
ವಿರಾಜಪೇಟೆ ಜೂ.14 NEWS DESK : ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ಮತ್ತು ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘ ಮತ್ತು ಡಿವೈಎಫ್‍ಐ ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆಯ ಗಡಿಯಾರ ಕಂಬ ಮುಂಭಾಗದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭ ಮಾತನಾಡಿದ ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಪಿ.ಆರ್. ಭರತ್, ಕೇಂದ್ರ ಸರಕಾರ ನಿರಂತರವಾಗಿ ಹೆಚ್ಚಿಸುತ್ತಿರುವ ಅಡುಗೆ ಅನಿಲ ಹಾಗೂ ಪೆಟ್ರೋಲ್ ಡಿಸೇಲ್ ಬೆಲೆ ಗಗನಕ್ಕೆ ಏರಿದ್ದು, ಜನ ಸಾಮಾನ್ಯರು ತೊಂದರೆಗೆ ಒಳಗಾಗಿದ್ದರೆ, ಅಸ್ಸಾಂ, ತಮಿಳುನಾಡು ಕೇರಳದಲ್ಲಿ ಚುನಾವಣೆ ಸಂಧರ್ಭದಲ್ಲಿ ತೈಲ ಬೆಲೆ ಏರಿಕೆ ಮಾಡದೇ ಚುನಾವಣೆ ನಂತರ ಬೆಲೆ ಏರಿಕೆ ಮಾಡಿದ್ದಾರೆ, ಅಡುಗೆ ಅನಿಲ 1000 ಹಾಗೂ ವಾಣಿಜ್ಯ ಅಡುಗೆ ಅನಿಲ ಬೆಲೆ 3000 ಆಗಿದ್ದು ಹೆಚ್ಚಳ ಹಿನ್ನೆಲೆ ನಗರದಲ್ಲಿ ಹಲವು ಹೊಟೇಲ್‍ಗಳು ಬಂದ್ ಆಗಿದೆ, 40 ರೂಪಾಯಿ ಇದ್ದ ದೋಸೆ 80 ಆಗಿದೆ, 50 ಇದ್ದ ಊಟಕ್ಕೆ 100 ರೂಪಾಯಿ ಆಗಿದೆ, ಈ ರೀತಿ ಆದರೆ ಜನ ಸಾಮಾನ್ಯರು ಜೀವನ ಸಾಗಿಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ಹೇಳಿದರು. ಅಖಿಲ ಭಾರತ ಜನವಾದಿ ಮಹಿಳಾ ಸಂಘದ ರಾಜ್ಯ ಸಮಿತಿ ಸದಸ್ಯೆ ಹಾಗೂ ಜಿಲ್ಲಾ ಸಂಚಾಲಕ ಸಮಿತಿ ಸದಸ್ಯೆ ಪದ್ಮಿನಿ ಶ್ರೀಧರ್, ಡಿವೈಎಫ್‍ಐ ಕೊಡಗು ಜಿಲ್ಲಾ ಖಜಾಂಜಿ ಸಾಧಿಕ್ ಎ.ಎಚ್., ಸಿಐಟಿಯು ಜಿಲ್ಲಾ ಸಮಿತಿ ಸದಸ್ಯರಾದ ಕೆ.ಎಸ್. ರಮೇಶ್, ಖಾಸಿಂ, ಆದಿವಾಸಿ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಪಿ.ಕೆ. ರಮೇಶ್, ಅಧ್ಯಕ್ಷರಾದ ಜಿ.ಆರ್. ಪ್ರೇಮ, ಖಜಾಂಜಿ ಭಾಗ್ಯ ಚಂಗಪ್ಪ, ಜಿಲ್ಲಾ ಮುಖಂಡರಾದ ಪುಷ್ಪ, ರವಿ ಸೇರಿದಂತೆ ಹಲವು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









