
ಮಡಿಕೇರಿ ಮೇ 1 NEWS DESK : ಬರಹ : ಗೀತಾಂಜಲಿ ಎನ್.ಎಮ್ ಸೋಮವಾರಪೇಟೆ* ಬುದ್ಧ ಎಂದರೆ ಹಾಗೇ ಶಾಂತಿ, ಸಮಾಧಾನ, ಮಂದಹಾಸ, ಆತ್ಮ ಜ್ಞಾನ ಹಾಗೂ ಅಂತರಾಳದೊಳಗಿನ ಒಂದು ನೆಮ್ಮದಿಯ ಅನುಭವ. ಜೀವನ ಕೆಲವೊಮ್ಮೆ ಗೊಂದಲಗಳ ಗೂಡಾಗಿರುತ್ತದೆ ಅಂತಹ ಸಮಯದಲ್ಲಿ ಮನ ಸಾಂತ್ವನ,ಸಮಾಧಾನ ಬೇಡುತ್ತದೆ.ಹಾಗಾದಾಗ ಆ ಎಲ್ಲಾ ಗೊಂದಲಗಳ ಮಧ್ಯೆ ಮನಸಿಗೆ ತಂಪು ನೀಡಿ ಸಾಂತ್ವನವನ್ನು ಪಸರಿಸುವ ಒಂದು ನಿಶ್ಶಬ್ದದ ಶಕ್ತಿ ಎಂದರೆ ಅದು ಬುದ್ಧನ ತತ್ವಗಳು ಮತ್ತು ಚಿಂತನೆಗಳು ಎಂದರೆ ತಪ್ಪಿಲ್ಲ…! ಬುದ್ಧನ ಚಿಂತನೆಗಳು ಕೇವಲ ಧಾರ್ಮಿಕ ಮಿತಿಗಳಲ್ಲಿ ಸೀಮಿತವಾಗಿಲ್ಲ, ಅವು ಸಾಮಾಜಿಕ ಸಮಾನತೆ, ನೈತಿಕತೆ ಮತ್ತು ಮಾನವೀಯತೆಯ ಪರಿಕಲ್ಪನೆಗಳನ್ನು ಕೂಡ ಬಲಪಡಿಸುತ್ತವೆ. ಜಾತಿ-ಭೇದ ಮತ್ತು ಅಂಧ ಶ್ರದ್ಧೆಗಳ ವಿರುದ್ಧ ಧ್ವನಿಯಾಗಿದ್ದ ಅವರು ಸ್ಥಾಪಿಸಿದ ಬೌದ್ಧ ಧರ್ಮವು ಸಮಾಜದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿ ನವ ನವೀನ ಚಿಂತನೆಗಳಿಗೆ ದಾರಿಮಾಡಿಕೊಟ್ಟಿತು. ಮಾನವ ಜೀವನದ ಆಳವಾದ ಸತ್ಯಗಳನ್ನು ಅನ್ವೇಷಿಸಿ, ‘ಆಸೆಯೇ ದುಃಖಕ್ಕೆ ಮೂಲ’ವೆಂಬ ಸತ್ಯ ಸಂದೇಶ ಸಾರಿದ ಬುದ್ಧ, ದುಃಖದ ಮೂಲ ಮತ್ತು ಅದರ ಪರಿಹಾರ ಮಾರ್ಗವನ್ನು ಸ್ಪಷ್ಟವಾಗಿ ಅರಿತು ಬೋಧಿಸಿದರು, ಮಹಾನ್ ತತ್ವಜ್ಞಾನಿಯಾಗಿ ಆಧ್ಯಾತ್ಮಿಕತೆಯ ಚಿಂತನೆಗೆ ಅಮೂಲ್ಯ ಹಾಗೂ ಶಾಶ್ವತವಾದ ಕೊಡುಗೆಯನ್ನು ನೀಡಿ ಜ್ಞಾನಿಯಾಗಿ, ಶ್ರೇಷ್ಠ ತಪಸ್ವಿಯಾಗಿ, ಮಾನವೀಯತೆಯ ಪ್ರತೀಕವಾಗಿ ಕೊಂಗೊಳಿಸುತ್ತ ಜಗತ್ಪ್ರಸಿದ್ಧಿ ಪಡೆದು ಶಾಂತಿಯ ಸಂಕೇತವಾಗಿದ್ದಾರೆ. ಹಾಗಾಗಿ ಬುದ್ಧನ ಉಪದೇಶಗಳು ಕಾಲದ ಮಿತಿಗಳನ್ನು ದಾಟಿ ಇಂದಿಗೂ ಪ್ರಸ್ತುತವಾಗಿದ್ದು, ವಿಶ್ವಮಾನವೀಯ ಮೌಲ್ಯಗಳ ರೂಪದಲ್ಲಿ ಉಳಿದಿವೆ. ದುಃಖದಿಂದ ಬಳಲುತ್ತಿರುವ ಮನಸ್ಸಿಗೆ ಶಕ್ತಿಯಾಗಿ, ದಾರಿದೀಪವಾಗಿ ನಿಂತ ಮಹಾನ್ ತತ್ವಜ್ಞಾನಿ ಗೌತಮ ಬುದ್ಧ ಮಾನವನಿಗೆ ಬದುಕುವ ಸರಳ ಸತ್ಯಗಳನ್ನು ತಿಳಿಸಿದರು. ಕೋಪ, ಆಸೆ, ದುಃಖ ಇವೆಲ್ಲ ಜೀವನದ ಭಾಗವೇ ಆಗಿದ್ದರೂ, ಅವನ್ನು ಹೇಗೆ ಎದುರಿಸಬೇಕು ಎಂಬುದನ್ನು ಬುದ್ಧ ತನ್ನ ಜೀವನದ ಮೂಲಕವೇ ಸಾಕ್ಷೀಕರಿಸಿದನು. ಹಾಗಾಗಿ ಅನುಭವದ ಅವರ ನೈಜ ನುಡಿಗಳು ಮನಸ್ಸು ದುಃಖ ದುಗುಡದಿಂದ ತುಂಬಿದಾಗ ಸಮಾಧಾನದ ಹೆಗಲಾಗಿ ಶಾಂತಿಯನ್ನು ತುಂಬುತ್ತವೆ. ನೋವು ತುಂಬಿದ ಕ್ಷಣಗಳಲ್ಲಿ, ಅವರ ತತ್ವಗಳು ಮುಲಾಮಾಗಿ,ಅಂಧಕಾರ ಆವರಿಸಿದ ಮನಕೆ ಬೆಳಕು ತೋರುವ ಜ್ಯೋತಿ ಯಾಗಿ, ನಮ್ಮೊಳಗೆ ನಂಬಿಕೆಯನ್ನು ಹುಟ್ಟಿಸುತ್ತವೆ. ಜೀವನದಲ್ಲಿ ಬರುವ ಸೋಲು ನೋವು ಕಷ್ಟಗಳ ನಡುವೆ ನಿಲ್ಲುವ ಧೈರ್ಯವನ್ನು ಅವರ ತತ್ವಗಳು ಕಲಿಸುತ್ತವೆ. “ಎಲ್ಲವೂ ತಾತ್ಕಾಲಿಕ ಅನಿತ್ಯ” ಎಂಬದು ಒಂದು ಸರಳ ಸತ್ಯ, ಆದರೆ ಅದರಲ್ಲಿ ಅಡಗಿರುವುದು ಬದುಕಿನ ಅನುಭಾವದ ದೊಡ್ಡ ಶಕ್ತಿ. ಹೋಗುವರು ಹೋಗುತ್ತಾರೆ, ಬರುವುದು ಬರುತ್ತದೆ, ಆದರೆ ನಮ್ಮ ಮನಸ್ಸಿನ ಶಾಂತಿ ನಮ್ಮ ಕೈಯಲ್ಲೇ ಇರುತ್ತದೆ ಎಂಬ ಸತ್ಯದ ಅರಿವು ಬುದ್ಧನ ನಿಜವಾದ ಸಂದೇಶ. ಬೌದ್ಧಧರ್ಮದ ಸಂಸ್ಥಾಪಕನಾದ ಗೌತಮ ಬುದ್ಧನ ಪೂರ್ವ ಕಥೆ ಸಾಮಾನ್ಯವಾಗಿ ಎಲ್ಲರ ಮನಸಲ್ಲಿ ಒಂದು ಪ್ರಶ್ನೆಯನ್ನು ಹುಟ್ಟಿಹಾಕಿರುತ್ತದೆ ಎಂದರೆ ತಪ್ಪಿಲ್ಲ, ಕಾರಣ ಕಷ್ಟಗಳ ಪರಿವೇ ಇಲ್ಲದೆ ಅರಸೊತ್ತಿಗೆಯಲ್ಲಿ ಬೆಳೆದು ಐಷಾರಾಮಿ ಜೀವನವನ್ನು ಅನುಭವಿಸಿ ಸುಖದ ಸುಪ್ಪತ್ತಿಗೆ, ರಾಜಪದವಿಯ, ಸಂಸಾರ ಸುಖವನ್ನು ಕಂಡವನು ಸರ್ವಸ್ವವನು ತ್ಯಜಿಸಿ, ತೊರೆದು ತಪಸ್ಸು ಮಾಡುತ್ತ ಕಾಡು ಮೇಡು ಸುತ್ತಿ ಭಿಕ್ಷಾಟನೆ ಮಾಡಿ ಬದುಕಿನ ಸತ್ಯದ ಅನ್ವೇಷಣೆಗೆ ಹೊರಟನೆಂದರೆ ಅದು ಎಂತವರಲ್ಲೂ ಆಶ್ಚರ್ಯ ಹುಟ್ಟಿಸುತ್ತದೆ ಎಂಬುದು ಸುಳ್ಳಲ್ಲ. ನಿಜಕ್ಕೂ ಅವರ ಆ ತ್ಯಾಗ ಅಸಮಾನ್ಯವಾದದ್ದಲ್ಲದೆ ಮಾನವೀಯತೆಯ ಕುರುಹಾಗಿ ಜೀವನದ ಅನಿಶ್ಚಿತತೆಗೆ ಸಾಕ್ಷಿಯಾಗಿ ಮೌಲ್ಯಯುತ ಬದುಕಿಗೆ ಪ್ರೇರೇಪಣೆಯಂತಿದೆ. ಬುದ್ಧನ ಈ ತ್ಯಾಗವನ್ನು ವಿಶ್ಲೇಷಣೆಗೆ ಒಳಪಡಿಸಿ ನೋಡಿದಾಗ ಇದಕ್ಕೆ ಮೂಲ ಕಾರಣವಾಗಿ ಅವರ ಜೀವನದಲ್ಲಿ ಸಂಭವಿಸಿದ ಅನಿವಾರ್ಯ ಅನುಭವಗಳನ್ನು ಉಲ್ಲೇಖಿಸಬಹುದು. ಕೇವಲ ಸುಖದ ಜೀವನವನ್ನೇ ಕಂಡ ಬುದ್ಧ ಒಮ್ಮೆ ಅರಮನೆಯ ಹೊರಗಿನ ವಾಸ್ತವಿಕತೆಯನ್ನು ಅರಿತ ಸಂದರ್ಭದಲ್ಲಿ ವೃದ್ಧಾಪ್ಯ, ರೋಗ, ಹುಟ್ಟು ಸಾವು ಮತ್ತು ಜೀವನದ ಮೂಲಭೂತ ಸತ್ಯಗಳು ಅವನಿಗೆ ಸ್ಪಷ್ಟವಾಗಿ ಕಂಡವು. ಇದರೊಂದಿಗೆ, ಒಂದೆಡೆ ಸನ್ಯಾಸಿಯ ಶಾಂತ ಸ್ವಭಾವವು, ಅದಕ್ಕೆ ವಿರುದ್ಧವಾಗಿ ಇನ್ನೊಂದೆಡೆ ಕೋಪ, ತಾಪ, ಜಗಳ, ಕಿತ್ತಾಟ ಇವೆಲ್ಲವನ್ನು ಕಂಡ ಅವನ ಮನದಲ್ಲಿ ಹತ್ತು ಹಲವು ಪ್ರಶ್ನೆಗಳು ಕಾಡಿದವು. ನಂತರ ಅವನೊಳಗೆ ಉದ್ಭವಿಸಿದ ಅಭಿಪ್ರಾಯ ಅನಿಸಿಕೆ, ಅನುಭವಗಳು ಮಾನವ ಜೀವನದ ಸತ್ಯ, ನೋವು ದುಃಖ ಮತ್ತು ಅನಿಶ್ಚತೆಯ ಸತ್ಯವನ್ನು ಕಣ್ಮುಂದೆ ಬಿಚ್ಚಿಟ್ಟವು ನಂತರದಲ್ಲಿ ಇವುಗಳೇ ಅವರಲ್ಲಿ ಗಂಭೀರ ಚಿಂತನೆಗಳನ್ನು ಹುಟ್ಟುಹಾಕಿದವು. ಈ ಎಲ್ಲಾ ಸನ್ನಿವೇಶಗಳನ್ನು ಕಂಡ ಅವರಲ್ಲಿ ದುಃಖ ನಿವಾರಣೆಯ ಸಾಧ್ಯತೆಯ ಕುರಿತು ಆಲೋಚನೆ ಹುಟ್ಟಿತು ಈ ಹಿನ್ನಲೆಯೇ ಅವರನ್ನು ವೈಭವಯುತ ಜೀವನವನ್ನು ತ್ಯಜಿಸಿ, ತ್ಯಾಗದ ಮೂಲಕ ಸತ್ಯಾನ್ವೇಷಣೆ ಮಾಡಲು ಪ್ರೇರೇಪಿಸಿ ಸಿದ್ಧಾರ್ಥನಾಗಿದ್ದವನನ್ನು ಗೌತಮ ಬುದ್ಧನನ್ನಾಗಿ ಮಾಡಿತು. ಈ ಮಹಾ ತ್ಯಾಗವನ್ನು “ಮಹಾಭಿನಿಷ್ಕ್ರಮಣ” ಎಂದು ಕರೆಯಲಾಗುತ್ತದೆ. ‘ಮಹಾಭಿನಿಷ್ಕ್ರಮಣ’ ಎಂದರೆ ‘ಮಹಾನ್ ನಿರ್ಗಮನ’ ಅಥವಾ ‘ಮಹಾನ್ ತ್ಯಾಗ ಎಂದರ್ಥ. ತನ್ನ 29 ನೇ ಚಿಕ್ಕ ವಯಸ್ಸಿನಲ್ಲೇ ಸಕಲವನ್ನು ತೊರೆದ ಅವರು ಹಲವು ಗುರುಗಳ ಬಳಿ ವಿದ್ಯಾಭ್ಯಾಸ ಮಾಡಿ, ತಪಸ್ಸು ಮತ್ತು ಧ್ಯಾನದಲ್ಲಿ ತೊಡಗಿದರು. ಆರಂಭದಲ್ಲಿ ಸಾಕಷ್ಟು ತಪಸ್ಸು ಮಾಡಿದರೂ, ಅದು ಸರಿಯಾದ ಮಾರ್ಗವಲ್ಲ ಎಂಬುದನ್ನು ಅರಿತು, ಮಧ್ಯಮ ಮಾರ್ಗವನ್ನು ಸ್ವೀಕರಿಸಿದರು.
ಕೊನೆಗೆ ಅವರು ಬಿಹಾರದ ಬೋಧಗಯಾದಲ್ಲಿ ಇರುವ ಬೋಧಿವೃಕ್ಷದ ಕೆಳಗೆ ಆಳವಾದ ಧ್ಯಾನದಲ್ಲಿ ತೊಡಗಿದರು. ದೀರ್ಘಧ್ಯಾನದ ನಂತರ ಅವರಿಗೆ ಜ್ಞಾನೋದಯ (ಎನ್‌ಲೈಟನ್‌ಮೆಂಟ್) ದೊರೆಯಿತು.ಆ ಕ್ಷಣದಿಂದಲೇ ಅವರು “ಬುದ್ಧ”ಅಂದರೆ ಜಾಗೃತನಾದವನು ಎಂದು ಪ್ರಸಿದ್ಧರಾದರು. ನಂತರ ಅವರು ಜೀವನದ ನಾಲ್ಕು ಆರ್ಯ ಸತ್ಯಗಳು ಮತ್ತು ಅಷ್ಟಾಂಗ ಮಾರ್ಗವನ್ನರಿತು, ಅದನ್ನು ಲೋಕಕ್ಕೆ ಬೋಧಿಸಲು ಪ್ರಾರಂಭಿಸಿದರು. :: ಜ್ಞಾನೋದಯದ ನಂತರ ಗೌತಮ ಬುದ್ಧ :: ಬೌದ್ಧಧರ್ಮವನ್ನು ಹುಟ್ಟುಹಾಕಿ ತಮ್ಮ ಉಳಿದ ಜೀವನವನ್ನು ಧರ್ಮೋಪದೇಶಗಳಿಗೆ ಸಮರ್ಪಿಸಿ ಅವರು ಭಾರತದ ವಿವಿಧ ಭಾಗಗಳಲ್ಲಿ ಸಂಚರಿಸಿ, ಜನರಿಗೆ ಶಾಂತಿ, ಅಹಿಂಸೆ ಮತ್ತು ಸಮಾನತೆಯ ಸಂದೇಶವನ್ನು ಹರಡಿದರು. ಬುದ್ಧ ಮೊದಲ ಉಪದೇಶವನ್ನು ಸಾರನಾಥ ಲ್ಲಿ ನೀಡಿದರು, ಇದನ್ನು “ಧರ್ಮಚಕ್ರ ಪ್ರವೃತ್ತಿ” ಎಂದು ಕರೆಯಲಾಗುತ್ತದೆ. ನಂತರ ಅನೇಕ ಶಿಷ್ಯರನ್ನು ಪಡೆದ ಅವರು ಬೌದ್ಧ ಧರ್ಮವನ್ನು ವ್ಯಾಪಕವಾಗಿ ಹರಡಿದರು. ಈ ಘಟನೆಯ ನಂತರ ಅವರು ತಪಸ್ಸು ಮತ್ತು ಧ್ಯಾನಗಳ ಮೂಲಕ ಜೀವನದ ಸತ್ಯವನ್ನು ಅನ್ವೇಷಿಸಿ, ಅಂತಿಮವಾಗಿ ಜ್ಞಾನೋದಯವನ್ನು ಹೊಂದಿದರು. ಹೀಗಾಗಿ, ಅವರ ಪೂರ್ವಕಥೆ ವೈಯಕ್ತಿಕ ವೈರಾಗ್ಯದಿಂದ ಆರಂಭವಾಗಿ, ಮಾನವಕುಲಕ್ಕೆ ಶಾಶ್ವತ ಮಾರ್ಗದರ್ಶನ ನೀಡಿದ ತತ್ವಶಾಸ್ತ್ರದ ರೂಪದಲ್ಲಿ ದೈವತ್ವ ಪಡೆದಿದೆ. ಇಂದು ಬುದ್ಧ ಜಯಂತಿ! ಅವರ ಜಯಂತಿಯನ್ನು ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಗೌರವದಿಂದ ಆಚರಿಸಲಾಗುತ್ತದೆ. ಇತಿಹಾಸದ ದಾಖಲೆಯ ಪ್ರಕಾರ, ಕ್ರಿ.ಪೂ. 563 ರಿಂದ ಕ್ರಿ.ಪೂ. 483 ರ ಅವಧಿಯಲ್ಲಿ ಅವರು ಬದುಕಿದ್ದರು ಎಂಬುದು ತಿಳಿದುಬರುತ್ತದೆ. ಅವರ ಜನನ ಹಿಮಾಲಯದ ತಪ್ಪಲಿನಲ್ಲಿರುವ ಲುಂಬಿನಿ ಎಂಬ ಗ್ರಾಮದಲ್ಲಿ ಆಗಿತ್ತು.ಪ್ರಾಚೀನ ಕಾಲದಲ್ಲಿ ಈ ಪ್ರದೇಶವು ಅಖಂಡ ಭಾರತದ ಸಾಂಸ್ಕೃತಿಕ ವಲಯಕ್ಕೆ ಸೇರಿತ್ತು, ನಂತರದ ರಾಜಕೀಯ ಬದಲಾವಣೆಗಳಿಂದ ಅದು ಇಂದಿನ ನೇಪಾಳ ದೇಶದ ಭಾಗವಾಗಿದೆ. ಬದುಕಿನಲ್ಲಿ ನೆಮ್ಮದಿ ಹಾಗೂ ಶಾಂತಿಯನ್ನು ಅರಿಸಿ, ವಿರಾಗಿಯಾಗಿ ಭರತಖಂಡದುದ್ದಕ್ಕೂ ಶಾಂತಿ, ಅಹಿಂಸಾ ಸಂದೇಶಗಳನ್ನು ಸಾರಿ ಜೀವನದ ಹಲವು ಜಂಜಾಟಗಳಿಗೆ ತಾಳ್ಮೆ ಮತ್ತು ಶಾಂತಿಯ ಪರಿಹಾರ ಹುಡುಕಿ ಕೊಟ್ಟ ಆಧ್ಯಾತ್ಮಿಕ ಪುರುಷ ಬುದ್ಧ. ಧ್ಯಾನ, ದಾನ, ಪ್ರೀತಿ, ತ್ಯಾಗ, ತಾಳ್ಮೆ, ಮೌನ ಅಹಿಂಸೆಗಳ ಸುಂದರತೆಯನ್ನ ಜಗತ್ತಿಗೆ ತಿಳಿಸುತ್ತ ಮಾನವ ಜೀವನದ ಮೌಲ್ಯ ಮತ್ತು ಉದ್ದೇಶಗಳನ್ನು ಸರಳ ಸಂದೇಶಗಳ ಮೂಲಕ ಸಾರಿದ ಕರುಣಾಮೂರ್ತಿ ಬುದ್ಧ ತನ್ನ ಹಲವು ವರ್ಷಗಳ ಧ್ಯಾನ ಕಠಿಣತಪಸ್ಸು ಅನುಭವ, ಅಧ್ಯಯನಗಳ ಮೂಲಕ ನಿಜವಾದ ಮಾನವ ಧರ್ಮದ ಆಶಯಗಳನ್ನು ಧಾರ್ಮಿಕ,ಅಧ್ಯಾತ್ಮ ಉಪನ್ಯಾಸಗಳನ್ನು ನೀಡುವ ಮೂಲಕ ಧರ್ಮದ ಆಶಯಗಳನ್ನು ಜಗತ್ತಿಗೆ ಬಿತ್ತಿದನು. “ಕಷ್ಟಗಳಿಗೆ ಸ್ಪಂದಿಸುವುದೇ ಧರ್ಮದ ನಿಜವಾದ ಅರ್ಥ”ಎಂಬ ಅದ್ಭುತ ಸಂದೇಶವನ್ನು ಮನುಕುಲಕ್ಕೆ ನೀಡಿ, ನಮ್ಮದು ಆ ಧರ್ಮ ಈ ಧರ್ಮವೆಂದು ನಿರಂತರವಾಗಿ ಕಚ್ಚಾಡುತ್ತಾ ಪ್ರತಿಯೊಬ್ಬರೂ ತಮ್ಮದೇ ಶ್ರೇಷ್ಠ ಧರ್ಮವೆಂದು ಅನಗತ್ಯವಾಗಿ ವಾದಮಾಡುತ್ತ ಕೋಪ ದ್ವೇಷಗಳನ್ನು ಸಾದಿಸುತ್ತ ಜೀವನದ ಮೌಲ್ಯಗಳನ್ನೇ ಮರೆತು ಬದುಕನ್ನು ನರಕ ಮಾಡಿಕೊಳ್ಳುತ್ತಾರೆ, ಆದರೆ “ನಿಜವಾದ ಧರ್ಮವು ಒಬ್ಬರ ಕಷ್ಟಗಳಿಗೆ ಇನ್ನೊಬ್ಬರು ಸ್ಪಂದಿಸುವುದೇ ಆಗಿರುತ್ತದೆ” ಎನ್ನುವ ಅಮೂಲ್ಯ ಸಂದೇಶವನ್ನು ಕೊಟ್ಟ ಮಹಾನ್ ಮೇಧಾವಿ ಬುದ್ಧ. ಜೀವನ ಎಂಬುದು ನಶ್ವರ. ಜಗತ್ತು ದುಃಖ ದುಮ್ಮಾನಗಳಿಂದ ಕೂಡಿದೆ ಎನ್ನುತ್ತಾ ಯಶಸ್ವಿ ಹಾಗು ಸಂತೋಷದ ಜೀವನಕ್ಕೆ ಬೇಕಾದ ಸದ್ಭಾವನೆ, ಸತ್ಸಂಕಲ್ಪ, ಸದ್ವಚನ, ಸದ್ವರ್ತನೆ, ಸತ್‌ಶುದ್ಧಿ, ಸದಾಲೋಚನೆ, ಸದಾಂತರ್ಯ ಮತ್ತು ಸದಾಮೋದ ಎಂಬ ಎಂಟು ಸನ್ಮಾರ್ಗಗಳನು ಪಾಲಿಸಬೇಕೆಂದು ಹೇಳಿದ್ದಲ್ಲದೆ ಸ್ವತಃ ತಾನು ಕೂಡ ಅದನ್ನು ಪಾಲಿಸಿದನು ಅದಕ್ಕಾಗಿಯೇ ಇರಬೇಕು ಜಾತಿಯ ಹೊರಗೂ ಈ ಮಂದಸ್ಮಿತನನ್ನು ಎಲ್ಲರೂ ಇಷ್ಟ ಪಡುತ್ತಾರೆ. ಹಾಗೆ ನೋಡುವುದಾದರೆ ಬುದ್ಧನ ಜೀವನವೇ ಒಂದು ಬೋಧನೆಯಾಗಿತ್ತು. ಬುದ್ಧ ಎಂದಿಗೂ ಕೂಡ ತನ್ನ ಆದರ್ಶ ಆಶಯಗಳನ್ನು ದಿಕ್ಕರಿಸಿದವನಲ್ಲ. ಎಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಇದ್ದಾಗಲೂ ಸಾವಿನ ದವಡೆಯಲ್ಲೂ ಸಿಲುಕಿಕೊಂಡರೂ ತಾನೂ ನಂಬಿದ ಸತ್ಯಗಳನ್ನು,ತನ್ನ ಸನ್ಯಾಸತ್ವವನ್ನು ಬಿಟ್ಟವನಲ್ಲ ಬುದ್ಧ. ಜೀವನದುದ್ದಕ್ಕೂ ನೊಂದವರ ಕಣ್ಣೀರ ಒರೆಸಿ ದ್ವೇಷ, ಅಸೂಯೆಗಳನ್ನು ನಿರ್ನಾಮ ಮಾಡಿ ಸಮಾಜದಲ್ಲಿ ಪ್ರೀತಿಯ ಚಿಲುಮೆಯನ್ನು ಉಕ್ಕಿಸಿದವನು. “ಹುಟ್ಟು ಮತ್ತು ಸಾವು ಈ ಎರಡು ಬಂಧನಗಳಲ್ಲಿ ನಾವು ಗಳಿಸಬೇಕಾದದ್ದು ಅಪ್ರತಿಮವಾದ ಪ್ರೀತಿಯೊಂದೇ” ಎಂದು ಜಗತ್ತಿಗೆ ಸಾರಿದ ಕರುಣಾಸಾಗರ. ಮನುಷ್ಯನ ಎಲ್ಲಾ ಕಷ್ಟಗಳಿಗೆ ಮನುಷ್ಯನೇ ಕಾರಣ ‘ಮನುಷ್ಯನೇ ದುಃಖದ ಮೂಲ’ ಆತನ ಅತಿಯಾದ ಆಸೆಗಳೇ ದುಃಖಕ್ಕೆ ದಾರಿ ಎನ್ನುತ್ತಾ. ಬದುಕಿನಲ್ಲಿ ಬರುವ ದುಃಖವನ್ನು ಸೃಷ್ಟಿಸಿಕೊಳ್ಳುವವನು ಮತ್ತು ದುಃಖವನ್ನು ಹೆಚ್ಚಿಸಿಕೊಳ್ಳುವವನು ಮನುಷ್ಯನೇ ಈ ಕಾರಣದಿಂದಾಗಿ ಅವರವರ ದುಃಖದಲ್ಲಿ ಅವರ ಪಾತ್ರವೇ ಸಾಕಷ್ಟಿದೆ ಎಂಬ ಕಟು ಸತ್ಯವನ್ನು ತಿಳಿಸುತ್ತಾನೆ. ಅಲ್ಲದೆ ಯಾವುದೇ ರೀತಿಯ ತೊಂದರೆಯಲ್ಲಿ ಸಿಲುಕಿ ಕೊಂಡರೂ ಆ ಸಮಸ್ಯೆ ನಮ್ಮ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬಾರದು ಪರಿಸ್ಥಿತಿ ಎಷ್ಟೇ ಕಷ್ಟವಾಗಿದ್ದರೂ ತಾಳ್ಮೆಯಿಂದಿರಬೇಕು, ಇದು ಖಂಡಿತವಾಗಿಯೂ ದುಃಖಕ್ಕೆ ಪರಿಹಾರವನ್ನು ನೀಡುತ್ತದೆ. ಜೀವನದಿಂದ ದುಃಖವನ್ನು ತೊಡೆದು ಹಾಕಲು ತಾಳ್ಮೆ ತುಂಬಾನೇ ಅವಶ್ಯಕ ಎಂದು ಹೇಳುತ್ತಾ “ಆಸೆಯೇ ದುಃಖಕ್ಕೆ ಮೂಲ ಕಾರಣ “ಎಂಬ ಮಹಾನ್ ಸಂದೇಶವನ್ನು ಲೋಕಕ್ಕೆ ನೀಡುತ್ತಾನೆ. ಬುದ್ಧನ ಪ್ರಕಾರ ನಾವು ಮನಸ್ಸಿನಲ್ಲಿ ಏನನ್ನು ಯೋಚಿಸುತ್ತೇವೆಯೋ ಅದರಂತೆ ಆಗುತ್ತದೆ ಹಾಗಾಗಿ, ಸದಾ ನಮ್ಮ ಆಲೋಚನೆಗಳು ಉತ್ತಮ ಚಿಂತನೆಗಳನ್ನು ಒಳಗೊಂಡಿರಬೇಕು ಹಾಗೂ ಮನಸಸ್ಸು ಶುದ್ಧವಾಗಿದ್ದಲ್ಲಿ ಉತ್ತಮ ಆಲೋಚನೆಗಳು ಮಾತ್ರವೇ ಬರುತ್ತವೆ, ಉತ್ತಮ ಅಲೋಚನೆ ಮತ್ತು ಚಿಂತನೆಗಳನ್ನು ಹೊಂದಿರುವ ವ್ಯಕ್ತಿಯನ್ನು ಸಂತೋಷವು ನೆರಳಿನಂತೆ ಹಿಂಬಾಲಿಸುತ್ತದೆ. ಜೀವನವು ಧನಾತ್ಮಕವಾಗಿ ಇರಬೇಕಾದರೆ ನಾವು ಧನಾತ್ಮಕ ಚಿಂತನೆಗಳನ್ನು ಹೆಚ್ಚಾಗಿ ಮಾಡಬೇಕು. ಓರ್ವ ವ್ಯಕ್ತಿಯ ಆಲೋಚನೆಗೆ ಆ ವ್ಯಕ್ತಿಯ ಜೀವನವನ್ನು ಉದ್ಧಾರ ಮಾಡುವ ಇಲ್ಲವೇ ನಾಶ ಮಾಡುವ ಈ ಎರಡೂ ಸಾಮರ್ಥ್ಯವಿರುತ್ತದೆ. ಕಾರಣ ನಮ್ಮ ಆಲೋಚನೆಗಳು ಪಂಚೇಂದ್ರಿಯಗಳಿಂದ ರೂಪುಗೊಂಡಿರುತ್ತದೆ ಅಂತಹ ಸನ್ನಿವೇಶದಲ್ಲಿ ಧನಾತ್ಮಕ ಚಿಂತನೆಯು ಪ್ರತಿಯೊಬ್ಬರಿಗೂ ಮುಖ್ಯವಾಗಿರುತ್ತದೆ. ಹಾಗಾಗಿ ಧನಾತ್ಮಕ ಚಿಂತನೆಯಿಂದ ಮಾತ್ರ ನೆಮ್ಮದಿ ಹಾಗೂ ಶಾಂತಿಯುತ ಜೀವನ ಮಾಡಲು ಸಾಧ್ಯವೆಂದು ತನ್ನ ಸಂದೇಶಗಳ ಮೂಲಕವೇ ಜನರ ಮನಸ್ಸನ್ನು ಗೆಲ್ಲುತ್ತಾ ಶಾಂತಿದೂತನಾಗಿ ಭಗವಾನ್ ಬುದ್ದನಾಗಿ ಇಡೀ ಜಗತ್ತನ್ನೇ ಗೆಲ್ಲುತ್ತಾನೆ. ಬುದ್ಧ ಪೂರ್ಣಿಮೆ ಮಾನವ ಜೀವನದಲ್ಲಿ ಶಾಂತಿ, ಸಮತೋಲನ ಮತ್ತು ಜ್ಞಾನೋದಯದ ಅಗತ್ಯತೆಯನ್ನು ನೆನಪಿಸುವ ಮಹತ್ವದ ಆಚರಣೆಯಾಗಿದೆ. ಗೌತಮ ಬುದ್ಧ ಅವರ ತತ್ವಗಳು ಇಂದಿಗೂ ಪ್ರಸ್ತುತವಾಗಿದ್ದು, ವ್ಯಕ್ತಿ ಮತ್ತು ಸಮಾಜದ ಸೌಹಾರ್ದಪೂರ್ಣ ಅಭಿವೃದ್ಧಿಗೆ ದಾರಿದೀಪವಾಗಿವೆ. ಬದಲಾವಣೆ ಅನಿವಾರ್ಯ,ಅದನ್ನು ಸ್ವೀಕರಿಸುವ ಶಾಂತಿಯೇ ಜೀವನದ ನಿಜವಾದ ಜ್ಞಾನ. ಶಾಂತಿ ಹೊರಗಿಲ್ಲ, ಅದು ನಮ್ಮೊಳಗೇ ಇದೆ. ಅದನ್ನು ಅರಿಯುವುದೇ ಜೀವನದ ನಿಜವಾದ ಜಯ ಎಂದು ಸಾರುವ ಮೂಲಕ ಶಾಂತಿಯ ಮಾರ್ಗವನ್ನು ಕಂಡು ಕೊಟ್ಟಿದ್ದಾರೆ.
‘ಶಾಂತಿಯ ದಾರಿ ತೋರಿದ ಬುದ್ಧ
ಸತ್ಯದ ಬೆಳಕು ಹರಿಸಿದ ಬುದ್ಧ
ಜಗಕೆ ಪ್ರೀತಿಯ ಸಂದೇಶ ನೀಡಿದ ಬುದ್ಧ
ಆಸೆಯೇ ದುಃಖಕೆ ಮೂಲವೆಂದ ಬುದ್ಧ
ಮನದೊಳಗೊಂದು ನೆಮ್ಮದಿ ತುಂಬಿದ ಬುದ್ಧ
ಜಗದೊಳಗೆ ಶಾಶ್ವತ ಸತ್ಯಸಂದನಾಗಿ ಶುದ್ಧನಾಗಿ, ಕಡೆಗೆ ಭಗವಂತನೇ ಆದನು’.









