
ಮಡಿಕೇರಿ ಮೇ 14 NEWS DESK : ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಯು, ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆ, ಕರ್ನಾಟಕ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದ್ದು, ಕರ್ನಾಟಕ ಸರ್ಕಾರದ ನಿರ್ದೇಶನದಂತೆ “ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆ(ಕೆಎಸ್‍ಎಪಿಸಿಸಿ)ಯನ್ನು ಸಿದ್ಧಪಡಿಸಿ 2024ರಲ್ಲಿ ಕೇಂದ್ರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಅನುಮೋದನೆ ಪಡೆದಿದೆ. ಈ ಯೋಜನೆಯಡಿಯಲ್ಲಿ ಹವಾಮಾನ ಬದಲಾವಣೆಯ ಕುರಿತ ಕಾರ್ಯ ಅಂಶಗಳನ್ನು ಆಧರಿಸಿ, ವಿವಿಧ ಇಲಾಖೆಗಳು 2025-2030ರ ಅವಧಿಗೆ ಪ್ರಮುಖ ಕಾರ್ಯಕ್ಷಮತಾ ಸೂಚಕಗಳನ್ನು ಗುರಿಗಳೊಂದಿಗೆ ನಿಗದಿಪಡಿಸಿವೆ. ಈ ಸೂಚಕಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರೆ ಪಾಲುದಾರ ಸಂಸ್ಥೆಗಳ ಸಾಮಥ್ರ್ಯ ವೃದ್ಧಿ ಅತ್ಯವಶ್ಯಕವಾಗಿದೆ.
ಈ ಹಿನ್ನಲೆಯಲ್ಲಿ, ಎಂಪ್ರಿ ಸಂಸ್ಥೆಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದೊಂದಿಗೆ 2025-26ನೇ ಸಾಲಿನಲ್ಲಿ ರಾಜ್ಯದ 22 ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಇದರ ಮುಂದುವರಿದ ಭಾಗವಾಗಿ, 2026-27ನೇ ಸಾಲಿನಲ್ಲಿ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ವಿಸ್ತರಿಸಲಾಗುತ್ತಿದೆ. ಈ ಸರಣಿಯಲ್ಲಿ ಗುರುವಾರ ಕೊಡಗು ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತರಬೇತಿ ಕಾರ್ಯಾಗಾರ ಆಯೋಜಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮುಖ್ಯ ಯೋಜನಾಧಿಕಾರಿಗಳಾದ ಅಬ್ದುಲ್ ನಬಿ ಅವರು ಹಾಗೂ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ ಅವರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಎಂಪ್ರಿ ಸಂಸ್ಥೆಯ ಸಂಶೋಧನಾ ವಿಜ್ಞಾನಿಗಳಾದ ಡಾ.ಶೃತಿ ಅವರು ಹಾಗೂ ಬೆಂಗಳೂರಿನ ಜಲ ಸಂಪನ್ಮೂಲ ತಜ್ಞರು ಎಸಿಐಡಬ್ಲ್ಯುಆರ್‍ಎಂ ಡಾ.ಶಶಿಕುಮಾರ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿಗಳಾದ ಆನಂದ್ ಪ್ರಕಾಶ್ ಮೀನಾ ಅವರು ಮಾತನಾಡಿ ಹವಾಮಾನ ಬದಲಾವಣೆಗೆ ಅನೇಕ ಕಾರಣಗಳಿದ್ದು, ಈ ಬಗ್ಗೆ ಕಾಲ ಕಾಲಕ್ಕೆ ಮಾಹಿತಿ ನೀಡುವಂತಾಗಬೇಕು ಎಂದರು. ಕೆಪಿಐಗಳ ಅನುಷ್ಠಾನಕ್ಕೆ ತರಲು ಹೇಗೆ ಕಾರ್ಯ ನಿರ್ವಹಿಸಬೇಕು ಎಂಬುದನ್ನು ತಿಳಿಸಿ, ತರಬೇತಿ ಆಯೋಜಿಸಿದ ಎಂಪ್ರಿ, ಕೆಎಸ್‍ಸಿಎಸ್‍ಟಿ ಗೆ ಪ್ರಶಂಸೆಯನ್ನು ತಿಳಿಸಿ ತರಬೇತಿಯ ಪೂರ್ಣ ಉಪಯೋಗ ಪಡೆಯಲು ಭಾಗವಹಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮುಖ್ಯ ಯೋಜನಾಧಿಕಾರಿ ಅಬ್ದುಲ್ ನಬಿ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ತರಬೇತಿ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಶಿಕ್ಷಣ ಸಂಸ್ಥೆಗಳ ಸದಸ್ಯರು ಹಾಗೂ ಇತರೆ ಪಾಲುದಾರರು ಭಾಗವಹಿಸಿದ್ದರು. ಡಾ.ಶೃತಿ ಅವರು “ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆ” ಕುರಿತು ಸವಿಸ್ತಾರವಾಗಿ ವಿವರಣೆ ನೀಡಿದರು. ಕಾರ್ಯನೀತಿ, ಕಾರ್ಯತಂತ್ರಗಳು, ವಿವಿಧ ಇಲಾಖೆಗಳ ಪಾತ್ರ ಹಾಗೂ ಅಲ್ಪಾವಧಿಯ ಹವಾಮಾನ ಮಾಲಿನ್ಯಕಾರಕಗಳ ಪರಿಣಾಮಗಳು ಮತ್ತು ಜಿಲ್ಲಾಸ್ಥರದ ದತ್ತಾಂಶಗಳ ಕುರಿತು ಸಮಗ್ರ ಮಾಹಿತಿ ನೀಡಿದರು. ಜಲ ಸಂಪನ್ಮೂಲ ವಲಯಕ್ಕೆ ಸಂಬಂಧಿಸಿದ ಹವಾಮಾನ ಕ್ರಿಯಾ ಯೋಜನೆ ಕುರಿತು ಜಲ ಸಂಪನ್ಮೂಲ ತಜ್ಞರು ಎಸಿಐಡಬ್ಲ್ಯುಆರ್‍ಎಂ ಬೆಂಗಳೂರು, ಡಾ. ಶಶಿಕುಮಾರ್ ಎನ್ ಅವರು ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು. ಕಾರ್ಯಕ್ರಮದ ಯಶಸ್ಸಿಗೆ ಎನ್.ಆರ್.ಡಿ.ಎಂ.ಎಸ್ ಅಧಿಕಾರಿಗಳಾದ ಕುಮಾರಿ ಇಂಚರಾ ಅವರು ಉತ್ತಮ ಸಹಕಾರ ನೀಡಿದರು ಹಾಗೂ ದತ್ತಾಂಶ ಹಾಗೂ ಇಲಾಖೆಗಳು ಎನ್‍ಆರ್‍ಡಿಎಂಎಸ್ ಉಪಯೋಗ ಹೇಗೆ ಪಡೆಯಬೇಕು ಎಂಬ ಕುರಿತು ತಿಳಿಸಿದರು. ಎಂಪ್ರಿ ಸಂಸ್ಥೆಯ, ತರಬೇತಿ ಸಹಾಯಕರಾದ ರಾಘವೇಂದ್ರ ಎನ್. ಹಾಗೂ ಶ್ರೀಶೈಲ್, ಇಐಎಸಿಪಿ ಅವರು ಕಾರ್ಯಕ್ರಮದ ವ್ಯವಸ್ಥಾಪನೆ ಮತ್ತು ನಿರ್ವಹಣೆಯಲ್ಲಿ ಮಹತ್ವದ ಪಾತ್ರವಹಿಸಿ, ಕಾರ್ಯಕ್ರಮದ ಗುರಿಗಳನ್ನು ಯಶಸ್ವಿಯಾಗಿ ಸಾಧಿಸಲು ಸಹಕರಿಸಿದರು.









