
ಸೋಮವಾರಪೇಟೆ NEWS DESK ಜು.29 : ಬಿಡದಿ ರೈತಪರ ಹೋರಾಟಕ್ಕೆ ಜು.24ರಂದು ತೆರಳುತ್ತಿದ್ದ ಕೊಡಗಿನ ರೈತರನ್ನು ಪೊಲೀಸರು ಬಂಧಿಸಿರುವುದನ್ನು ಖಂಡಿಸಿ ಆ.7ರಂದು ಎಸ್‌ಪಿ ಕಚೇರಿ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆಯ ಜಿಲ್ಲಾ ಉಪಾಧ್ಯಕ್ಷ ಜಿ.ಎಂ.ಹೂವಯ್ಯ ತಿಳಿಸಿದ್ದಾರೆ. ಶಾಂತಿಯುತ ಹೋರಾಟ ಮಾಡಲು ನಮಗೆ ಸಂವಿಧಾನಿಕ ಹಕ್ಕು ಇದೆ. ಇದನ್ನು ತಡೆಯಲು ಪೊಲೀಸರಿಗೆ ಅಧಿಕಾರ ಕೊಟ್ಟವರೂ ಯಾರು? ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವ ಸಿ ಆ್ಯಂಡ್ ಡಿ ಹೋರಾಟದಲ್ಲಿ ರಾಜ್ಯ ರೈತ ಸಂಘದ ಅನೇಕ ನಾಯಕರು ಭಾಗಿಯಾಗಿದ್ದಾರೆ. ಈ ಕಾರಣದಿಂದ ಬಿಡದಿಯಲ್ಲಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಲು ತೆರಳಲಾಗುತ್ತಿತ್ತು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ರಾಜ್ಯದ ಎಲ್ಲಾ ಜಿಲ್ಲೆಗಳಿಂದ ರೈತರು ಬಿಡದಿಗೆ ತೆರಳಿ ಹೋರಾಟದಲ್ಲಿ ಭಾಗವಹಿಸಿದ್ದಾರೆ. ಆದರೆ ಕೊಡಗಿನ ರೈತರು ಭಾಗವಹಿಸದಂತೆ ಪೊಲೀಸರು ತಡೆದಿರುವುದರಿಂದ ನಮಗೆ ಅವಮಾನವಾಗಿದೆ ಎಂದು ಹೇಳಿದರು. ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಮಾತನಾಡಿ, ಬಿಡದಿಗೆ ತೆರಳುತ್ತಿದ್ದ ರೈತ ಮುಖಂಡರನ್ನು ಬಂಧನ ಮಾಡುವುದಕ್ಕೆ ಕಾಣದ ಕೈಗಳು ಕೆಲಸ ಮಾಡಿವೆ. ರೈತ ಹೋರಾಟಗಳಿಂದ ರೈತರಿಗೆ ಒಳ್ಳೆಯದಾಗುತ್ತಿದೆ. ರೈತಪರ ಹೋರಾಟಕ್ಕೆ ರಾಜಕೀಯ ಪಕ್ಷಗಳು ಮತ್ತು ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಎಸ್.ಪಿ.ಕಚೇರಿ ಮುಂದೆ ನಡೆಯುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಸಿ.ಎಸ್.ನಾಗರಾಜು, ದಲಿತಪರ ಸಂಘಟನೆ ಪದಾಧಿಕಾರಿ ಪ್ರತಾಪ್ ಮತ್ತಿತರರು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ರೈತಮುಖಂಡ ಬಿ.ಪಿ.ಮೊಗಪ್ಪ ಇದ್ದರು.









