
ಮಡಿಕೇರಿ ಜೂ.26 NEWS DESK : ಇತ್ತೀಚೆಗೆ ನಡೆದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆ ಹೊರತು ನಿಸರ್ಗಧಾಮ ಟೂರಿಸ್ಟ್ ಸೆಂಟರ್ (ಎನ್‍ಟಿಸಿ) ನ್ನು ಗುರಿ ಮಾಡಬಾರದು ಎಂದು ಇಲ್ಲಿನ ವರ್ತಕರು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಥಳೀಯ ವರ್ತಕ ಮುರಳಿ ಅಂಚೆಮನೆ ಅವರು ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನಲ್ಲಿ 70 ಮಳಿಗೆಗಳಿದ್ದು, ಸುಮಾರು 300 ರಿಂದ 400 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಕೇವಲ ಮುಸಲ್ಮಾನರ ವ್ಯಾಪಾರ ಕೇಂದ್ರವಲ್ಲ, ಇಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತರು, ಸೇಟುಗಳು ಸೇರಿದಂತೆ ಎಲ್ಲಾ ವರ್ಗದವರು ಒಗ್ಗಟ್ಟಿನಿಂದ ವ್ಯಾಪಾರ ಮಾಡುತ್ತಿದ್ದಾರೆ. ಕೇರಳದ ಒಂದು ಮುಸ್ಲಿಂ ಕುಟುಂಬ ಮಾತ್ರ ಇಲ್ಲಿ ಇದ್ದು, ಉಳಿದ ಮುಸಲ್ಮಾನರು ಸ್ಥಳೀಯರೇ ಆಗಿದ್ದಾರೆ. ಎಲ್ಲಾ ಧರ್ಮದವರ ಹಬ್ಬಗಳನ್ನು ಸಡಗರದಿಂದ ಆಚರಿಸುತ್ತೇವೆ. ಆದರೆ ಇತ್ತೀಚೆಗೆ ಮತಾಂತರ ಪ್ರಕರಣ ನಡೆದ ನಂತರ ಗೊಂದಲದ ವಾತಾವರಣ ಸೃಷ್ಟಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಧರ್ಮದ ಅಧಾರದ ಮೇಲೆ ಇಲ್ಲಿ ಕೆಲಸ ನೀಡುತ್ತಿಲ್ಲ, ಕೆಲಸ ಮಾಡಲು ಇಚ್ಛಿಸುವವರಿಗೆ ಮಾತ್ರ ಉದ್ಯೋಗವಕಾಶವನ್ನು ನೀಡಲಾಗುತ್ತಿದೆ. ಧರ್ಮ ಜಾತಿ ಅಥವಾ ವೈಯಕ್ತಿಕ ನಂಬಿಕೆಗಳ ಆಧಾರದ ಮೇಲೆ ಭೇದ ಭಾವ ಮಾಡುವುದಿಲ್ಲ. ಯಾವುದೇ ಕಾನೂನು ಬಾಹಿರ ಅಥವಾ ಬಲವಂತದ ಧರ್ಮಾಂತರ ಚಟುವಟಿಕೆಗಳನ್ನು ನಾವು ವಿರೋಧಿಸುತ್ತೇವೆ. ಯಾವುದಾದರೂ ಅಪ್ರಾಪ್ತ ವಯಸ್ಸಿನ ಬಾಲಕನ ಮೇಲೆ ಕಾನೂನು ಬಾಹಿರವಾಗಿ ಪ್ರಭಾವ ಬೀರಲಾಗಿದೆ ಅಥವಾ ಧರ್ಮಾಂತರ ಮಾಡಲಾಗಿದೆ ಎಂಬ ಆರೋಪವಿದ್ದಲ್ಲಿ ಅದರ ಕುರಿತು ನ್ಯಾಯ ಸಮ್ಮತ ತನಿಖೆ ನಡೆಸಿ, ತಪ್ಪಿತಸ್ಥನೆಂದು ಸಾಬೀತಾದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಎನ್‍ಟಿಸಿಯಲ್ಲಿ ನಮ್ಮ ವ್ಯವಹಾರಗಳನ್ನು ಕಾನೂನು ಬದ್ಧವಾಗಿ ನಡೆಸುತ್ತಿದ್ದು, ನಮಗೆ ದೊರೆತ ಅವಕಾಶಗಳಿಂದ ಸ್ವಾವಲಂಭಿಯಾಗಿ ನಿಲ್ಲಲು ಸಾಧ್ಯವಾಗಿದೆ. ಧರ್ಮಾಂತರ ಚಟುವಟಿಕೆಗೆ ಸಂಬಂಧಿಸಿದ ಯಾವುದೇ ವೈಯಕ್ತಿಕ ಕೃತ್ಯಗಳಿಗೆ ಎನ್‍ಟಿಸಿ ಸಂಸ್ಥೆ ಜವಾಬ್ದಾರಿಯಲ್ಲ. ಕಾನೂನಿನ ಪ್ರಕಾರ ಹೊಣೆಗಾರಿಕೆ ಇದ್ದಲ್ಲಿ ಅದು ಸಂಬಂಧಿಸಿದ ವ್ಯಕ್ತಿಗೆ ಮಾತ್ರ ಅನ್ವಯಿಸಬೇಕು ಎಂದರು. ನಮ್ಮ ವ್ಯಾಪಾರ, ವ್ಯವಹಾರವನ್ನು ಸ್ಥಗಿತಗೊಳಿಸುವ ಅಥವಾ ನಿರ್ಬಂಧಿಸುವ ಪ್ರಯತ್ನಗಳು ನಡೆದರೆ ಅದರಿಂದ ನಮಗೆ ನಷ್ಟ ಉಂಟಾಗುವುದಲ್ಲದೆ ನಮ್ಮ ಹೂಡಿಕೆಗಳ ಮೇಲೆ ಪರಿಣಾಮ ಬೀರುತ್ತದೆ.
ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ನ್ಯಾಯ ಸಮ್ಮತ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ನಿರಪರಾಧಿ ವ್ಯಾಪಾರಿಗಳು ಹಾಗೂ ಉದ್ಯೋಗಿಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು ಎಂದು ಮುರಳಿ ಅಂಚೆಮನೆ ಮನವಿ ಮಾಡಿದರು. ಮಳಿಗೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಗಳ ಸುರಕ್ಷತೆಯ ದೃಷ್ಟಿಯಿಂದ ಗ್ರೂಪ್ ನ್ನು ರಚಿಸಲಾಗಿದ್ದು, ತಮಗೆ ಆಗುವ ಅನ್ಯಾಯದ ಕುರಿತು ವಿಚಾರ ವಿನಿಮಯ ಮಾಡಿಕೊಂಡಲ್ಲಿ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದರು. ಮತಾಂತರದ ವಿರುದ್ಧ ಜೂ.30 ರಂದು ಕುಶಾಲನಗರದಲ್ಲಿ ನಡೆಯುವ ಜನಾಂದೋಲನಕ್ಕೆ ಬೆಂಬಲವಾಗಿ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನ ಎಲ್ಲಾ ಮಳಿಗೆಗಳನ್ನು ಬಂದ್ ಮಾಡುವುದಾಗಿ ಸ್ಪಷ್ಟಪಡಿಸಿದರು. ಮತ್ತೊಬ್ಬ ವರ್ತಕ ಲೋಕೇಶ್ ಡಿ.ಕೆ ಅವರು ಮಾತನಾಡಿ ಮತಾಂತರ ಪ್ರಕರಣದ ನಂತರ ಎನ್‍ಟಿಸಿಯಲ್ಲಿ ಮಹಿಳೆಯರಿಗೆ ಉದ್ಯೋಗ ನೀಡುವುದು ಬೇಡ ಎನ್ನುವ ಕುರಿತು ಚರ್ಚೆಗಳು ನಡೆಯುತ್ತಿದೆ. ಈ ರೀತಿಯ ಗೊಂದಲಗಳಿಂದ ಸಿಬ್ಬಂದಿಗಳಿಗೆ ತೊಂದರೆಯಾಗುತ್ತದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ವರ್ತಕರುಗಳಾದ ಪಿ.ಎಸ್.ಗಿರೀಶ್, ಗಜಾನನ ಚೌದ್ರಿ ಹಾಗೂ ಸದಾಶಿವ ಹೆಚ್.ಎನ್ ಮಾತನಾಡಿ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ನಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ವ್ಯಾಪಾರ ನಡೆಸುತ್ತಿದ್ದು, ಯಾವುದೇ ಭೇದ ಭಾವ ನಮ್ಮಲ್ಲಿ ಇಲ್ಲ ಎಂದು ತಿಳಿಸಿದರು.









