನ್ ಅವರು ಆಶಿಸಿದರು. ಹಿಂದಿನ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಅಮೃತ ನಗರೋತ್ಥಾನ ಯೋಜನೆಯಡಿ 40 ಕೋಟಿ ರೂ. ವನ್ನು ಬಿಡುಗಡೆ ಮಾಡಿಸಲಾಗಿತ್ತು ಎಂದು ಇದೇ ಸಂದರ್ಭದಲ್ಲಿ ಎಂ.ಪಿ.ಅಪ್ಪಚ್ಚುರಂಜನ್ ಅವರು ಸ್ಮರಿಸಿದರು.
ಈ ಹಿಂದೆ ಎಂ.ಸಿ.ನಾಣಯ್ಯ ಅವರು ಮಡಿಕೇರಿ ಪುರಸಭೆ ಅಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಆ ನಿಟ್ಟಿನಲ್ಲಿ ಮಡಿಕೇರಿಯನ್ನು ಸುಂದರ ನಗರವನ್ನಾಗಿ ಮಾಡಲು ಎಲ್ಲರೂ ಕೈಜೋಡಿಸುವಂತಾಗಬೇಕು ಎಂದರು. ಮಾಜಿ ಸಚಿವರು ಹಾಗೂ ಮಡಿಕೇರಿ ಪುರಸಭೆ ಮಾಜಿ ಅಧ್ಯಕ್ಷರಾದ ಎಂ.ಸಿ.ನಾಣಯ್ಯ ಅವರು ಮಾತನಾಡಿ ಕೊಡಗು ರಾಜ್ಯವಾಗಿದ್ದ ಸಂದರ್ಭದಲ್ಲಿ 1952 ರಲ್ಲಿ ಟೌನ್‍ಹಾಲ್‍ನ್ನು ನಿರ್ಮಿಸಲಾಗಿತ್ತು. 1963 ರಲ್ಲಿ ಪುರಸಭೆ ಸದಸ್ಯನಾಗಿ, 1969 ರಲ್ಲಿ ಪುರಸಭೆ ಅಧ್ಯಕ್ಷನಾಗಿ ಕೆಲಸ ಮಾಡಿದ್ದೇನೆ. 1974 ರಲ್ಲಿ ಟೌನ್‍ಹಾಲ್‍ನಲ್ಲಿಯೇ ನನ್ನ ಮದುವೆ ಆಗಿರುವುದು ವಿಶೇಷ ಎಂದು ಸ್ಮರಿಸಿಕೊಂಡರು.
ಮಡಿಕೇರಿ ನಗರದಲ್ಲಿ 1952 ರಲ್ಲಿ 13 ಸಾವಿರ ಜನಸಂಖ್ಯೆ ಇತ್ತು, ಇಂದು 30 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಮಡಿಕೇರಿ ಪುರಸಭೆಯನ್ನು ನಗರಸಭೆಯನ್ನಾಗಿ ಸದನದಲ್ಲಿ ಚರ್ಚಿಸಿ ಮೇಲ್ದರ್ಜೆಗೇರಿಸಿದ್ದೇನೆ. ಒಂದು ನಗರಸಭೆಗೆ 50 ಸಾವಿರ ಜನಸಂಖ್ಯೆ ಬೇಕಿದ್ದು, ಆದರೂ ಸಹ ಅಧಿವೇಶನದಲ್ಲಿ ಸರ್ಕಾರದ ಗಮನಸೆಳೆದು ನಗರಸಭೆಯನ್ನಾಗಿ ಮಾಡಲು ಶ್ರಮಿಸಿದ್ದೇನೆ ಎಂದು ಎಂ.ಸಿ.ನಾಣಯ್ಯ ಅವರು ನುಡಿದರು. ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷರಾದ ಧರ್ಮಜ ಉತ್ತಪ್ಪ ಅವರು ಮಾತನಾಡಿ ತಮಿಳುನಾಡಿನ ಊಟಿಯಲ್ಲಿ ಪ್ಲಾಸ್ಟಿಕ್‍ನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ. ಸ್ವಚ್ಛತೆಗೆ ಮತ್ತು ವಾಹನ ನಿಲುಗಡೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಊಟಿ ಮಾದರಿಯಲ್ಲಿ ಮಡಿಕೇರಿ ನಗರವನ್ನು ಅಭಿವೃದ್ಧಿ ಪಡಿಸುವಂತಾಗಬೇಕು ಎಂದು ಸಲಹೆ ಮಾಡಿದರು. ನಗರಸಭೆ ಉಪಾಧ್ಯಕ್ಷರಾದ ಮಹೇಶ್ ಜೈನಿ ಅವರು ಮಾತನಾಡಿ ಮಡಿಕೇರಿ ನಗರ ಅಭಿವೃದ್ಧಿಗೆ ಮಾಜಿ ಶಾಸಕರು ಹಾಗೂ ಹಾಲಿ ಶಾಸಕರು ಶ್ರಮಿಸಿದ್ದಾರೆ. ಈ ಹಿಂದೆ ರಾಜಾಸೀಟನ್ನು ಅಭಿವೃದ್ಧಿಪಡಿಸುವಲ್ಲಿ ಗ್ರೇಟರ್ ರಾಜಾಸೀಟು ಅಭಿವೃದ್ಧಿ ಪಡಿಸಿದ್ದಾರೆ ಎಂದು ಅವರು ಗುಣಗಾನ ಮಾಡಿದರು. ನಗರಸಭೆ ಸದಸ್ಯರಾದ ಅಮೀನ್ ಮೊಹಿಸಿನ್ ಅವರು ಮಾತನಾಡಿ ಮಡಿಕೇರಿ ನಗರ ಅಭಿವೃದ್ಧಿಗೆ ಎಲ್ಲರೂ ಸಹ ಕೈಜೋಡಿಸಿದ್ದಾರೆ. ಮುಂದಿನ ದಿನಗಳಲ್ಲೂ ಕೈಜೋಡಿಸಿ ಅಭಿವೃದ್ಧಿಯತ್ತ ಮುನ್ನಡೆಯುವಂತಾಗಬೇಕು ಎಂದರು. ನಗರಸಭೆ ಪೌರಾಯುಕ್ತರಾದ ಎಚ್.ಆರ್.ರಮೇಶ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ನೂತನ ಕಟ್ಟಡದಲ್ಲಿ ಎರಡು ತಳಮಹಡಿಗಳನ್ನು ಪಾರ್ಕಿಂಗ್‍ಗೆ ಕಾಯ್ದಿರಿಸಿ 2 ತಳಮಹಡಿಯಲ್ಲಿ ಒಟ್ಟಾಗಿ ಅಂದಾಜು 200 ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ, ನೆಲಮಹಡಿಯಲ್ಲಿ ಕಚೇರಿ ಕಟ್ಟಡ, ವಾಣಿಜ್ಯ ಮಳಿಗೆಗಳು, ಶೌಚಾಲಯ, ಪಾರ್ಕಿಂಗ್ ವ್ಯವಸ್ಥೆ ಹಾಗೂ ಮೊದಲ ಮಹಡಿಯಲ್ಲಿ ಸುಮಾರು 450 ಜನರಿಗೆ ಆಸನಗಳ ವ್ಯವಸ್ಥೆ ಜೊತೆ ವಿಶಾಲವಾದ ವೇದಿಕೆ, ಗ್ರೀನ್ ರೂಮ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ವಿವರಿಸಿದರು. ನಗರಸಭೆ ಸದಸ್ಯರಾದ ಅನಿತಾ ಪೂವಯ್ಯ ಸ್ವಾಗತಿಸಿದರು. ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ವಿನೋದ್ ಮೂಡಗದ್ದೆ ನಿರೂಪಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ರೇವತಿ ರಮೇಶ್, ಚೊಕ್ಕಾಡಿ ಪ್ರೇಮ ರಾಘವಯ್ಯ ಮತ್ತು ಸುಶೀಲ ವಾಸುದೇವ್ ಅವರು ನಾಡಗೀತೆ ಹಾಡಿದರು, ಸ್ವಾತಿ ಮತ್ತು ತಂಡದವರು ಪ್ರಾರ್ಥಿಸಿದರು, ನಗರಸಭೆ ಅಧ್ಯಕ್ಷರಾದ ಪಿ.ಕಲಾವತಿ ವಂದಿಸಿದರು.









