

ಬಾಳೆಲೆ NEWS DESK ಜು.6 : ಜಿಲ್ಲಾ ಕೃಷಿ ತರಬೇತಿ ಕೇಂದ್ರ ಕೂಡಿಗೆ ವತಿಯಿಂದ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ರೈತ ಹಾಗೂ ರೈತ ಮಹಿಳೆಯರಿಗೆ ಆರ್ಕಿಡ್ ಮತ್ತು ಅಣಬೆ ಬೆಳೆಗಳ ಬಗ್ಗೆ ಒಂದು ದಿನದ ತರಬೇತಿ ಕಾರ್ಯಾಗಾರ ನಡೆಯಿತು. ಬಾಳೆಲೆ ಸೆಂಟರ್ ಎಜುಕೇಷನ್ ಸೊಸೈಟಿಯ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಅವರು ಕಾರ್ಯಾಗಾರ ಉದ್ಘಾಟಿಸಿದರು. ಆರ್ಕಿಡ್ ಹೂವಿನ ಗಿಡಗಳ ಬಗ್ಗೆ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರೋಫೆಸರ್ ಡಾ. ಜಡೇಗೌಡ, ರವರು ಮಾಹಿತಿ ನೀಡುತ್ತಾ, ಕೊಡಗು ಆರ್ಕಿಡ್ ಹೂವಿನ ಬೆಳೆಗೆ ಸಮೃದ್ಧವಾದ ಪರಿಸರವನ್ನು ಹೊಂದಿದ್ದು 120ಕ್ಕೂ ಹೆಚ್ಚು ತಳಿಗಳು ಕೊಡಗಿನಲ್ಲಿದ್ದು ಬ್ರಹ್ಮಗಿರಿ ಮತ್ತು ಪುಚ್ಚಗಿರಿಧಾಮಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕೊಡಗಿನ ಮನೆಯಂಗಳದಲ್ಲಿ ಇದನ್ನು ಬೆಳೆಯುವುದರ ಮೂಲಕ ಮಾರಾಟ ಮಾಡಲು ಸಹ ಅವಕಾಶಗಳಿವೆಯೆಂದು ಅಭಿಪ್ರಾಯ ವ್ಯಕ್ತಪಡಿಸಿದರು. ಅಣಬೆ ಕೃಷಿ ತಜ್ಞರಾದ ಅಂಬಿಕರವರು ಅಣಬೆ ಕೃಷಿ ಮತ್ತು ಅದಕ್ಕಿರುವ ಮಾರುಕಟ್ಟೆ ಬಗ್ಗೆ ಪ್ರಾತ್ಯಕ್ಷಿಕೆ ನೀಡುವುದರ ಮೂಲಕ ರೈತರಿಗೆ ಮನವರಿಕೆ ಮಾಡಿಕೊಟ್ಟರು. ಕೂಡಿಗೆ ಕೃಷಿ ತರಬೇತಿ ಕೇಂದ್ರದ, ಸಹಾಯಕ ನಿರ್ದೇಕರಾದ ಶಿವಮೂರ್ತಿರವರು ಮಾತನಾಡಿ ಕೃಷಿಯನ್ನು ವಾಣಿಜ್ಯ ವ್ಯವಸ್ಥೆಗೆ ಪರಿವರ್ತಿಸಿಕೊಂಡರೆ ಗ್ರಾಮಾಂತರ ಭಾಗದ ರೈತಾಪಿ ವರ್ಗಕ್ಕೆ ಆದಾಯ ತಂದುಕೊಡುವ ಮಾರ್ಗವಾಗಿ ಮಾರ್ಪಾಡು ಮಾಡಿಕೊಳ್ಳೂವುದರ ಜೊತೆಗೆ ಸರ್ಕಾರದ ಸಹಾಯಧನವನ್ನು ಬಳಸಿಕೊಂಡು ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಬಹುದೆಂದು ಕರೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ವಿಜಯಲಕ್ಷಿ ಪ್ರೌಢಶಾಲಾ ಶಿಕ್ಷಕರಾದ ರಾಘವೇಂದ್ರ ಸ್ವಾಗತಿಸಿ ನಿರೂಪಿಸಿದರು. ಬಾಳೆಲೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿಮ್ಮಣಮಾಡ ಕೃಷ್ಣ ಗಣಪತಿ, ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿಗಳಾದ ಜ್ಯೋತಿ, ಕೃಷಿ ಇಲಾಕಾಧಿಕಾರಿಗಳಾದ ಮೀರಾ, ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರತಿಭಾ ಉತ್ತಪ್ಪ, ಮುಖ್ಯ ಶಿಕ್ಷಕರಾದ ಚಂದ್ರಶೇಖರ್ ಕೆ, ಪ್ರಮುಖರಾದ ಅಡ್ಡಂಗಡ ಪೊನ್ನಮ್ಮ, ಚಂದ್ರಾವತಿ ಸೇರಿದಂತೆ ರೈತ/ ರೈತ ಮಹಿಳೆಯರು ಹಾಜರಿದ್ದರು. (ಪಡಿಞರಂಡ ಪ್ರಭುಕುಮಾರ್)









