
ಮಡಿಕೇರಿ ಜೂ.26 NEWS DESK : ನೆಲಜಿಯ “ಮಲ್ಮ ಕುಂದ್”(ಬೆಟ್ಟ) ವ್ಯಾಪ್ತಿಯಲ್ಲಿ ತಾವು ಖರೀದಿಸಿರುವ ಜಾಗದಲ್ಲಿನ ಎಲ್ಲಾ ನಿರ್ಮಾಣ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಜಾಗವನ್ನು ಸ್ಥಳೀಯರಿಗೆ ಮಾರಾಟ ಮಾಡಲು ಸಿದ್ಧನಿದ್ದು, ಖರೀದಿಗೆ ಯಾರೂ ಮುಂದೆ ಬಾರದಿದ್ದಲ್ಲಿ ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸುವುದಾಗಿ ಪ್ರಸಿದ್ಧ ಆಧ್ಯಾತ್ಮ ಗುರು ಶ್ರೀ ಎಂ ಅವರು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಾವು ರೂಪಿಸಿದ್ದ ಯೋಜನೆಯ ಕುರಿತು ಆರೋಪಗಳು ಕೇಳಿ ಬಂದ ಹಿನ್ನೆಲೆ ಮತ್ತು ಸ್ಥಳೀಯರ ಭಾವನೆಗೆ ದಕ್ಕೆಯಾಗುತ್ತಿರುವುದರಿಂದ ಎಲ್ಲಾ ಕಾಮಗಾರಿಗಳನ್ನು ಸ್ಥಗಿತಗೊಳಿಸಿದ್ದೇವೆ. ಭವಿಷ್ಯದ ದಿನಗಳಲ್ಲಿ ಕೊಡಗಿನಲ್ಲಿ ಯಾವುದೇ ಕೇಂದ್ರಗಳ ಸ್ಥಾಪನೆಗೆ ಮುಂದಾಗುವುದಿಲ್ಲ ಎಂದು ತಿಳಿಸಿದರು.
ನೆಲಜಿಯ ಮಲ್ಮ ಬೆಟ್ಟದಿಂದ ಸುಮಾರು 2.50 ಕಿ.ಮೀ. ಕೆಳ ಭಾಗದಲ್ಲಿನ 58.90 ಎಕರೆ ಜಾಗವನ್ನು ತಾನು ಪ್ರಸಕ್ತ ಸಾಲಿನ 2026ರ ಏಪ್ರಿಲ್4 ರಂದು 6.25 ಕೋಟಿ ರೂ.ಗಳನ್ನು ನೀಡಿ ಖರೀದಿಸಿದ್ದೆ. ಈ ಜಾಗದ ಸುಮಾರು 10 ಎಕರೆ ಪ್ರದೇಶವನ್ನು ಕಾನೂನಿನಂತೆ ಭೂ ಪರಿವರ್ತನೆ ಮಾಡಿಕೊಳ್ಳುವ ಕಾರ್ಯ ನಡೆಯುತ್ತಿದೆ. ತಾನು ಉದ್ದೇಶಿತ ಜಾಗದಲ್ಲಿ ಧ್ಯಾನ ಕೇಂದ್ರ, ಸಂಸ್ಕøತ ತರಗತಿಗಳನ್ನು ತೆರೆಯುವ ಉದ್ದೇಶವನ್ನು ಹೊಂದಿದ್ದೆ. ಇದಕ್ಕೆ ಪೂರಕವಾಗಿ ಜಾಗಕ್ಕೆ ತೆರಳಲು ಇದ್ದ ಸಣ್ಣ ರಸ್ತೆಯನ್ನು ವಿಸ್ತರಿಸುವ ಕೆಲಸ, ಅಂತರ್ಜಲ ವೃದ್ಧಿಗೆ ಪೂರಕವಾಗಿ ಕೆರೆಗಳ ನಿರ್ಮಾಣ ಮಾಡಲಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿನ ಬೆಳವಣಿಗೆಗಳ ಹಿನ್ನೆಲೆ ತಾವು, ಜಾಗದಲ್ಲಿ ನಡೆಸಲು ಉದ್ದೇಶಿಸಿದ್ದ ಎಲ್ಲಾ ಕಾರ್ಯಚಟುವಟಿಕೆಗಳಿಂದ ಮತ್ತು ಭೂ ಪರಿವರ್ತನೆಯ ಕಾರ್ಯಗಳಿಂದ ಸಂಪೂರ್ಣವಾಗಿ ಹಿಂದೆ ಸರಿದಿರುವುದಾಗಿ ಶ್ರೀ ಎಂ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಶ್ರೀಎಂ ಅವರ ಅನುಯಾಯಿಗಳಾದ ಬಿದ್ದಂಡ ಕುಶಾಲಪ್ಪ ಹಾಗೂ ಬಿದ್ದಂಡ ಬೋಪಣ್ಣ ಉಪಸ್ಥಿತರಿದ್ದರು.









