
ಮಡಿಕೇರಿ NEWS DESK ಜೂ.23 : ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆಯ ಶ್ರೀ ಮೃತ್ಯುಂಜಯ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ಪ್ರಗತಿಯಲ್ಲಿದೆ. ಕಳೆದ ಮಾರ್ಚ್ 22 ರಿಂದ ಜೀರ್ಣೋದ್ಧಾರ ಕಾರ್ಯ ಆರಂಭಗೊAಡಿದ್ದು, ಇದೀಗ ಬಹುತೇಕ ಕಾಮಗಾರಿ ಮುಕ್ತಾಯದ ಹಂತದತ್ತ ಸಾಗಿದೆ. ರೂ. 1 ಕೋಟಿಗೂ ಅಧಿಕ ವೆಚ್ಚದಲ್ಲಿ ದೇವಸ್ಥಾನದ ಗರ್ಭಗುಡಿ, ತೀರ್ಥ ಮಂಟಪ, ಗಣಪತಿ ಗುಡಿಯ ಕೆಲಸವನ್ನು ಅಭಿವೃದ್ಧಿಪಡಿಸುವ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿತ್ತು. ನೀಲೇಶ್ವರ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ವಿಧಿವಿಧಾನಗಳನ್ನು ಪ್ರಾರಂಭಿಸಲಾಗಿತ್ತು. ಕಪ್ಪುಶಿಲೆಯಲ್ಲಿ ಗರ್ಭಗುಡಿಯ ಕೆಲಸ ನಿರ್ವಹಿಸಲಾಗುತ್ತಿದೆ. ಮುರುಡೇಶ್ವರದ ಶ್ರೀಧರ್ ನಾಯಕ್ ಅವರು ಶಿಲೆಗಳನ್ನು ತಯಾರಿಸಿದ್ದಾರೆ. ದೇವಾಲಯ ಎತ್ತರದ ಪ್ರದೇಶದಲ್ಲಿರುವುದರಿಂದ ಬೃಹತ್ ಕ್ರೇನ್‌ನ ಸಹಾಯದಿಂದ ಅತ್ಯಂತ ಸಾಹಸಮಯ ರೀತಿಯಲ್ಲಿ ಕಾಮಗಾರಿ ನಡೆಸಲಾಗುತ್ತಿದೆ. ಪ್ರಸ್ತುತ ಗಣಪತಿ ಗುಡಿ ಮತ್ತು ಮೇಲ್ಚಾವಣಿ ಕೆಲಸ ಪ್ರಗತಿಯಲ್ಲಿದೆ, ತಾಮ್ರದ ಹೊದಿಕೆ ಕಾಮಗಾರಿ ನಡೆಯುತ್ತಿದೆ. ಪ್ರಸ್ತುತ ಸುಮಾರು 90 ಲಕ್ಷ ವೆಚ್ಚದ ಕಾಮಗಾರಿ ಪೂರ್ಣಗೊಂಡಿದೆ. ನವೀಕರಣ ಕೆಲಸಕ್ಕೆ ನಾಡಿನವರು, ಗ್ರಾಮಸ್ಥರು ಹಾಗೂ ಭಕ್ತಾದಿಗಳು ನೆರವು ನೀಡಿದ್ದಾರೆ. ಇದೀಗ ಬಾಕಿ ಉಳಿದಿರುವ ಕೆಲಸ ಕಾರ್ಯಗಳಿಗೆ ಸುಮಾರು ರೂ.30 ಲಕ್ಷದಷ್ಟು ಹಣಕಾಸಿನ ಅಗತ್ಯತೆ ಇದೆ. ಈ ನಿಟ್ಟಿನಲ್ಲಿ ಭಕ್ತಾದಿಗಳಿಂದ ಇನ್ನಷ್ಟು ನೆರವಿನ ನಿರೀಕ್ಷೆಯಲ್ಲಿರುವುದಾಗಿ ದೇವಸ್ಥಾನದ ಅಡಳಿತ ಮಂಡಳಿ ಅಧ್ಯಕ್ಷ ಚೋನಿರ ಸುಬ್ರಮಣಿ ಅವರು ತಿಳಿಸಿದ್ದಾರೆ. ಮಳೆಗಾಲಕ್ಕೂ ಮೊದಲು ಯೋಜನೆ ಪೂರ್ಣಗೊಳ್ಳಲಿದ್ದು, ಮುಂದಿನ ಜುಲೈ 6 ರಿಂದ 8 ರ ತನಕ ಪ್ರತಿಷ್ಠಾಪನಾ ಕಾರ್ಯವನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಸುಬ್ರಮಣಿ ಮಾಹಿತಿ ನೀಡಿದ್ದಾರೆ. ವರ್ಷದ 365 ದಿನಗಳಲ್ಲೂ ಈ ದೇಗುಲದಲ್ಲಿ ಮೃತ್ಯುಂಜಯ ಹೋಮ ಸೇರಿದಂತೆ ವಿವಿಧ ಕೈಂಕರ್ಯಗಳು ತಪ್ಪದೆ ನಡೆಯಬೇಕಿದೆ. ಪ್ರಸ್ತುತ ದೇವರನ್ನು ಬಾಲಾಲಯದಲ್ಲಿರಿಸಿ ಪೂಜಾ ವಿಧಿವಿಧಾನಗಳನ್ನು ನಡೆಸಲಾಗುತ್ತಿದೆ. ಜೀರ್ಣೋದ್ಧಾರ ಕಾರ್ಯಕ್ಕೆ ಭಕ್ತರು ಸಹಕಾರ ನೀಡಬಹುದಾಗಿದೆ.











