
ಮಡಿಕೇರಿ ಜು.1 NEWS DESK : ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯ ಅಧಿಕಾರಿಯಾಗಿ ಜಿಲ್ಲೆಯಲ್ಲಿ ಸುಮಾರು 33 ವರ್ಷಗಳ ಕಾಲ ಸುದೀರ್ಘ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಎಸ್.ಹೊನ್ನೇಗೌಡ ಅವರಿಗೆ ವಿವಿಧ ಇಲಾಖೆ ವತಿಯಿಂದ ಆತ್ಮೀಯವಾಗಿ ಬೀಳ್ಕೊಡುಗೆ ನೀಡಲಾಯಿತು. ನಗರದ ಮೈತ್ರಿ ಹಾಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊನ್ನೇಗೌಡ ಅವರಿಗೆ ಶಾಲೂ ಹೊದಿಸಿ, ಫಲ ತಾಂಬೂಲ ಹಾಗೂ ವಿಶೇಷ ಉಡುಗೊರೆ ನೀಡಿ ಸನ್ಮಾನಿಸಿ, ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಅಧಿಕಾರಿ ಎಸ್.ಹೊನ್ನೇಗೌಡ ಅವರು, ಜಿಲ್ಲೆಯಲ್ಲಿ ಉತ್ತಮ ಅನುಭವ ಆಗಿದೆ. ಜೊತೆಗೆ ಆತ್ಮತೃಪ್ತಿಯೂ ಇದೆ ಎಂದು ತಿಳಿಸಿದರು. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಆತ್ಮ ತೃಪ್ತಿಯಿಂದ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು. ಆದರೆ ಒತ್ತಡ ಮಾಡಿಕೊಂಡು ಕಾರ್ಯ ನಿರ್ವಹಿಸಬಾರದು ಎಂದು ಅವರು ಸಲಹೆ ಮಾಡಿದರು. ತನ್ನ ಸೇವಾ ಅವಧಿಯಲ್ಲಿ ಸಹಕರಿಸಿದವರಿಗೆ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸಿಇಒ ಆನಂದ್ ಪ್ರಕಾಶ್ ಮೀನಾ ಅವರು, ಹೊನ್ನೇಗೌಡ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದು, ತಮ್ಮ ಸೇವಾ ಅವಧಿಯಲ್ಲಿ ವಾಲ್ಮೀಕಿ ವಸತಿ ಶಾಲೆ, ಹಾಡಿಗಳಿಗೆ ಭೇಟಿ ನೀಡಿ ಶಾಲೆಯ ಅಭಿವೃದ್ಧಿಗೆ ಸಹಕಾರ ನೀಡಿದ್ದಾರೆ. ಅದರ ಮನ್ನಣೆ ಹೊನ್ನೇಗೌಡರಿಗೆ ಸಲ್ಲುತ್ತದೆ. ಅವರ ನಿವೃತ್ತಿ ಜೀವನ ಶುಭವಾಗಲಿ ಎಂದು ಹಾರೈಸಿದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶೇಖರ್ ಅವರು ಮಾತನಾಡಿ, ಹೊನ್ನೇಗೌಡರು ವ್ಯಕ್ತಿಯಲ್ಲ, ಅವರು ಒಂದು ಶಕ್ತಿಯಾಗಿದ್ದಾರೆ. ತಮ್ಮ 33 ವರ್ಷಗಳ ಕಾಲ ಸಾರ್ಥಕವಾದ ಸೇವೆ ಸಲ್ಲಿಸಿದ್ದಾರೆ. ಅವರ ಸೇವಾ ಅವಧಿಯು ಸುವರ್ಣಯುಗ ಎಂದು ಬಣ್ಣಿಸಿದರು. ಸುಮಾರು ಐವತ್ತು ವರ್ಷಗಳಿಂದ ಆಗದೇ ಇರುವ ಕೆಲಸವನ್ನು ಕೇವಲ ನಾಲ್ಕು ವರ್ಷಗಳಲ್ಲಿ ಮಾಡಿತೋರಿಸಿದ್ದು, ಅದು ಸಾರ್ಥಕ ಬದುಕಿಗೆ ಉದಾಹರಣೆಯಾಗಿದೆ ಎಂದರು. ಇತಿಹಾಸದ ಪುಟದಲ್ಲಿ ಸಾಕಷ್ಟು ಮಂದಿ ಹೋಗುತ್ತಾರೆ. ಆದರೆ ಯಾರು ಜನಪರವಾದ ಕೆಲಸ ಮಾಡುತ್ತಾರೋ ಅವರು ಮಾತ್ರ ಅಚ್ಚಳಿಯದೇ ಎಲ್ಲರ ಮನಸ್ಸಿನಲ್ಲಿ ಉಳಿದುಕೊಳ್ಳುತ್ತಾರೆ. ತಂದೆ-ತಾಯಿಗೆ ಜವಾಬ್ದಾರಿಯುತ ಮಗನಾಗಿ, ಸಮಾಜಕ್ಕೆ ಜನೋಪಯೋಗಿಯಾಗಿ, ಯಾವ ರೀತಿ ಬದುಕನ್ನು ನಡೆಸಬೇಕು, ಮತ್ತೊಬ್ಬರಿಗೆ ಮಾದರಿಯಾಗಬೇಕು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದರು. ಸರ್ಕಾರಿ ಇಲಾಖೆಯಲ್ಲಿ ನಿವೃತ್ತಿ ಅನಿವಾರ್ಯ, ಬದುಕು ಎಷ್ಟು ಸುದೀರ್ಘವಾಗಿರುತ್ತದೆ ಎನ್ನುವುದಕ್ಕು ಮುನ್ನ ಎಷ್ಟು ಸಾರ್ಥಕವಾಗಿರುತ್ತದೆ. ಈ ಅವಧಿಯಲ್ಲಿ ಎಷ್ಟು ಕೆಲಸ ಮಾಡಿ ಜನರಿಗೆ ಉಪಯೋಗ ಆಗುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ. ಆ ನಿಟ್ಟಿನಲ್ಲಿ ಹೊನ್ನೇಗೌಡರು ತಮ್ಮ ಇಲಾಖೆಯಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡು ಎಲ್ಲಾ ವರ್ಗದ ಜನರಿಗೆ, ವಿದ್ಯಾರ್ಥಿಗಳ ಬದುಕು ಹಸನಾಗಿಸಿಕೊಳ್ಳಲು ಬೇಕಾದ ಕಾರ್ಯಕ್ರಮಗಳನ್ನು ಮಾಡಿದ್ದಾರೆ ಎಂದು ಶ್ಲಾಘೀಸಿದರು. ಕೇಂದ್ರ ಸರ್ಕಾರ ಹೊನ್ನೇಗೌಡರ ಸೇವೆಯನ್ನು ಗುರುತಿಸಿ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ನೀಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿದರು. ಮದ್ದೂರು ಹೆಚ್.ಕೆ.ವಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಅಪೂರ್ವಚಂದ್ರ ಅವರು ಮಾತನಾಡಿ, ಒಬ್ಬ ಮಗ ತಂದೆ-ತಾಯಿಗೆ ನೀಡುವ ಕೃತಜ್ಞತೆ ಇದಾಗಿದೆ. ಮೂಲತಃ ಮಂಡ್ಯ ಜಿಲ್ಲೆಯವರಾದ ಹೊನ್ನೇಗೌಡರು ಸಮಾಜ ಶಾಸ್ತ್ರದಲ್ಲಿ ಶಿಕ್ಷಣ ಪಡೆದಿದ್ದು, ಅದನ್ನು ಅಕ್ಷರಶಃ ಜಾರಿಗೆ ತಂದಿದ್ದಾರೆ. ಸಮಾಜದ ಮಧ್ಯೆ ಒಬ್ಬ ವ್ಯಕ್ತಿ ಹೇಗೆ ಬದುಕಬೇಕು ಎಂದು ತೋರಿಸಿಕೊಟ್ಟಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಕಚೇರಿಯನ್ನು ನಿರ್ಮಾಣ ಮಾಡುವುದಲ್ಲದೇ, ಬಾಕಿ ಉಳಿದ ಕೆಲಸವನ್ನು ಪೂರ್ಣಗೊಳಿಸಿರುವ ಕೀರ್ತಿ ಹೊನ್ನೇಗೌಡರಿಗಿದೆ ಎಂದರು. ಇವರು, ಶಿಕ್ಷಣ ಮತ್ತು ಪುಸ್ತಕ ಪ್ರೇಮಿ, ಯಾರು ಪುಸ್ತಕವನ್ನು ಹೆಚ್ಚು ಹೆಚ್ಚು ಓದುತ್ತಾರೋ ಅವರು ಅತ್ಯಂತ ಶಾಂತಿಯುತ ಜೀವನ ನಡೆಸುತ್ತಾರೆ. ಅವರ ಕೆಲಸ ಕಾವೇರಿ ಮಾತೆಗೆ ಅರ್ಪಿಸಿದ ಕೃತಜ್ಞತಾಭಾವದ ಸಂಕೇತ. ಅವರ ನಿವೃತ್ತಿ ಜೀವನ ಶುಭವಾಗಿರಲೆಂದು ಹಾರೈಸಿದರು.
ನಿವೃತ್ತ ಉಪನ್ಯಾಸಕರಾದ ಮಹೇಶ್ ಕುಮಾರ್ ಅವರು ಮಾತನಾಡಿ, ಹೊನ್ನೇಗೌಡರು ಸಾಧನೆಗೆ ಸಾಕ್ಷಿಯಾಗಿದ್ದಾರೆ. ವಿದ್ಯೆಯ ಜೊತೆಗೆ ವಿನಯವು ಮುಖ್ಯ. ಯಾರು ವಿನಯವಂತರಾಗಿರುತ್ತಾರೋ ಅವರು ಸಾಧಕರಾಗುತ್ತಾರೆ ಎಂದು ಅವರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು. ಕೋತೂರು ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ಮುಖ್ಯ ಶಿಕ್ಷಕರಾದ ಪ್ರಶಾಂತ್ ಅವರು ಮಾತನಾಡಿ, ನಿವೃತ್ತಿ ಎಂಬುದು ಒಂದು ನಿಯಮ. ಹೊನ್ನೇಗೌಡರು ಬಂದ ದಿನದಿಂದ ಇಲಾಖೆಗೆ ಆನೆಯ ಬಲ ಬಂದಂತಿತ್ತು. ಇಲಾಖೆಯ ಪ್ರತಿಯೊಬ್ಬರನ್ನು ಕುಟುಂಬದ ಸದಸ್ಯರಂತೆ ನೋಡಿಕೊಂಡಿದ್ದಾರೆ. ಅವರು ಇಲಾಖೆಗೆ ನೀಡಿದ ಕೊಡುಗೆ ಅಪಾರವಾದದ್ದು, ಸರ್ಕಾರಿ ಸೇವೆಯಲ್ಲಿ ಹೇಗೆ ಧೈರ್ಯವಾಗಿ ಇರಬೇಕು ಎಂದು ತೋರಿಸಿಕೊಟ್ಟಿದ್ದಾರೆ. ಅವರ ಸೇವೆ, ಸಲಹೆ ನಿವೃತ್ತಿಯ ನಂತರವು ದೊರಕಲಿ ಎಂದು ಶುಭಹಾರೈಸಿದರು. ಸೋಮನಹಳ್ಳಿ ಎಸ್‍ಸಿಎಂಎಂ ಪ್ರೌಢಶಾಲೆ ನಿವೃತ್ತ ಮುಖ್ಯಶಿಕ್ಷಕರಾದ ವಿಜಯ್ ಶೇಖರ್, ಜಸ್ಮಿತಾ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ನ್ಯೂಕ್ಲಿಯರ್ ಮೆಡಿಸಿನ್ ರೇಡಿಯಾಲಜಿಸ್ಟ್ ಡಾ.ಸಿದ್ಧಲಿಂಗದೇವರು, ಹುಣಸೂರು ತಾಲ್ಲೂಕು ಪರಿಶಿಷ್ಟ ಕಲ್ಯಾಣಾಧಿಕಾರಿ ಗಂಗಾಧರ್, ಎಸ್.ಹೊನ್ನೇಗೌಡ ಅವರ ತಂದೆ ಶ್ರೀನಿವಾಸಯ್ಯ, ತಾಯಿ ಪುಟ್ಟಚನ್ನಮ್ಮ, ಪತ್ನಿ ಶಶಿಕಲಾ ಹೊನ್ನೇಗೌಡ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು. ಮಹಾತ್ಮಗಾಂಧಿ ನರೇಗ ಯೋಜನೆಯ ಟಿಇಸಿ ಸಂಯೋಜಕ ಪವನ್‍ಕುಮಾರ್ ನಿರೂಪಿಸಿದರು, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಾಲಕೃಷ್ಣ ರೈ ಸ್ವಾಗತಿಸಿದರು. ಕವಿತ ಮತ್ತು ತಂಡ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿವೃತ್ತ ಅಧಿಕಾರಿ ಹೊನ್ನೇಗೌಡರ ಪತ್ನಿ ಶಶಿಕಲಾ ಹೊನ್ನೇಗೌಡರು ರಚಿಸಿ “ಜ್ಞಾನಧಾರೆಗಳು” ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.









