
ಮಡಿಕೇರಿ NEWS DESK ಜು.1 : ಕೊಡವರ ಭವಿಷ್ಯಕ್ಕೆ ಮಾರಕವಾಗಿರುವ ಹೊರಗಿನ ಉದ್ಯಮ ಸಂಸ್ಥೆಗಳು ಕೊಡಗಿನಲ್ಲಿ ನಿರ್ಮಿಸಿರುವ ಟೌನ್‌ಶಿಪ್ ಮತ್ತು ರೆಸಾರ್ಟ್ ಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜು.10 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಶಾಂತಿಯು ಸತ್ಯಾಗ್ರಹ ನಡೆಯಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ತಿಳಿಸಿದ್ದಾರೆ. ನೆಲಜಿ ಗ್ರಾಮದ “ಮಲ್ಮ ಬೆಟ್ಟ” ವ್ಯಾಪ್ತಿಯಲ್ಲಿ ನಡೆದಿರುವ ಕಾಮಗಾರಿಯನ್ನು ಪತ್ರಿಕಾ ಪ್ರಕಟಣೆ ಮೂಲಕ ತೀವ್ರವಾಗಿ ವಿರೋಧಿಸಿರುವ ಅವರು ಮದ್ರಾಸ್ ಹೈಕೋರ್ಟ್ ಆದೇಶಗಳನ್ನು ಪಾಲಿಸಿ, 2024-25ರಲ್ಲಿ ನೀಲಗಿರಿ ಜಿಲ್ಲೆಯ ಮಸಿನಗುಡಿಯಲ್ಲಿ ನೂರಾರು ರೆಸಾರ್ಟ್ಗಳನ್ನು ಒಂದೇ ಹಂತದಲ್ಲಿ ತೆರವುಗೊಳಿಸಿದ ಮಾದರಿಯಲ್ಲಿಯೇ, ಕರ್ನಾಟಕ ಸರಕಾರದಿಂದಲೂ ಕಠಿಣ ಕ್ರಮ ಜಾರಿಯಾಗಬೇಕೆಂದು ಒತ್ತಾಯಿಸಿದ್ದಾರೆ. ಸರಕಾರ ಮತ್ತು ಹೊರಗಿನ ಹಣದ ಚೀಲದ ಉದ್ಯಮಿಗಳು ಕೊಡವರ ಭಾವನೆಗಳೊಂದಿಗೆ ಚೆಲ್ಲಾಟವಾಡಬಾರದು. “ಮಲ್ಮ ಬೆಟ್ಟ” ಸಮಸ್ಯೆಗೆ ಸಂಬoಧಿಸಿದoತೆ ನೆಲಜಿನಾಡಿನಲ್ಲಿ ಸಾಂಸ್ಕೃತಿಕ-ಸಾಮಾಜಿಕ ಅಶಾಂತಿಗೆ ದಾರಿ ಮಾಡಿಕೊಡುವ ಲಕ್ಷಣಗಳು ಕಂಡುಬರುತ್ತಿದೆ. ಕೊಡವರು ಪರ್ವತ ದೇವರ ವಾಸಸ್ಥಾನವಾದ “ಮಲ್ಮ ಬೆಟ್ಟ”ದ ಮೇಲೆ ಅತ್ಯುನ್ನತ ಭಕ್ತಿಯನ್ನು ಇಟ್ಟಿದ್ದಾರೆ.
ಇಲ್ಲಿನ ಜಾಗ ಖರೀದಿದಾರರು ಪರಿಚಿತ ಹೊರಗಿನ “ಆಧ್ಯಾತ್ಮಿಕ ಉದ್ಯಮಿ” ಯಾಗಿದ್ದಾರೆ. ಸರಕಾರ ಇದಕ್ಕೆ ತಡೆ ಒಡ್ಡಬೇಕು ಮತ್ತು ಸದರಿ ಆಸ್ತಿಯನ್ನು ಸ್ಥಳೀಯ ಕೊಡವÀರಿಗೆ ರಿಯಾಯಿತಿ ದರದಲ್ಲಿ ಸುಲಭವಾಗಿ ವರ್ಗಾಯಿಸಲು ಅನುಕೂಲ ಮಾಡಿಕೊಡಬೇಕು ಹಾಗೂ ಅದನ್ನು ಶಾಶ್ವತವಾಗಿ “ಒಂದು ಪವಿತ್ರ ಸ್ಥಳ” ವಾಗಿ ಉಳಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಸರಕಾರ ಮತ್ತು ಹೊರಗಿನ ಉದ್ಯಮಿಗಳು ಇಡೀ ಕೊಡವ ಭೂಪ್ರದೇಶವು ಅತ್ಯಂತ ಪವಿತ್ರವಾದ ಭೂಮಿ ಎನ್ನುವುದನ್ನು ತಿಳಿದುಕೊಳ್ಳಬೇಕು. ಪ್ರತಿ ಗ್ರಾಮದಲ್ಲೂ ದೈವಿಕ ಮಂದ್‌ಗಳು ಮತ್ತು ದೇವಕಾಡುಗಳು ಪವಿತ್ರ ಸ್ಥಾನವನ್ನು ಹೊಂದಿವೆ. ಇತ್ತೀಚಿನ ದಿನಗಳಲ್ಲಿ ಹೊರಗಿನ ಹೂಡಿಕೆದಾರರಿಂದ ಬೃಹತ್ ಟೌನ್‌ಶಿಪ್‌ಗಳು ಮತ್ತು ದೈತ್ಯ ರೆಸಾರ್ಟ್ ಗಳ ನಿರ್ಮಾಣದ ಮೂಲಕ ಕೊಡವ ಭೂಮಿಯನ್ನು ಸಂಪೂರ್ಣವಾಗಿ ಅಪವಿತ್ರಗೊಳಿಸಲಾಗಿದೆ ಮತ್ತು ಅಪವಿತ್ರಗೊಳಿಸಲಾಗುತ್ತಿದೆ. ಕೊಡವ ಪ್ರದೇಶದ ಪ್ರತಿ ಗ್ರಾಮದಲ್ಲೂ ಬಹುರಾಷ್ಟಿçÃಯ ಕಂಪನಿಗಳು, ಅನಿವಾಸಿ ಭಾರತೀಯರು, ತಿರುಪತಿ ದೇವಸ್ಥಾನ ಸಮಿತಿಯ ಸಾಫ್ಟ್ ಮನಿಯ ಫಲಾನುಭವಿಗಳು ನಿರ್ಮಿಸಿದ ಅಸಂಖ್ಯಾತ ರೆಸಾರ್ಟ್ಗಳಿವೆ. ಅಲ್ಲದೆ ಅನೇಕ ರೆಸಾರ್ಟ್ಗಳು ಮತ್ತು ಟೌನ್‌ಶಿಪ್‌ಗಳು ನಿರ್ಮಾಣ ಹಂತದಲ್ಲಿವೆ. ಸುಲಭವಾಗಿ ಹಣ ಗಳಿಸುವ ಉದ್ದೇಶಕ್ಕಾಗಿ, ಕರ್ನಾಟಕ ಭೂ ಕಂದಾಯ ಕಾಯ್ದೆ ಮತ್ತು ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ಸರಕಾರ ತಿದ್ದುಪಡಿಗಳನ್ನು ತಂದಿದೆ. ಇದರ ದುರ್ಲಾಭ ಪಡೆದು ಯಾರು ಬೇಕಾದರೂ ಕೊಡಗಿನಲ್ಲಿ ಭೂಮಿಯನ್ನು ಖರೀದಿಸಬಹುದಾಗಿದೆ. ಸರಕಾರಕ್ಕೆ ಯಾವಾಗ ಹಣದ ಅಗತ್ಯವಿರುತ್ತದೆಯೋ ಅಥವಾ ಅದರ ಬೊಕ್ಕಸದಲ್ಲಿ ಕೊರತೆಯುಂಟಾಗುತ್ತದೆಯೋ, ಆಗ ಅದು ಹೊರಗಿನ ಖರೀದಿದಾರರ ಅನುಕೂಲಕ್ಕಾಗಿ ಭೂಪರಿವರ್ತನೆಗೆ ಅನುಕೂಲ ಮಾಡಿಕೊಡಲು ಮುಂದಾಗುತ್ತದೆ. ಇದು ಭ್ರಷ್ಟಾಚಾರಕ್ಕೂ ದಾರಿ ಮಾಡಿಕೊಡುತ್ತದೆ ಎಂದು ಎನ್.ಯು.ನಾಚಪ್ಪ ಆರೋಪಿಸಿದ್ದಾರೆ. ಸಿದ್ದಾಪುರದಲ್ಲಿ 2400 ಎಕರೆ ವಿಸ್ತೀರ್ಣದ ಕಾವೇರಿ ಜಲಾನಯನ ಜೀವಗೋಳ ಪ್ರದೇಶವು ಸಸ್ಯಸಂಪತ್ತು ಮತ್ತು ಪ್ರಾಣಿಸಂಕುಲದ ವಿನಾಶಕ್ಕೆ ಕಾರಣವಾಗುವ ಭೀತಿ ಹುಟ್ಟಿಸಿದೆ. ಬೃಹತ್ ಟೌನ್‌ಶಿಪ್ ಹಾಗೂ ವಸತಿ ಲೇಔಟ್ ಬರುತ್ತಿರುವುದರಿಂದ ದೊಡ್ಡ ಪ್ರಮಾಣದ ಜನಸಂಖ್ಯಾ ಪಲ್ಲಟ ಸಂಭವಿಸಲಿದೆ. ಇಷ್ಟು ದೊಡ್ಡ ಪ್ರಮಾಣದ ಹೊರಗಿನ ಜನಸಂಖ್ಯೆಯ ಅಗತ್ಯವನ್ನು ಪೂರೈಸುವಾಗ ಈ ಪ್ರದೇಶವು ನೀರಿನ ಕೊರತೆಯನ್ನು ಎದುರಿಸಬೇಕಾಗುತ್ತದೆ ಎಂದು ಗಮನ ಸೆಳೆದಿದ್ದಾರೆ. 1956 ರಲ್ಲಿ ಕೊಡವರ ತಾಯ್ನಾಡಾದ ಕೊಡಗು ರಾಜ್ಯವನ್ನು ವಿಲೀನಗೊಳಿಸಿದಾಗಿನಿಂದ, ಆದಿಮಸಂಜಾತ ಏಕ-ಜನಾಂಗೀಯ ಪ್ರಕೃತಿ ಆರಾಧಕ ಅನಿಮಿಸ್ಟಿಕ್ ಕೊಡವರು ಅನೇಕ ಆಯಾಮಗಳಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ. ಆದಿಮಸಂಜಾತ ಕೊಡವರ ಭೂಮಿ, ಆಧ್ಯಾತ್ಮಿಕ ಒಡನಾಟ, ಸಸ್ಯ ಸಂಪತ್ತು, ಪ್ರಾಣಿಸಂಕುಲ ಮತ್ತು ನೀರಿನ ಸಂಪನ್ಮೂಲ ಕರ್ನಾಟಕ ಸರಕಾರದ ಕೈಯಲ್ಲಿ ಸುರಕ್ಷಿತವಾಗಿಲ್ಲ. ಕರ್ನಾಟಕ ಸರಕಾರವು ಕೊಡವ ಭೂಪ್ರದೇಶವನ್ನು ತನ್ನ ಆಕ್ರಮಿತ ಆಂತರಿಕ ಸಂಪನ್ಮೂಲಗಳನ್ನು ಉತ್ಪಾದಿಸುವ ವಸಾಹತುಶಾಹಿಯಂತೆ ಮತ್ತು ಕೊಡವರನ್ನು ಸಮಾನ ನಾಗರಿಕರನ್ನಾಗಿ ನೋಡದೆ ತನ್ನ ಅಧೀನ ಪ್ರಜೆಗಳಂತೆ ನಡೆಸಿಕೊಳ್ಳುತ್ತಿದೆ. ಅಧಿಕಾರಿಗಳ ವರ್ತನೆಯೂ ಕೊಡವರ ಭಾವನೆಗಳಿಗೆ ವಿರುದ್ಧವಾಗಿದೆ ಎಂದು ಟೀಕಿಸಿದ್ದಾರೆ. ಒಟ್ಟಾರೆಯಾಗಿ ಕೊಡವರ, ವಿಶೇಷವಾಗಿ ನೆಲಜಿನಾಡಿನ ಕೊಡವರ ಅಶಾಂತಿಯನ್ನು ಶಮನಗೊಳಿಸಲು, ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವವÀರು ನ್ಯಾಯ ಮತ್ತು ಸಮಾನತೆಯ ಹಿತದೃಷ್ಟಿಯಿಂದ “ಮಲ್ಮ ಕುಂದ್” ನ ಆಧ್ಯಾತ್ಮಿಕ ಪವಿತ್ರತೆಯನ್ನು ರಕ್ಷಿಸಬೇಕು. ಗುರು-ಕಾರೋಣರು ಕೊಡವ ಭೂಪ್ರದೇಶವನ್ನು ಒಂದು ಆಧ್ಯಾತ್ಮಿಕ ಪ್ರಾಕೃತಿಕ ಭೂದೃಶ್ಯವಾಗಿ ನಮಗೆ ಬಿಟ್ಟು ಹೋಗಿದ್ದಾರೆ. ಕೊಡವ ಭೂಪ್ರದೇಶವೇ ಒಂದು ಆಧ್ಯಾತ್ಮಿಕ ತಾಣವಾಗಿದೆ. ಕೊಡವನಾಡಿನಲ್ಲಿ ಹೊರಗಿನ ಆಧ್ಯಾತ್ಮಿಕ ವ್ಯಾಪಾರಿಗಳ ಅಗತ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಸಂವಿಧಾನದ 51 ಎ(ಎಫ್) ವಿಧಿಯು ವೈವಿಧ್ಯಮಯ ಸಂಸ್ಕೃತಿ, ಆಧ್ಯಾತ್ಮಿಕತೆ ಮತ್ತು ಪರಿಸರ ವ್ಯವಸ್ಥೆಯ ಸಂರಕ್ಷಣೆಯನ್ನು ಖಾತರಿಪಡಿಸುತ್ತದೆ. ಆದರೆ ಇಲ್ಲಿಯವರೆಗೆ ಕರ್ನಾಟಕ ಸರಕಾರ ಕೊಡವರು ಹಾಗೂ ಕೊಡವನಾಡಿಗೆ ಸಂಬAಧಿಸಿದAತೆ ಈ ಸಾಂವಿಧಾನಿಕ ಜವಾಬ್ದಾರಿಗಳನ್ನು ಮತ್ತು ಭರವಸೆಗಳನ್ನು ಉಲ್ಲಂಘಿಸಿದೆ. ಆದ್ದರಿಂದ ಕೊಡವ ಲ್ಯಾಂಡ್ ಭೂರಾಜಕೀಯ ಸ್ವಾಯತ್ತತೆ, ಸ್ವಯಂ ಆಡಳಿತ ಮತ್ತು ಆಂತರಿಕ ರಾಜಕೀಯ ಸ್ವಯಂ ನಿರ್ಧಾರದ ಹಕ್ಕುಗಳಿಗಾಗಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಳೆದ 36 ವರ್ಷಗಳಿಂದ ನಿರಂತರವಾಗಿ ಶಾಂತಿಯುತ ಹೋರಾಟವನ್ನು ನಡೆಸಿಕೊಂಡು ಬಂದಿದೆ. ಇದೇ ಜು.10 ರಂದು ನಡೆಯುವ ಸತ್ಯಾಗ್ರಹದಲ್ಲಿ ಸರ್ವ ಕೊಡವರು ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ.








