
ಮಡಿಕೇರಿ NEWS DESK ಮೇ 2 : ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರ್ಥಿಕ ಸಹಕಾರ ನೀಡುವುದಾಗಿ ಭರವಸೆ ನೀಡಿದ ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವರಾದ ಮನ್ ಸುಖ್ ಮಾಂಡವಿಯಾ ಅವರು ಇದು ಕೊಡುಗೆಯಲ್ಲ, ಸರ್ಕಾರದ ಜವಾಬ್ದಾರಿ ಎಂದು ಹೇಳಿದರು. ನಾಪೋಕ್ಲುವಿನ ಚೆರಿಯಪರಂಬು ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ 26 ದಿನಗಳ ಕಾಲ ನಡೆದ ಹಾಕಿ ಉತ್ಸವ ಫೈನಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಹಿಂದೆ ಕೊಡವ ಕುಟುಂಬ ಹಾಕಿ ಕ್ರೀಡೆ ಬಗ್ಗೆ ಕೇಳಿದ್ದೆ. ಈಗ ನೋಡಿ ಸಂತೋಷವಾಯಿತು. ಅಂತರರಾಷ್ಟ್ರೀಯ ಒಲಂಪಿಕ್ ಕೌನ್ಸಿಲ್ ಕ್ರೀಡೆ ಒಂದು ಸಮುದಾಯದ ಒಗ್ಗೂಡುವಿಕೆಗೆ ಸಹಕಾರಿಯಾಗಬೇಕು ಎಂದಿದೆ. ಆದರೆ ಕೊಡವ ಸಮುದಾಯದ ಪೂರ್ವಜರು ಇದನ್ನು ಈ ಹಿಂದೆ ಮಾಡಿ ತೋರಿಸಿದ್ದಾರೆ ಇದು ಶ್ಲಾಘನೀಯ ಎಂದರು. 18 ಜನ ಒಲಂಪಿಯನ್ ನೀಡಿದ ಈ ಕೊಡವ ಭೂಮಿಗೆ ವಂದನೀಯ ಎಂದರು. ಕ್ರೀಡಾ ಪ್ರತಿಭೆಗಳಿರುವ ಕೊಡಗಿಗೆ ಪ್ರೋತ್ಸಾಹ ನೀಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜವಾಬ್ದಾರಿ ಎಂದು ಸಚಿವರು ಹೇಳಿದರು. ಕ್ರೀಡೆ ಎನ್ನುವುದು ರಾಜಕೀಯ ಮೈದಾನ ಅಲ್ಲ. ಸರ್ಕಾರ ಸರ್ಕಾರದ ನಡುವೆ ಸಹಯೋಗ ಇರಬೇಕು. ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿ ದೇಶಕ್ಕೆ ಮಾದರಿಯಾಗಿದ್ದು, ಇದನ್ನು ಇಡೀ ದೇಶಕ್ಕೆ ಪರಿಚಯ ಮಾಡುತ್ತೇನೆ. ಶೂಟಿಂಗ್ ಗೂ ಪ್ರೋತ್ಸಾಹ ನೀಡುತ್ತೇನೆ. ಇಂತಹ ಕ್ರೀಡೆಯಲ್ಲಿ ಉತ್ತಮ ಕೌಶಲ್ಯ ಹೊಂದಿರುವ ಪ್ರತಿಭೆಗಳನ್ನು ಆಯ್ಕೆಮಾಡಿ ತರಬೇತಿ ನೀಡಿದರೆ ದೇಶಕ್ಕೆ ಮಾದರಿಯಾಗುತ್ತದೆ. ಇದು ಹೊಸ ದಿಕ್ಕನ್ನು ನೀಡುವ ಕ್ಷಣವಾಗಿದೆ ಎಂದು ಶ್ಲಾಘಿಸಿದರು. ಮೈಸೂರು-ಕೊಡಗು ಸಂಸದರಾದ ಯದುವಿರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, ಭಾರತದಲ್ಲಿ ಕ್ರೀಡೆಯ ಕ್ರಾಂತಿ ಸೃಷ್ಟಿಯಾಗಿದ್ದು, ಇದು ಸಚಿವರ ನೇತೃತ್ವದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ. ಅಲ್ಲದೆ ಪ್ರಧಾನ ಮಂತ್ರಿಗಳ ನೇತೃತ್ವದಲ್ಲಿ ಉತ್ತಮ ಕೆಲಸಗಳು ನಡೆಯುತ್ತಿರುವುದು ಶ್ಲಾಘನೀಯ ಎಂದರು. ಭಾರತದ ಕ್ರೀಡಾ ತಂಡದಲ್ಲಿ ಕೊಡಗಿನ ತಂಡಗಳು ಇಲ್ಲದಿದ್ದರೆ ಅದು ಅಪೂರ್ಣ. ಕೊಡವ ಕೌಟುಂಬಿಕ ಹಾಕಿ ನಮ್ಮೆ ಯಶಸ್ವಿಯಾಗಿ ನಡೆಯುತ್ತಿದ್ದು, ಮಹಿಳೆಯರಿಗೂ ಪ್ರೇರಣೆ ನೀಡುತ್ತಿರುವುದು ಹೆಮ್ಮೆಯ ವಿಚಾರ. ಭಾರತೀಯ ಏಕತೆಗೆ ಇಂತಹ ವೇದಿಕೆ ಬೆಂಬಲ ನೀಡಿದೆ ಎಂದು ಸಂಸದರು ನುಡಿದರು. ಮಧ್ಯಪ್ರದೇಶದಲ್ಲಿರುವ ಶೂಟಿಂಗ್ ಅಕಾಡೆಮಿ ಮಾದರಿಯಲ್ಲಿ ಕೊಡಗಿನಲ್ಲೂ ಅಕಾಡೆಮಿ ಪ್ರಾರಂಭಿಸಬಹುದು. ಇಲ್ಲಿಯೂ ಪೂರಕ ವಾತಾವರಣವಿದ್ದು, ಖೇಲೋ ಇಂಡಿಯಾ ಯೋಜನೆಯಲ್ಲಿ ಸಹಕಾರ ನೀಡಬಹುದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಹಕಾರ ನೀಡುವಂತಾಗಬೇಕು ಎಂದು ಮನವಿ ಮಾಡಿದರು. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ, ಕೊಡವ ಹಾಕಿ ಕೌಟುಂಬಿಕ ನಮ್ಮೆ ಜಿಲ್ಲೆಗೆ ಮಾದರಿಯಾಗಿದೆ. ಶಿಸ್ತಿಗೆ ಹೆಸರುವಾಸಿಯಾದ ಜಿಲ್ಲೆಯಲ್ಲಿ ಶಿಸ್ತು ಕಾಪಾಡುವಂತಾಗಬೇಕು. ಇಂತಹ ಅವಕಾಶ ಮತ್ತೆ ಸಿಗುವುದಿಲ್ಲ ಎಂದು ಶಾಸಕರು ನುಡಿದರು. ಬಾಡಗದಲ್ಲಿ ಈಗಾಗಲೇ 11 ಏಕರೆ ಜಾಗದಲ್ಲಿ ಕ್ರೀಡಾ ತರಬೇತಿ ಕೇಂದ್ರ ಮಾಡಲಾಗುತ್ತಿದೆ. ಈಗಾಗಲೇ ರಾಜ್ಯ ಸರ್ಕಾರ ಅನುದಾನ ನೀಡುತ್ತಿದ್ದು, ಕೇಂದ್ರ ಸರ್ಕಾರ ಸಹಕಾರ ನೀಡಿದರೆ ಒಂದು ಸ್ಟೇಡಿಯಂ ಮಾಡಬಹುದು. ಈ ಬಗ್ಗೆ ಲಿಖಿತ ರೂಪದಲ್ಲಿ ಮನವಿ ಮಾಡಲಾಗುವುದು ಎಂದು ಹೇಳಿದರು. ಕ್ರೀಡಾ ಜಿಲ್ಲೆ ಉಳಿಯಬೇಕು. ಸಣ್ಣ ಜಿಲ್ಲೆಯಾದರು ದೊಡ್ಡ ಸಾಧನೆ ಮಾಡಿದ ಹೆಚ್ಚು ಮಂದಿ ಇದ್ದಾರೆ ಎಂದು ಶಾಸಕರು ನುಡಿದರು. ಮುಂದೆ ಅಜ್ಜಿಕುಟ್ಟೀರ ಕುಟುಂಬದ ವತಿಯಿಂದ ಹಾಕಿ ಉತ್ಸವ ನಡೆಯಲಿದ್ದು, ಪ್ರತಿಯೊಂದು ಕುಟುಂಬ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡಂಡ ಕೆ.ಬೋಪಣ್ಣ ಮಾತನಾಡಿ, ಪಾಂಡಂಡ ಕುಟ್ಟಪ್ಪನವರು 1997ರಲ್ಲಿ ಆರಂಭಿಸಿದ ಈ ಪ್ರತಿಷ್ಠಿತ ಕೊಡವ ಕೌಟುಂಬಿಕ ಹಾಕಿಯು ಕೊಡಗಿನ ಕ್ರೀಡಾ ಸಂಸ್ಕೃತಿಯ ಪ್ರಮುಖ ಭಾಗವಾಗಿದೆ. ಕೊಡಗನ್ನು ಕೇಂದ್ರದಿಂದ ಕ್ರೀಡಾಜಿಲ್ಲೆ ಎಂದು ಘೋಷಿಸಲು ಮನವಿ ಮಾಡಿದರು. ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಅಜ್ಜಿಕುಟ್ಟಿರ ಎಸ್.ಬೋಪಣ್ಣ ಮಾತನಾಡಿ, ಈ ಪಂದ್ಯಾಟ ಕೊಡವ ಜನಾಂಗಕ್ಕೆ ಹೆಗ್ಗಳಿಕೆ. ಈ ರೀತಿ ಹಲವು ವರ್ಷ ನಡೆಯಲಿ. ಮುಂದೆ ಅಜ್ಜಿಕುಟ್ಟಿರ ಕಪ್‍ಗೂ ಸಹಕಾರ ನೀಡಬೇಕು. ಎಲ್ಲಾ ಕೌಟುಂಬಿಕ ಹಾಕಿಗೂ ಬೆಂಬಲಿಸಬೇಕೆಂದು ಹೇಳಿದರು. ಮುಖ್ಯ ಪ್ರಾಯೋಜಕತ್ವ ನೀಡಿದ್ದ ಎಸ್‍ಎಲ್‍ಎನ್ ಸಂಸ್ಥೆಯ ಸಿಇಓ ಸಾಹೀದ್ ಸಿಂಗ್ ಮಾತನಾಡಿ, ಕೊಡವ ಸಂಸ್ಕೃತಿ, ಕಾಫಿ ದೇಶಕ್ಕೆ ಹೆಸರುವಾಸಿಯಾಗಿದೆ. ಹಾಕಿ ಕ್ರೀಡಾಕೂಟ ಜನಾಂಗವನ್ನು ಬೆಸೆಯುತ್ತಿದೆ ಎಂದರು. ನಾರಾಯಣ ಆಸ್ಪತ್ರೆಯ ಡಾ.ಸಂತೋμï ಉತ್ತಪ್ಪ ಮಾತನಾಡಿ, ಯುವಕರು ದೈಹಿಕ ಕ್ಷಮತೆ ಕಳೆದುಕೊಳ್ಳುತ್ತಿದ್ದಾರೆ. ದುಶ್ಚಟಗಳಿಂದ ದೂರವಿದ್ದು, ನಿತ್ಯ ವ್ಯಾಯಾಮಕ್ಕೆ ಸಮಯ ನೀಡಿ, ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಆರೋಗ್ಯ ವಿಮೆ ಮಾಡಿಸಿಕೊಂಡರೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು. ಆಯತನ ರೆಸಾರ್ಟ್ ವ್ಯವಸ್ಥಾಪಕ ಜೆಸು ಅವರು ಮಾತನಾಡಿ, ಕೊಡಗು ಎಂದರೆ ವಿಶೇಷತೆ. ಇಲ್ಲಿನ ಹಬ್ಬಹರಿದಿನ, ವಿವಾಹ ಆಚರಣೆ ವಿಭಿನ್ನವಾಗಿರುತ್ತದೆ. ಅದೇ ರೀತಿ ಕೊಡವ ಕುಟುಂಬಗಳನ್ನು ಒಂದೆಡೆ ಸೇರಿಸುವುದು ಸಾಹಸದ ಕೆಲಸ. ಸ್ವಚ್ಛ ಹಾಗೂ ಸುಂದರವಾಗಿಡಬೇಕು. ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿ ಮಾಡಬೇಕು ಎಂದರು. ಕರ್ನಾಟಕ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎಸ್.ಅರುಣ್ ಮಾಚಯ್ಯ, ಹಾಕಿ ಅಕಾಡಮಿ ಪ್ರಮುಖರು, ಕುಟುಂಬದ ಪ್ರಮುಖರು ಹಾಗೂ ಇತರರು ಇದ್ದರು. 2027ನೇ ವರ್ಷದ ಹಾಕಿ ಉತ್ಸವ ಆಚರಿಸಲಿರುವ ಅಜ್ಜಿಕುಟ್ಟಿರ ಕುಟುಂಬಕ್ಕೆ ಕೊನೆಯಲ್ಲಿ ಧ್ವಜ ಹಸ್ತಾಂತರಿಸುವ ಮೂಲಕ ಜವಾಬ್ದಾರಿ ನೀಡಲಾಯಿತು. ಕೊಡವ ಹಾಕಿ ಅಕಾಡೆಮಿ, ಚೇನಂಡ ಕುಟುಂಬ ಪ್ರಮುಖರಿಂದ ಅಜ್ಜಿಕುಟ್ಟಿರ ಕುಟುಂಬಸ್ಥರು, ಕುಟುಂಬದ ಹಿರಿಯರು, ಕಿರಿಯರ ಸಹಿತವಾಗಿ ಸಡಗರದೊಂದಿಗೆ ಧ್ವಜ ಸ್ವೀಕರಿಸಿದರು. ಕುಲ್ಲೇಟಿರ ಮತ್ತು ಚೆಪ್ಪುಡಿರ ತಂಡಗಳ ಹಣಾಹಣಿಯ ಮಧ್ಯೆ ಚೇನಂಡ ಕುಟುಂಬಸ್ಥರು ಕುಣಿದು ಕುಪ್ಪಳಿಸಿದರು. ಪಂದ್ಯಾವಳಿಯ ಆಯೋಜಕರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.









