
ಮಡಿಕೇರಿ ಮೇ 19 NEWS DESK : “ಆನ್ ಲೈನ್” ಔಷಧಿಗಳ ಮಾರಾಟವನ್ನು ಸ್ಥಗಿತಗೊಳಿಸಬೇಕೆನ್ನುವ ಪ್ರಮುಖ ಬೇಡಿಕೆಯನ್ನು ಮುಂದಿರಿಸಿಕೊಂಡು ಮೇ 20 ರಂದು ನಡೆಯಲಿರುವ ಔಷಧಿ ವ್ಯಾಪಾರಸ್ಥರ ರಾಷ್ಟ್ರೀಯ ಮಟ್ಟದ ಪ್ರತಿಭಟನೆಯ ಭಾಗವಾಗಿ ಕೊಡಗು ಜಿಲ್ಲಾ ವ್ಯಾಪ್ತಿಯ ಎಲ್ಲಾ ಔಷಧಿಯಂಗಡಿಗಳು ಅಂದು ಮುಚ್ಚಲ್ಪಡಲಿವೆ. ಸುದ್ದಿಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘಟನೆಯ ಅಧ್ಯಕ್ಷರು, ರಾಜ್ಯ ಸಂಘÀಟನೆಯ ಕಾರ್ಯದರ್ಶಿ ಹಾಗೂ ರಾಷ್ಟ್ರೀಯ ಸಂಘಟನೆಯ ಸಂಘಟನಾ ಕಾರ್ಯದರ್ಶಿಗಳಾದ ಎ.ಕೆ.ಜೀವನ್ ಪ್ರತಿಭಟನೆಯ ಕುರಿತು ಮಾಹಿತಿ ನೀಡಿದರು. ರಾಷ್ಟ್ರವ್ಯಾಪಿ 12.50 ಲಕ್ಷ ಔಷಧಿ ವ್ಯಾಪಾರಸ್ಥರಿದ್ದಾರಾದರೆ, ರಾಜ್ಯದಲ್ಲಿ 26 ಸಾವಿರ ಹಾಗೂ ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ 200 ಔಷಧ ವ್ಯಾಪಾರಸ್ಥರಿದ್ದಾರೆ. ಇವರೆಲ್ಲರೂ ತಮ್ಮ ಔಷಧಿಯಂಗಡಿಗಳನ್ನು ಒಂದು ದಿನದ ಮಟ್ಟಿಗೆ ಮುಚ್ಚಿ ಪ್ರತಿಭಟನೆ ನಡೆಸಲಿದ್ದಾರೆಂದು ತಿಳಿಸಿದರು. ಪ್ರತಿಭಟನೆಯ ಸಂದರ್ಭ ಸಾರ್ವಜನಿಕರಿಗೆ ಯಾವುದೇ ಅನಾನುಕೂಲತೆ ಉಂಟಾಗಬಾರದೆನ್ನುವ ಉದ್ದೇಶದಿಂದ ಆಸ್ಪತ್ರೆಗಳಲ್ಲಿ ಇರುವ ಔಷಧಿಯಂಗಡಿಗಳನ್ನು ತೆರೆದಿಡಲು ಅವಕಾಶ ನೀಡಲಾಗಿದೆಯೆಂದು ಜೀವನ್ ಮಾಹಿತಿಯನ್ನಿತ್ತರು. :: ಕೊರೋನ ಸಂದರ್ಭದ ಆದೇಶ ಹಿಂಪಡೆಯಿರಿ :: ಕೊರೋನಾ ಮಹಾ ಮಾರಿ ರಾಷ್ಟ್ರ ಮಟ್ಟದಲ್ಲಿ ಕಾಣಿಸಿಕೊಂಡು ಆತಂಕವನ್ನು ಸೃಷ್ಟಿಸಿರುವ ಹಂತದಲ್ಲಿ ಕೇಂದ್ರ ಸರ್ಕಾರ “ಆನ್ ಲೈನ್”ನಲ್ಲಿ ಔಷಧಿ ವ್ಯಾಪಾರಕ್ಕೆ ಅವಕಾಶವನ್ನು ಒದಗಿಸಿತು. ಅದನ್ನೇ ಆಧಾರವಾಗಿಸಿಕೊಂಡು ಇಂದಿಗೂ ಆನ್‍ಲೈನ್‍ನಲ್ಲಿ ಔಷಧಿ ವ್ಯಾಪಾರ ನಡೆಸಲಾಗುತ್ತಿದೆ. ಆದರೆ, ಇಂತಹ ವ್ಯಾಪಾರ ಯಾವತ್ತೂ ಗ್ರಾಹಕರ ಹಿತಕ್ಕೆ ವಿರುದ್ಧವಾಗಿದೆ. ಆನ್ ಲೈನ್ ಮೂಲಕ ಔಷಧಿ ಖರೀದಿಸಿದ ಗ್ರಾಹಕರು ಯಾವುದೇ ಸಮಸ್ಯೆಗಳಿಗೆ ಒಳಗಾದಲ್ಲಿ ದೂರು ನೀಡಲು ಸಾಧ್ಯವಾಗಲಾರದೆಂದು ತಿಳಿಸಿದ ಅವರು, ತಕ್ಷಣವೆ ಆನ್‍ಲೈನ್ ಔಷಧಿ ವ್ಯಾಪಾರಕ್ಕೆ ನೀಡಿರುವ ಆದೇಶವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು. ದೊಡ್ಡ ಮಟ್ಟದ ವಿನಾಯ್ತಿಗಳನ್ನು ಸ್ಥಗಿತಗೊಳಿಸಿ :: ಔಷಧಿ ವ್ಯಾಪಾರಸ್ಥರೆಲ್ಲರು ನ್ಯಾಷನಲ್ ಪ್ರೈಸಿಂಗ್ ಅಥಾರಿಟಿ ನಿಗದಿ ಪಡಿಸಿದ ದರದಂತೆ ಮಾರಾಟ ಮಾಡುತ್ತಾರೆ. ಈ ಸಂದರ್ಭ ಔಷಧಿ ವ್ಯಾಪಾರಸ್ಥರು ಪಡೆಯುವ ಕಮಿಷನ್ ಶೇ.17 ರಿಂದ 20 ರಷ್ಟಿರುತ್ತದೆ. ಆದರೆ, ಆನ್ ಲೈನ್ ಮೂಲಕ ಔಷಧಿ ಮಾರಾಟ ಮಾಡುವ ದೊಡ್ಡ ಕಂಪೆನಿಗಳು ಶೇ.45ರಿಂದ 50 ರಷ್ಟು ರಿಯಾಯಿತಿಯನ್ನು ಗ್ರಾಹಕರಿಗೆ ನೀಡುತ್ತಿದ್ದು, ಈ ಪ್ರಮಾಣದ ರಿಯಾಯಿತಿ ನೀಡಲು ಸಾಧ್ಯವಿಲ್ಲ. ಇದನ್ನು ತಕ್ಷಣ ಸ್ಥಗಿತಗೊಳಿಸಬೇಕೆಂದು ಜೀವನ್ ಆಗ್ರಹಿಸಿದರು. ಇವೆಲ್ಲಕ್ಕೂ ಮಿಗಿಲಾಗಿ ದೊಡ್ಡ ಪ್ರಮಾಣದಲ್ಲಿ ಗುಣಮಟ್ಟವನ್ನು ಖಾತರಿ ಪಡಿಸದ ನಕಲಿ ಔಷಧಿಗಳ ಮಾರಾಟ ವ್ಯಾಪಕವಾಗಿ ನಡೆಯುತ್ತಿದ್ದು, ಇವುಗಳ ಮೇಲೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಕೊಡಗು ಜಿಲ್ಲಾ ಔಷಧಿ ವ್ಯಾಪಾರಸ್ಥರ ಸಂಘದ ಉಪಾಧ್ಯಕ್ಷ ಅಂಬೆಕಲ್ಲು ವಿನೋದ್, ಕಾರ್ಯದರ್ಶಿ ಡಿ.ಐ.ಪುರುಷೋತ್ತಮ, ಜಂಟಿ ಕಾರ್ಯದರ್ಶಿ ಕೆ.ವಸಂತ ಕುಮಾರ್, ಖಜಾಂಚಿ ಪ್ರಸಾದ್ ಗೌಡ, ಆಡಳಿತ ಮಂಡಳಿ ಸದಸ್ಯರಾದ ತಿಲಕ್ ಉಪಸ್ಥಿತರಿದ್ದರು.








