
ಮಡಿಕೇರಿ ಏ.11 NEWS DESK : ತಿಂಗಳ ಒಳಗಾಗಿ ರಾಜ್ಯದ ಬಗರ್ ಹುಕುಂ ಸಾಗುವಳಿದಾರರಿಗೆ ಸಂಬಂಧಿಸಿದಂತೆ ಸರ್ಕಾರ ಅಗತ್ಯ ತೀರ್ಮಾನಗಳನ್ನು ಕೈಗೊಂಡು ನೆಲೆ ಇಲ್ಲದವರಿಗೆ ನೆಲೆಯೊದಗಿಸದಿದ್ದಲ್ಲಿ “ಮಾಡು ಇಲ್ಲವೆ ಮಡಿ” ಚಳವಳಿಯನ್ನು ರಾಜ್ಯ ವ್ಯಾಪಿ ಹಮ್ಮಿಕೊಳ್ಳುವುದು ಮಾತ್ರವಲ್ಲ, ಮೇ1 ರಿಂದ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಅನಿರ್ದಿಷ್ಟಾವಧಿ ಹೋರಾಟವನ್ನು ಆರಂಭಿಸುವುದಾಗಿ ಭೂಮಿ ಮತ್ತು ವಸತಿ ಹಕ್ಕು ವಂಚಿತ ಹೋರಾಟ ಸಮಿತಿ ಸ್ಪಷ್ಟಪಡಿಸಿದೆ. ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪದಾಧಿಕಾರಿಗಳು, ರಾಜ್ಯದಲ್ಲಿ ಲಕ್ಷಾಂತರ ಸಂಖ್ಯೆಯ ಬಗರ್ ಹುಕುಂ ಸಾಗುವಳಿದಾರರು, ಅರಣ್ಯ ಭೂಮಿ ಹಕ್ಕು ಪ್ರದಿಪಾದಿಸುತ್ತಿರುವವರು ಹಲ ದಶಕಗಳಿಂದ ಭೂಮಿಯ ಹಕ್ಕಿಗಾಗಿ ಕಾಯುತ್ತಲೆ ಇದ್ದಾರೆ. ಇಲ್ಲಿಯವರೆಗು ಅಧಿಕಾರಕ್ಕೆ ಬಂದ ಎಲ್ಲಾ ಸರ್ಕಾರಗಳು ಹುಸಿ ಭರವಸೆಗಳನ್ನು ನೀಡಿವೆಯೇ ಹೊರತು ತಮ್ಮ ಮೂಲಬೇಡಿಕೆಗಳ ಈಡೇರಿಕೆಯತ್ತ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಿದರು. ಅರಣ್ಯದ ಅಂಚಿನ ಭಾಗಗಳು, ಗೋಮಾಳ, ಸರ್ಕಾರಿ ಜಾಗಗಳಲ್ಲಿ ಹಲವಾರು ದಶಕಗಳಿಂದ ಸಾಗುವಳಿ ಮಾಡಿಕೊಂಡು ಬರುತ್ತಿರುವ ಭೂ ಹೀನರು, ತಾವಿರುವ ಜಾಗದ ಹಕ್ಕು ಪತ್ರಕ್ಕಾಗಿ ಫಾರಂ ನಂ.50,53,57 ನ್ನು ಸಲ್ಲಿಸಿ, ಭೂ ಮಂಜೂರಾತಿಗೆ ಆಗ್ರಹಿಸುತ್ತಲೆ ಬಂದಿದ್ದರು ಆಡಳಿತ ವ್ಯವಸ್ಥೆ ಮೌನವಾಗಿ ಉಳಿದೆಯೆಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ಮಾಡಿಕೊಡಲು ಕಾನೂನಿಗಿಂತಲು ಮುಖ್ಯವಾಗಿ ಇಚ್ಛಾ ಶಕ್ತಿಯ ಅಗತ್ಯವಿದೆ. ಸರ್ಕಾರ ಈಗಾಗಲೆ ಗೋಮಾಳ ಸೇರಿದಂತೆ ಇನ್ನಿತರ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವವರಿಗೆ ನೋಟಿಸ್ ನೀಡಿ ತೆರವಿಗೆ ಮುಂದಾಗಿದೆ. ಇಂತಹ ನೋಟಿಸನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು. ಭೂ ಮಂಜೂರಾತಿಗೆ ಅಡ್ಡಿಯಾಗಿರುವ ಕಾನೂನುಗಳನ್ನು ತಿದ್ದುಪಡಿ ಮಾಡಿ ಅಥವಾ ಸಡಿಲಿಸುವ ಮೂಲಕ ವಸತಿ ರಹಿತರಿಗೆ ನಿವೇಶನ, ಮನೆಗಳನ್ನು ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಸ್ವಾವಲಂಬಿ ಜೀವನ ಮತ್ತು ಗೌರವಯುತ ಬಾಳು ಎಲ್ಲರದ್ದೂ ಆಗಬೇಕೆಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಪ್ರತಿಪಾದಿಸಿದ್ದರು. ಇಂದು ಅವರ 109ನೇ ಹುಟ್ಟು ಹಬ್ಬವಾಗಿದ್ದು, ಸರ್ಕಾರ ಅವರ ಮಾತಿನಂತೆ ಬಡವರಿಗೆ ಭೂಮಿ, ನೆತ್ತಿಯ ಮೇಲೊಂದು ಸೂರು ಜಾರಿ ಮಾಡುವ ಮೂಲಕ ಅವರ ಆಶಯಕ್ಕೆ ಗೌರವ ಸಲ್ಲಿಸಬೇಕು ಎಂದು ಒತ್ತಾಯಿಸಿದರು. ಗೋಷ್ಠಿಯಲ್ಲಿ ಸಮಿತಿಯ ಪ್ರಮುಖರಾದ ಅಮೀನ್ ಮೊಹಿಸಿನ್, ಡಿ.ಎಸ್.ನಿರ್ವಾಣಪ್ಪ,. ಹೆಚ್.ಜೆ. ಪ್ರಕಾಶ್, ಕೆ. ಮೊಣ್ಣಪ್ಪ ಉಪಸ್ಥಿತರಿದ್ದರು.









