
ಮಡಿಕೇರಿ ಜು.3 NEWS DESK : ಕೊಡಗು ಜಿಲ್ಲೆಯಿಂದ ಲೋಕಾಯುಕ್ತಕ್ಕೆ 207 ಪ್ರಕರಣಗಳು ಬಾಕಿ ಇದ್ದು, 80 ಪ್ರಕರಣಗಳನ್ನು ವೈಯಕ್ತಿಕ ನೆಲೆಯಲ್ಲಿ ಆಯ್ಕೆ ಮಾಡಿಕೊಂಡು ಸಂಬಂಧಿಸಿದ ಅಧಿಕಾರಿಗಳು ಹಾಗೂ ದೂರುದಾರರ ವಿಚಾರಿಸಿ ಇತ್ಯರ್ಥಕ್ಕೆ ಮುಂದಾಗಲಾಗುವುದು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅವರು ಹೇಳಿದ್ದಾರೆ. ನಗರದ ಜಿ.ಪಂ.ಸಭಾಂಗಣದಲ್ಲಿ ದೂರುಗಳ ವಿಚಾರಣೆ ಹಾಗು ಪ್ರಕರಣಗಳ ವಿಲೇವಾರಿ ಸಂಬಂಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು, ದೂರುದಾರರು ಮತ್ತು ಎದುರುದಾರರ ಸಮ್ಮುಖದಲ್ಲಿ ನಡೆದ ವಿಚಾರಣಾ ಸಭೆಗೂ ಮೊದಲು ಅವರು ಮಾತನಾಡಿದರು. ಕಾನೂನಾತ್ಮಕವಾಗಿ ಕರ್ತವ್ಯ ನಿರ್ವಹಿಸಬೇಕು. ದೇಶದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕು. ಸಮಾಜದಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಉತ್ತಮ ಜೀವನ ನಡೆಸುವ ಹಕ್ಕು ಇದೆ. ಆ ನಿಟ್ಟಿನಲ್ಲಿ ಸೌಲಭ್ಯಗಳನ್ನು ತಲುಪಿಸಲು ಮುಂದಾಗಬೇಕು ಎಂದರು. ಪ್ರತಿಯೊಬ್ಬರಿಗೂ ಸಾಮಾನ್ಯ ಬದುಕು ನಡೆಸಲು ಬೇಕಿರುವ ಕನಿಷ್ಠ ಸೌಲಭ್ಯವನ್ನಾದರೂ ಕಲ್ಪಿಸಬೇಕು. ತಾಯಿ ಗರ್ಭದಲ್ಲಿ ಇರುವ ಮಗು ಯಾವುದು ಎಂದು ನೋಡುವಂತಿಲ್ಲ, ತಾಯಿ ಮಗುವಿನ ರಕ್ಷಣೆ ಅತೀವ ಮುಖ್ಯವಾಗಿದೆ ಎಂದರು. ಸಾಮಾನ್ಯ ಜನರಿಗೆ ಸರ್ಕಾರದ ಸೌಲಭ್ಯ ಕಲ್ಪಿಸುವಲ್ಲಿ ಎಡವುತ್ತೇವೆ. ಜನ ಸಮೂಹದಲ್ಲಿ ಒಳ್ಳೆಯ ಅಭಿಪ್ರಾಯ ಇರಬೇಕು. ಸಮಸ್ಯೆಗಳು ಹೇಗೆ ಉಂಟಾಗುತ್ತವೆ ಎಂಬುದನ್ನು ಅರಿತುಕೊಳ್ಳಬೇಕು. ಕಾನೂನುಗಳು ಉಲ್ಲಂಘನೆಯಾಗಬಾರದು. ಕರ್ತವ್ಯಲೋಪ ಮಾಡಬಾರದು ಎಂದು ಕೆ.ಎನ್.ಫಣೀಂದ್ರ ಅವರು ಎಚ್ಚರಿಸಿದರು. ನಿರ್ವಹಿಸುವ ಕೆಲಸವನ್ನು ಸಮಯೋಚಿತ ಹಾಗೂ ಸಂದರ್ಭಯೋಚಿತವಾಗಿ ನಿರ್ವಹಿಸಬೇಕು ಎಂದು ಉಪ ಲೋಕಾಯುಕ್ತ ನ್ಯಾಯಮೂರ್ತಿ ಅವರು ತಾಕೀತು ಮಾಡಿದರು. ಕಾಲ ಕಾಲಕ್ಕೆ ಮಾಸಾಶನ ನೀಡಬೇಕು. ಸರ್ಕಾರದ ಸೌಲಭ್ಯವನ್ನು ಸಕಾಲದಲ್ಲಿ ತಲುಪಿಸಬೇಕು. ಕಚೇರಿ ಕೆಲಸ ನಿರ್ವಹಣೆಯಲ್ಲಿ ನಿಧಾನಗತಿ ಇರಬಾರದು ಎಂದು ಎಚ್ಚರಿಸಿದರು. ಸರ್ಕಾರಿ ಸೇವಕರಲ್ಲಿ ದುರಾಡಳಿತ ಇರಬಾರದು. ಕೆಟ್ಟ ಹೆಸರು ಬರದಂತೆ ಕೆಲಸ ನಿರ್ವಹಿಸಬೇಕು. ಸರ್ಕಾರಿ ಅಧಿಕಾರಿಗಳು ಕರ್ತವ್ಯ ಲೋಪ ಉಂಟಾಗದಂತೆ ಕಾರ್ಯನಿರ್ವಹಿಸಬೇಕು ಎಂದರು. ಜನರಿಗೆ ಹತ್ತಿರವಾಗಿರುವ ಅಧಿಕಾರಿಗಳು ಮನೆ ಬಾಗಿಲಿಗೆ ಸೇವೆ ಕಲ್ಪಿಸುತ್ತಾರೆ. ಆ ನಿಟ್ಟಿನಲ್ಲಿ ಮುಂದಾಗಬೇಕು. ಸರ್ವರಿಗೂ ಸಮಪಾಲು ಸಿಗಬೇಕು. ಸಾರ್ವಜನಿಕರ ಹಕ್ಕು ಭಾದ್ಯತೆ ರಕ್ಷಿಸಬೇಕು. ಭ್ರಷ್ಟಾಚಾರ ತಡೆಯಬೇಕು ಎಂದರು. 3 ಲಕ್ಷಕ್ಕಿಂತ ಕಡಿಮೆ ಆದಾಯ ಹೊಂದಿರುವ ಕುಟುಂಬಗಳಿಗೆ ಕಾನೂನು ಸೇವಾ ಪ್ರಾಧಿಕಾರದಿಂದ ಉಚಿತ ಕಾನೂನು ನೆರವು ನೀಡಲಾಗುತ್ತಿದೆ ಎಂದರು. ವಿಚಾರಣೆ ಸಂದರ್ಭದಲ್ಲಿ ಭೂಮಿ, ಕಟ್ಟಡ ಪರವಾನಗಿ, ವಿದ್ಯುತ್ ಸಂಪರ್ಕ, ಬಸ್ ಸಂಪರ್ಕ ಮತ್ತಿತರ ಬಗ್ಗೆ ಹಲವು ವಿಚಾರಗಳ ಕುರಿತು ವಿಚಾರಣೆ ನಡೆಯಿತು. ಉಪ ಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಮತ್ತು ಸಿವಿಲ್ ನ್ಯಾಯಾಧೀಶರಾದ ಕಿರಣ್ ಪಾಟೀಲ, ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಖರ್, ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಷೇಕ್, ಹೆಚ್ಚುವರಿ ಜಿಲ್ಲಾಧಿಕಾರಿ ಸಹನಾ ಎಸ್.ಹಾದಿಮನಿ, ಲೋಕಾಯುಕ್ತ ಎಸ್ಪಿ ಉದೇಶ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ, ಕೊಡಗು ಲೋಕಾಯುಕ್ತ ಡಿವೈಎಸ್‍ಪಿ ದಿನಕರ್ ಶೆಟ್ಟಿ ತಹಶೀಲ್ದಾರ್ ಶ್ರೀಧರ, ನಗರಾಭಿವೃದ್ಧಿ ಯೋಜನಾ ಯೋಜನಾ ನಿರ್ದೇಶಕರಾದ ಮಂಜುನಾಥ ರಾಮಣ್ಣ, ಪೌರಾಯುಕ್ತರಾದ ಎಚ್.ಆರ್.ರಮೇಶ್, ಪರಿಸರ ಅಧಿಕಾರಿ ಮಹೇಶ್ವರಿ ಸಿಂಗ್, ಇತರರು ಇದ್ದರು.









