
ಮಡಿಕೇರಿ ಮೇ 16 NEWS DESK : ಮಡಿಕೇರಿ ತಾಲ್ಲೂಕಿನ 12ನೇ ಕನ್ನಡ ಸಾಹಿತ್ಯ ಸಮ್ಮೇಳನವು ಮೇ 20 ರಂದು ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರ ಸರ್ವಾಧ್ಯಕ್ಷತೆಯಲ್ಲಿ ಕಡಂಗ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಸಮ್ಮೇಳನದ ಕುರಿತು ಮಾಹಿತಿ ನೀಡಿದರು. ಜಾನಪದ ತಜ್ಞರಾದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ, ಕೊಡವ ಕೌಟುಂಬಿಕ ಹಾಕಿಯ ಸಂಸ್ಥಾಪಕರಾದ ಪಾಂಡಂಡ ಕುಟ್ಟಣಿ ಸಭಾ ಮಂಟಪದಲ್ಲಿ ನಡೆಯಲಿದೆ. *11 ಪ್ರವೇಶ ದ್ವಾರಗಳು* ಕನ್ನಡದ ಹಬ್ಬದ ಅಂಗವಾಗಿ ಕಡಂಗ ಪಟ್ಟಣದಲ್ಲಿ 11 ಮಂದಿ ಹಿರಿಯರ ನೆನಪಿನ ದ್ವಾರಗಳನ್ನು ರಚಿಸಲಾಗಿದೆ. ಅವುಗಳೆಂದರೆ ಕುಲ್ಲಚಂಡ ದಿ.ಲಾಲು ಮೇದಯ್ಯ ಮತ್ತು ದಿ.ದೇವಕ್ಕ ಪ್ರವೇಶ ದ್ವಾರ, ಕೋಡಿರ ದಿ.ಮನು ಮೊಣ್ಣಪ್ಪ ನೆನಪಿನ ದ್ವಾರ, ದೇಯಿರ ಕುಟುಂಬಸ್ಥರ ನೆನಪಿನ ಪ್ರವೇಶ ದ್ವಾರ, ಮೇದುರ ದಿ.ನಂಜಪ್ಪ ಹಾಗೂ ದಿ.ಸೀತಮ್ಮ ನೆನಪಿನ ಪ್ರವೇಶ ದ್ವಾರ, ಕೋಡಿರ ದಿ.ಮುತ್ತಣ್ಣ ಹಾಗೂ ದಿ.ಸುನಂಧಿ ಮುತ್ತಣ್ಣ ನೆನಪಿನ ಪ್ರವೇಶ ದ್ವಾರ, ಚಲ್ಮಂಡ ದಿ.ಸುಬ್ಬಯ್ಯ ಹಾಗೂ ದಿ.ಕಾಮವ್ವ ನೆನಪಿನ ಪ್ರವೇಶ ದ್ವಾರ, ನಂಬಿಯಪಂಡ ದಿ.ಅಪ್ಪಣ್ಣ ಹಾಗೂ ದಿ.ಕಾಮವ್ವ ನೆನಪಿನ ಪ್ರವೇಶ ದ್ವಾರ, ಮುಕ್ಕಾಟಿರ ದಿ.ಚಂಗಪ್ಪ ಹಾಗೂ ದಿ.ಕಾಂಜವ್ವ ನೆನಪಿನ ಪ್ರವೇಶ ದ್ವಾರ, ಅನ್ನಂಬಿರ ದಿ. ಉತ್ತಪ್ಪ ಹಾಗೂ ದಿ.ಪಾರ್ವತಿ ನೆನಪಿನ ಪ್ರವೇಶ ದ್ವಾರ ಮತ್ತು ದಿ.ಪಾಲಚಂಡ ಮಿಟ್ಟು ಕಾವೇರಪ್ಪ ಹಾಗೂ ದಿ.ಬೋಜಕ್ಕಿ ನೆನಪಿನ ಪ್ರವೇಶ ದ್ವಾರಗಳನ್ನು ಅಂದು ಬೆಳಗ್ಗೆ ಉದ್ಘಾಟಿಸಲಾಗುತ್ತದೆ. ಇದರೊಂದಿಗೆ ಶಾಲೆಗೆ ಸ್ಥಳ ದಾನ ಮಾಡಿದ ಕಣಿಯರ ದಿ.ಬೆಳ್ಯಪ್ಪ ಮತ್ತು ಕಣಿಯರ ದಿ.ಜೋಯಪ್ಪ ನೆನಪಿನ ದ್ವಾರ ಮತ್ತು ರಾವ್ ಬಹದ್ದೂರ್ ಕೋಡಿರ ಟಿ.ಉತ್ತಪ್ಪ ಅವರ ನೆನಪಿನ ಮಹಾದ್ವಾರವನ್ನು ಉದ್ಘಾಟಿಸಲಾಗುತ್ತದೆಂದರು. ಇದೇ ಸಂದರ್ಭ ನಡಿಕೇರಿಯಂಡ ಚಿಣ್ಣಪ್ಪ ನೆನಪಿನ ಪುಸ್ತಕ ಮಳಿಗೆ, ದಿ.ಪಾಲಚಂಡ ಪೊನ್ನು ತಿಮ್ಮಯ್ಯ ನೆನಪಿನ ಸ್ತ್ರೀಶಕ್ತಿ ಮಳಿಗೆಗಳನ್ನು ಗಣ್ಯರು ಉದ್ಘಾಟಿಸಲಿದ್ದಾರೆಂದರು. *ಸಮ್ಮೇಳನಾಧ್ಯಕ್ಷರ ಮೆರವಣಿಗೆ* ಸಮ್ಮೇಳನದಂದು ಬೆಳಗ್ಗೆ 9ಗಂಟೆಗೆ ಕಡಂಗದ ವಿಜಯ ಪ್ರೌಢಶಾಲೆಯಿಂದ ಸಮ್ಮೇಳನ ನಡೆಯುವ ಜಿಎಂಪಿ ಶಾಲಾ ಮೈದಾನದವರೆಗೆ ವಿವಿಧ ಕಲಾ ತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷ ಐತಿಚಂಡ ರಮೇಶ್ ಉತ್ತಪ್ಪರ ಮೆರವಣಿಗೆಯನ್ನು ಆಯೋಜಿಸಿರುವುದಾಗಿ ಮಾಹಿತಿಯನ್ನಿತ್ತರು. *ಉದ್ಘಾಟನೆ*
ಕನ್ನಡ ಸಾಹಿತ್ಯ ಸಮ್ಮೇಳನದ ಸಭಾ ಕಾರ್ಯಕ್ರಮವನ್ನು ಬೆಳಗ್ಗೆ 10.30 ಗಂಟೆಗೆ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಐತಿಚಂಡ ರಮೇಶ್ ಉತ್ತಪ್ಪ ವಹಿಸಲಿದ್ದಾರೆ. ನಿಕಟ ಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ.ವಿಜಯ್ ಪೂಣಚ್ಚ ತಂಬಂಡ ಉಪಸ್ಥಿತರಿರಲಿದ್ದಾರೆ. ಸ್ಮರಣ ಸಂಚಿಕೆಯನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಕಡಂಗದ ಸಿ.ವಿ.ಮೊಹಮ್ಮದ್ ನಿಝಾರ್ ಸಖಾಫಿ ಅವರು ರಚಿಸಿರುವ “ಕಡಂಗ ನೆನಪಿನಂಗಳದಲ್ಲಿ” ಪುಸ್ತಕವನ್ನು ಅನಾವರಣಗೊಳಿಸಲಿದ್ದಾರೆಂದು ವಿವರಗಳನ್ನು ನೀಡಿದರು. ಸಭಾ ಕಾರ್ಯಕ್ರಮದ ಬಳಿಕ ಮಧ್ಯಾಹ್ನ 1 ಗಂಟೆಗೆ ಕನ್ನಡ ಗೀತ ಗಾಯನ, ಮಧ್ಯಾಹ್ನ 3 ಗಂಟೆಗೆ ಕವಿಗೋಷ್ಠಿ, ವಿಚಾರಗೋಷ್ಠಿ ನಡೆಯಲಿದೆ. *ಸನ್ಮಾನ* ಸಮ್ಮೇಳನದ ಬಹಿರಂಗ ಅಧಿವೇಶನ ಮಧ್ಯಾಹ್ನ 3.30 ಗಂಟೆಗೆ ತಾಲ್ಲೂಕು ಕಸಾಪ ಅಧ್ಯಕ್ಷರಾದ ಕಡ್ಲೇರ ತುಳಸಿ ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಬಳಿಕ 15 ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಸಂಜೆ 5 ಗಂಟೆಗೆ ಸಮಾರೋಪ ನಂತರ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಟಿ.ಪಿ.ರಮೇಶ್ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್, ಕಾರ್ಯದರ್ಶಿ ಲಕ್ಷು ಸೋಮಣ್ಣ ಗುಡ್ಡೇರ, ಸಮ್ಮೇಳನದ ಉಪಾಧ್ಯಕ್ಷರು ಹಾಗೂ ಹಣಕಾಸು ಸಮಿತಿ ಅಧ್ಯಕ್ಷ ಕೋಡೀರ ವಿನೋದ್ ನಾಣಯ್ಯ, ಸಾಂಸ್ಕøತಿಕ ಸಮಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಸಮ್ಮೇಳನದ ಆಹಾರ ಮತ್ತು ವೇದಿಕೆ ಸಮಿತಿ ಪದಾಧಿಕಾರಿ ಅಚ್ಚಾಂಡಿರ ತಾರಾ ಉದಯ ಉಪಸ್ಥಿತರಿದ್ದರು.









