
ಮಡಿಕೇರಿ ಮೇ 4 NEWS DESK : ಕಾವೇರಿ ನದಿಯಲ್ಲಿ ಮುಳುಗಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸಿದ್ದಾಪುರ ಸಮೀಪದ ಗುಹ್ಯ ಗ್ರಾಮದಲ್ಲಿ ಸೋಮವಾರ ನಡೆದಿದೆ. ವಿರಾಜಪೇಟೆ ಸುಂಕದಕಟ್ಟೆ ನಿವಾಸಿ ನಾಗರಾಜು (41) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಗುಹ್ಯ ದೇವಾಲಯ ಸಮೀಪದ ಕಾವೇರಿ ನದಿಗೆ ಸ್ನಾನಕ್ಕೆಂದು ತೆರಳಿದ್ದ ಇಬ್ಬರ ಪೈಕಿ ನಾಗರಾಜು ಗುಂಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಮೃತ ನಾಗರಾಜು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಗ್ರಾಮಸ್ಥರ ನೆರವಿನಿಂದ ಮೃತದೇಹವನ್ನು ಹೊರ ತೆಗೆಯಲಾಗಿದ್ದು, ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









