
ಮಡಿಕೇರಿ ಮೇ 16 NEWS DESK : ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ಹಾಗೂ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗ ಹಾಗೂ ಪ್ರವಾಸೋದ್ಯಮ ಮತ್ತು ಪ್ರವಾಸ ನಿರ್ವಹಣಾ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ “ವೃತ್ತಿ ನಿರ್ಮಾಣ ಮತ್ತು ವೃತ್ತಿಪರ ಕೌಶಲ್ಯಗಳು” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು. ಕಾಲೇಜಿನ ಸೆಮಿನಾರ್ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಾಘವ ಬಿ. ಅವರು, ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಸಾಧಿಸಲು ಶಿಸ್ತು, ಆತ್ಮವಿಶ್ವಾಸ, ಪರಿಶ್ರಮ ಹಾಗೂ ಕೌಶಲ್ಯಾಭಿವೃದ್ಧಿಯ ಮಹತ್ವವನ್ನು ತಿಳಿಸಿದರು. ಶ್ರೀನಿವಾಸ್ ವಿಶ್ವವಿದ್ಯಾಲಯದ ಬಿಸಿನೆಸ್ ಅಡ್ಮಿನಿಸ್ಟ್ರೇಶನ್ ವಿಭಾಗ ಮುಖ್ಯಸ್ಥರಾದ ಡಾ. ಕಾವ್ಯಶ್ರೀ ವೃತ್ತಿಪರ ಕೌಶಲ್ಯಾಭಿವೃದ್ಧಿ ಕುರಿತು ಉಪನ್ಯಾಸ ನೀಡಿ, ಸಂವಹನ ಕೌಶಲ್ಯ, ನಾಯಕತ್ವ, ತಂಡದೊಂದಿಗೆ ಕಾರ್ಯನಿರ್ವಹಣೆ, ವೃತ್ತಿಪರ ನೈತಿಕತೆ ಹಾಗೂ ಸಕಾರಾತ್ಮಕ ಮನೋಭಾವದ ಮಹತ್ವವನ್ನು ವಿವರಿಸಿದರು. ಸಹಾಯಕ ಪ್ರಾಧ್ಯಾಪಕರಾದ ಸಾಗರ್ ಶ್ರೀನಿವಾಸ್ ಮಾತನಾಡಿ, ಉತ್ತಮ ರೆಸ್ಯೂಮ್ ತಯಾರಿಸುವ ವಿಧಾನ ಹಾಗೂ ವೃತ್ತಿ ಸಿದ್ಧತೆಯ ಕುರಿತು ಮಾಹಿತಿ ನೀಡಿದರು. ವಿದ್ಯಾರ್ಥಿಗಳು ತಮ್ಮ ಕೌಶಲ್ಯ, ಸಾಧನೆ ಮತ್ತು ಅರ್ಹತೆಗಳನ್ನು ಪರಿಣಾಮಕಾರಿಯಾಗಿ ರೆಸ್ಯೂಮ್‌ನಲ್ಲಿ ಪ್ರದರ್ಶಿಸುವ ಬಗ್ಗೆ ಮಾರ್ಗದರ್ಶನ ನೀಡಿದರು. ಮತ್ತೋರ್ವ ಸಹಾಯಕ ಪ್ರಾಧ್ಯಪಕರಾದ ಡಾ. ನಿಕ್ಷಿತಾ ಶೆಟ್ಟಿ, ವಿದ್ಯಾರ್ಥಿಗಳಿಗೆ ಉದ್ಯಮೋದ್ಯಮಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಂತೆ ಪ್ರೇರೇಪಿಸಿದರು. ಕಾರ್ಯಕ್ರಮವನ್ನು ಜಿ.ಕೆ.ಯೋಗಾನಂದ ಅವರು ನಿರೂಪಿಸಿದರು. ವಿಭಾಗದ ಮುಖ್ಯಸ್ಥೆಯಾದ ಡಾ. ಶೈಲಶ್ರೀ ಕೆ.ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿದರು. ವಿಭಾಗದ ಎಲ್ಲಾ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.









