
ಮಡಿಕೇರಿ ಜೂ.26 NEWS DESK : ನೀಟ್ ಪರೀಕ್ಷಾ ಹಗರಣಗಳಿಗೆ ಕೇಂದ್ರ ಸರಕಾರದ ಬೇಜವಾಬ್ದಾರಿಯ ಧೋರಣೆಗಳೆ ಪ್ರಮುಖ ಕಾರಣವಾಗಿದ್ದು, ಇದರಿಂದ ಲಕ್ಷಾಂತರ ಮಕ್ಕಳ ಬದುಕು ಹಾಳಾಗಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳ ಭವಿಷ್ಯವನ್ನು ನಿರ್ಧರಿಸುವ ನೀಟ್ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಲಾಗದ ಕೇಂದ್ರದ ವೈಫಲ್ಯತೆಗಳನ್ನು ಜನರ ಮುಂದಿಡುವ ಕಾರ್ಯವನ್ನು ಕಾಂಗ್ರೆಸ್ ದೇಶ ವ್ಯಾಪಿ ನಡೆಸುತ್ತಿದೆ. ಕಳೆದ ನೀಟ್ ಪರೀಕ್ಷೆಯಲ್ಲಿನ ಹಗರಣಗಳ ಬಳಿಕ, ನೀಟ್ ಮರುಪರೀಕ್ಷೆಯನ್ನು ಸೈನಿಕರನ್ನು ಒಳಗೊಂಡಂತೆ ದೊಡ್ಡ ಮಟ್ಟದ ಬಂದೋಬಸ್ತ್ ನೊಂದಿಗೆ ನಡೆಸುವ ಮೂಲಕ ಅದನ್ನೇ ಸಾಧನೆ ಎಂದು ಬಿಂಬಿಸುವ ಪ್ರಯತ್ನ ಕೇಂದ್ರದ ಬಿಜೆಪಿ ಸರಕಾರದಿಂದ ನಡೆದಿರುವುದಾಗಿ ಟೀಕಿಸಿದರು. ಕೇಂದ್ರದ ಬಿಜೆಪಿ ನೇತೃತ್ವದ ಎನ್‍ಡಿಎ ಅಧಿಕಾರಕ್ಕೆ ಬಂದ ಕಳೆದ ಒಂದು ದಶಕಗಳ ಅವಧಿಯಲ್ಲಿ ನೀಟ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಅಸಮರ್ಪಕತೆಯಿಂದ ರಾಷ್ಟ್ರವ್ಯಾಪಿ 6.50 ಕೋಟಿಗೂ ಹೆಚ್ಚಿನ ಮಕ್ಕಳು ಬಾಧಿತರಾಗಿದ್ದಾರೆ. ಪರೀಕ್ಷಾ ಹಗರಣಗಳಿಗೆ ಸಿಲುಕಿ ಸಂಕಷ್ಟಕ್ಕೆ ಒಳಗಾದ ಮಕ್ಕಳು ಜೀವ ಕಳೆದುಕೊಂಡಿರುವ ಘಟನೆಗಳು ನಡೆದಿದೆ. ಇವೆಲ್ಲವುಗಳಿಗೆ ಸಂಬಂಧಿಸಿದಂತೆ ಕೇಂದ್ರದ ಶಿಕ್ಷಣ ಸಚಿವರು ರಾಜೀನಾಮೆ ನೀಡಬೇಕಿತ್ತಾದರು, ಆ ಕಾರ್ಯವನ್ನು ಮಾಡಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು. ಕೊಡಗು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್ ಅವರು ಮಾತನಾಡಿ, ನೀಟ್ ಪರೀಕ್ಷೆ ನಡೆಸುವ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಲೋಪದಿಂದಾಗಿ ಪ್ರಶ್ನೆ ಪತ್ರಿಕೆಗಳ ಸೋರಿಕೆಯಾಗಿ ದೇಶದ ಲಕ್ಷಾಂತರ ಮಕ್ಕಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ಬಿದ್ದಿದೆ. ಇದು ಭಾರತದ ಪರೀಕ್ಷಾ ವ್ಯವಸ್ಥೆಯ ಸಂಪೂರ್ಣ ವಿಫಲತೆಯಾಗಿದೆ ಎಂದರು. ನೀಟ್ ಪರೀಕ್ಷಾ ಹಗರಣದ ವೈಫಲ್ಯದ ಹೊಣೆಗಾರಿಕೆಯನನ್ನು ನಿಗದಿಪಡಿಸುವ ಮಹತ್ವದ ಯಾವುದೇ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿಲ್ಲ. ಪರೀಕ್ಷಾ ನಿರ್ವಹಣೆಯ ಜವಾಬ್ದಾರಿ ಹೊತ್ತ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಒಟ್ಟು ಪ್ರಕರಣದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು. ಸಮರ್ಪಕವಾಗಿ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿ ಹೊತ್ತಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ಇಲ್ಲವೆ ಎನ್‍ಟಿಎ ಇಂದು ಸ್ವತಃ ಪಶ್ನೆಗಳಿಗೆ ಒಳಗಾಗುವ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಸರಕಾರ ವಿದ್ಯಾರ್ಥಿಗಳಿಂದ ಪರೀಕ್ಷೆಗಳಲ್ಲಿ ಕಠಿಣ ಪರಿಶ್ರಮವನ್ನು ನಿರೀಕ್ಷಿಸುತ್ತದೆ. ಆದರೆ, ಅದೇ ಸರಕಾರ ಕನಿಷ್ಟ ಪ್ರಶ್ನೆ ಪತ್ರಿಕೆಯನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಿಲ್ಲವೆಂದು ಗೇಲಿ ಮಾಡಿ, ಇದು ಪ್ರಶ್ನೆ ಪತ್ರಿಕೆಯ ಸೋರಿಕೆಯಲ್ಲ, ಮಕ್ಕಳ ಭವಿಷ್ಯದ ಮೇಲಿನ ಚೆಲ್ಲಾಟವೆಂದು ತೀಕ್ಷ್ಣವಾಗಿ ನುಡಿದರು. ಕೇಂದ್ರ ಸರಕಾರ ಪರೀಕ್ಷಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸುಧಾರಿಸಬೇಕು. ಪ್ರಶ್ನೆ ಪತ್ರಿಕೆ ತಯಾರಿಕೆ, ಮುದ್ರಣ, ಸಾರಿಗೆ ವ್ಯವಸ್ಥೆ. ಪರೀಕ್ಷಾ ಕೇಂದ್ರಗಳ ಡಿಜಿಟಲ್ ವ್ಯವಸ್ಥೆಗಳು ಮತ್ತು ಪರೀಕ್ಷಾ ನಿಯಮಗಳನ್ನು ತಪಾಸಣೆ ಮಾಡಬೇಕು. ಮುಂದಿನ ದಿನಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಘಟನೆಗಳು ನಡೆಯಬಾರದೆಂದು ಆಗ್ರಹಿಸಿದರು. ಇದೇ ಸಂದರ್ಭ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು, ಮತದಾರರ ವಿಶೇಷ ಪರಿಷ್ಕರಣೆಯಲ್ಲಿ ಪ್ರತಿಯೊಬ್ಬ ಪ್ರಜೆಯೂ ಸ್ವ-ಇಚ್ಛೆಯಿಂದ ತೊಡಗಿಸಿಕೊಳ್ಳಬೇಕು. ಯಾವುದೇ ಕಾರಣಕ್ಕು ಪರಿಷ್ಕರಣೆ ಪ್ರಕಿಯೆ ತಪ್ಪಿಸಿಕೊಂಡು ಮತದಾನದ ಹಕ್ಕಿನಿಂದ ವಂಚಿತರಾಗದಿರಿ ಎಂದು ಕರೆ ನೀಡಿದರು. ಸುದ್ದಿಗೊಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ಹೆಚ್.ಎಂ.ನಂದಕುಮಾರ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಸುಜು ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎ.ಹಂಸ ಉಪಸ್ಥಿತರಿದ್ದರು.









