
ಮಡಿಕೇರಿ ಜೂ.26 NEWS DESK : ಮಲ್ಮ ಬೆಟ್ಟ ಸಮೀಪದ ಜಾಗದಲ್ಲಿ ಆರಂಭಿಸಲಾದ ಯೋಜನೆಯನ್ನು ಜನ ವಿರೋಧದ ನಡುವೆ ಕೈಬಿಡಲಾಗಿದೆ ಎಂದು ಜಾಗದ ಮಾಲೀಕರು ನೀಡಿರುವ ಹೇಳಿಕೆ ಸ್ವಾಗತಾರ್ಹ. ಇವರು ಖರೀದಿಸಿರುವ ಭೂಮಿಯನ್ನು ಇತರರಿಗೆ ಮಾರಾಟ ಮಾಡುವ ಅಥವಾ ಅರಣ್ಯ ಇಲಾಖೆಗೆ ನೀಡುವ ನಿರ್ಧಾರದಿಂದ ಹಿಂದೆ ಸರಿದು ನೆಲಜಿಯ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಹಸ್ತಾಂತರಿಸಲಿ ಎಂದು ಕೊಡವಾಮೆರ ಕೊಂಡಾಟ ಸಂಘಟನೆಯ ಅಧ್ಯಕ್ಷ ಚಾಮೆರ ದಿನೇಶ್ ಬೆಳ್ಯಪ್ಪ ಒತ್ತಾಯಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಾಗವನ್ನು ದೇವಾಲಯಕ್ಕೆ ನೀಡುವ ಮೂಲಕ ನೈಜ ಧರ್ಮ ಸಹಿಷ್ಣುತೆಯನ್ನು ಮೆರೆಯಲಿ ಎಂದು ತಿಳಿಸಿದರು. ದೊಡ್ಡ ಪ್ರಮಾಣದ ಮರಗಳ ಹನನ ಮಾಡಿ ಭೂಮಿಯನ್ನು ಬಗೆದಿದ್ದರೂ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತ ಮೌನಕ್ಕೆ ಶರಣಾಗಿವೆ. ಸಾಮಾನ್ಯ ರೈತರು ಒಂದೆರಡು ಕಾಫಿಗಿಡವನ್ನು ನೆಟ್ಟರೆ, ತಮ್ಮ ಅಗತ್ಯಕ್ಕೆ ಪೂರಕವಾಗಿ ಮರಕಡಿದರೆ ಓಡಿ ಬಂದು ಕ್ರಮ ಜರುಗಿಸುವ ಅರಣ್ಯ ಇಲಾಖೆ, ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಹಿಂದಿನ ಮರ್ಮದ ತನಿಖೆಯಾಗಬೇಕಾಗಿದೆ ಎಂದರು. ಜನವಿರೋಧಕ್ಕಾಗಿ ಜಾಗವನ್ನು ಹಿಂದಿರುಗಿಸುತ್ತೇನೆ ಎಂದು ಘೋಷಿಸಿರುವವರು ಈಗಾಗಗಲೇ ಪ್ರಕೃತಿಗೆ ಆಗಿರುವ ಹಾನಿಗೆ ಯಾವ ಪರಿಹಾರ ಕಲ್ಪಿಸುತ್ತಾರೆ, ಇದಕ್ಕೆಲ್ಲ ಹೊಣೆ ಯಾರು ಎನ್ನುವುದನ್ನು ಮೊದಲು ಸ್ಪಷ್ಟಪಡಿಸಬೇಕು. ಸರಕಾರ ತಕ್ಷಣ ಮಧ್ಯ ಪ್ರವೇಶ ಮಾಡಿ, ಈ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕು. ಮಲ್ಮ ಬೆಟ್ಟ ಮತ್ತು ಕೊಡಗಿನಾದ್ಯಂತ ನಡೆಯುತ್ತಿರುವ ಅವ್ಯಾಹತ ಪಕೃತಿಯ ನಾಶವನ್ನು ತಡೆಯಲು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು. ಸೂಕ್ಷ್ಮ ಪರಿಸರ ವಲಯವಾಗಿರುವ ಕೊಡಗಿನಲ್ಲಿ ಯಾವುದೇ ಬೃಹತ್ ಕಟ್ಟಡಗಳು ಮತ್ತು ಅಕ್ರಮ ಯೋಜನೆಗಳಿಗೆ ಅವಕಾಶ ನೀಡಬಾರದು ಎಂದು ಆಗ್ರಹಿಸಿದರು. ಮಲ್ಮ ಬೆಟ್ಟ ಸಮೀಪದ ಜಾಗದಲ್ಲಿ ನಡೆದಿರುವ ಚಟುವಟಿಕೆಯ ವಿರುದ್ಧ, ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ದಕ್ಷಿಣ ವಲಯ ಪೀಠ)ಕ್ಕೆ ಕೊಡವಾಮೆರ ಕೊಂಡಾಟ ಸಂಘಟನೆ ಈಗಾಗಲೇ ದೂರು ನೀಡಿದೆ. ಕೊಡಗಿನಲ್ಲಿ ನಡೆಯುತ್ತಿರುವ ಅವ್ಯಾಹತ ಪರಿಸರ ನಾಶ ತಡೆಯಲು ತಕ್ಷಣ ಮಧ್ಯ ಪ್ರವೇಶಿಸಿ, ತಡಯಾಜ್ಞೆ ನೀಡುವುದಲ್ಲದೆ, ವಾರಸುದಾರರು, ಜಿಲ್ಲಾಡಳಿತ ಹಾಗೂ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ಹೊಣೆಗಾರರನ್ನಾಗಿ ಮಾಡಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದು, ಈ ಸಂಬಂಧ ಪರಿಶೀಲನೆ ನಡೆಯುತ್ತಿದೆ. ನೈಜ ಪರಿಸರ ಪ್ರೇಮಿಗಳು ಹಾಗೂ ಪಕೃತಿ ಆರಾಧಕರ ಸಹಕಾರದೊಂದಿಗೆ ನಮ್ಮ ಸಂಘಟನೆ ಕಾನೂನು ಹೋರಾಟವನ್ನು ಮುಂದುವರಿಸಲಿದೆ ಎಂದು ಚಾಮೆರ ದಿನೇಶ್ ಬೆಳ್ಯಪ್ಪ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಕುಜಿÐರ ಗಿರೀಶ್ ಭೀಮಯ್ಯ, ತೀತಮಾಡ ಸೋಮಣ್ಣ ಹಾಗೂ ಅಜ್ಜಮಕ್ಕಡ ವಿನು ಕುಶಾಲಪ್ಪ ಉಪಸ್ಥಿತರಿದ್ದರು.









