
ಮಡಿಕೇರಿ NEWS DESK ಜು.6 : ಆರೋಗ್ಯ ಕ್ಷೇತ್ರದಲ್ಲಿ ದೇಶದ್ಯಾದಂತ ಅಮೂಲ್ಯ ಸೇವೆ ಸಲ್ಲಿಸುತ್ತಿರುವ ಎ.ಐ.ಕೆ.ಎಂ.ಸಿ.ಸಿ ಸಂಸ್ಥೆಯ ಮಡಿಕೇರಿ ಘಟಕವನ್ನು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಯು.ಟಿ.ಖಾದರ್ ರವರು ಇಂದು ಮಡಿಕೇರಿಯಲ್ಲಿ ಲೋಕಾರ್ಪಣೆ ಮಾಡಿದರು. ಉತ್ತಮ ಆರೋಗ್ಯ ಪಡೆಯುವುದು ಪ್ರತಿಯೊಬ್ಬ ಮನುಷ್ಯನ ಅಜನ್ಮ ಸಿದ್ದ ಹಕ್ಕಾಗಿದೆ. ವ್ಯಕ್ತಿ ಆರೋಗ್ಯ ವಂತನಾಗಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಎ.ಐ.ಕೆ.ಎಂ.ಸಿ.ಸಿ. ಸಂಸ್ಥೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು ಎಲ್ಲಾ ಸಂಘ ಸಂಸ್ಥೆಗಳು ಜನರ ಆರೋಗ್ಯದ ವಿಚಾರದಲ್ಲಿ ಕಾಳಜಿ ಮತ್ತು ಜಾಗೃತಿ ವಹಿಸಬೇಕು ಎಂದು ಸಚಿವ ಯು.ಟಿ.ಖಾದರ್ ಕರೆ ನೀಡಿದರು. ಸರ್ಕಾರ ಕೂಡ ಜನರ ಆರೋಗ್ಯ ಕ್ಕೆ ಸಂಭಂದಿಸಿದಂತೆ ಪ್ರತಿ ಜಿಲ್ಲೆಯಲ್ಲಿ ಆಸಕ್ತಿ ಇರುವ ಇರುವ ಸಂಘ ಸಂಸ್ಥೆಗಳನ್ನು ಗುರುತಿಸಿ ನೆರವು ನೀಡಲು ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ ಎಂದು ತಿಳಿಸಿದರು. ಸಂಸ್ಥೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಕೆ.ನೌಶಾದ್ ರವರು ಅಧ್ಯಕ್ಷತೆ ವಹಿಸಿ ಮಾತನಾಡಿ ಎ.ಐ.ಕೆ.ಎಂ.ಸಿ.ಸಿ ಸಂಸ್ಥೆ ದೇಶದಲ್ಲಿ ಒಟ್ಟು 117 ಸಂಸ್ಥೆಗಳನ್ನು ಹೊಂದಿದ್ದು 14,700 ಜನ ಸ್ವಯಂ ಸೇವಕರು ಆರ್ಥಿಕ ವಾಗಿ ದುರ್ಬಲವಾಗಿರುವ ರೋಗಿಗಳ ಮನೆಗೆ ಹೋಗಿ ಅವರ ಸೇವೆ ಮಾಡುತ್ತಿದ್ದಾರೆ. ಯಾವುದೇ ಕ್ಷಣದಲ್ಲಿ ರೋಗಿಗಳು ಸಹಾಯ ನೆರವು ಕೋರಿದಲ್ಲಿ ಸ್ಪಂದನೆ ನೀಡಲು ಸಿದ್ದರಾಗಿರುವುದಾಗಿ ತಿಳಿಸಿದರಲ್ಲದೇ ಕೊಡಗು ಜಿಲ್ಲೆಯಲ್ಲಿ 1200 ಬೆಡ್ ಪೇಷೆಂಟ್ ಗಳ ಯೋಗಕ್ಷೇಮವನ್ನು ನಿರಂತರವಾಗಿ ನೋಡಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಕೊಡಗಿನಲ್ಲಿ ಸೇವೆ ಕೋರಿ ಹೆಲ್ಪ್ ಲೈನ್ ಸಂಖ್ಯೆ 9559163936 ಗೆ ಕರೆ ಮಾಡಿ ಉಪಯೋಗ ಪಡೆಯುವಂತೆ ಕೋರಿದರು. ಕೊಡಗು ರಕ್ತನಿಧಿ ಘಟಕದ ಮುಖ್ಯಸ್ಥರಾದ ಡಾ ಕರುಂಬಯ್ಯ ನವರು ಮಾತನಾಡಿ ಸಂಸ್ಥೆಯ ಆರಂಭವನ್ನು ರಕ್ತದಾನದ ಮೂಲಕ ಪ್ರಾರಂಭಿಸಿರುವುದು ಇತರ ಎಲ್ಲಾ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಶ್ಲಾಘಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಮಾತನಾಡಿ ಎ.ಐ.ಕೆ.ಎಂ.ಸಿ.ಸಿ ಸಂಸ್ಥೆ ಕ್ಲಿಷ್ಟಕರ ಆರೋಗ್ಯ ಎದುರಿಸುತ್ತಿರುವ ರೋಗಿಗಳನ್ನು ನಿರಂತರವಾಗಿ ಉಪಚರಿಸುವ ಅದ್ಭುತ ಕಾರ್ಯ ಮಾಡುತ್ತಿದ್ದು ಇದು ದೇವರು ಕೂಡಾ ಮೆಚ್ಚುವ ಕೆಲಸವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಸದಸ್ಯರು ಸೇರಿದಂತೆ 20 ಮಂದಿ ರಕ್ತದಾನ ಮಾಡಿದರು. ಸಂಸ್ಥೆಯ ಮುಖ್ಯಸ್ಥರಾದ ಅಬ್ದುಲ್ ಗಫೂರ್, ಘಟಕದ ಅಧ್ಯಕ್ಷರಾದ ರಿಯಾಜ್, ಪ್ರಧಾನ ಕಾರ್ಯದರ್ಶಿ ಶಮೀರ್, ಯಾಕುಬ್, ಪ್ರಮುಖರಾದ ಪ್ರಕಾಶ್ ಆಚಾರ್ಯ, ಕಲೀಲ್ ಬಾಷ, ಕೋಚನ ಚೇತನ್,ಎಂ.ಎ.ನಿಷಾರ್ ಸೇರಿದಂತೆ ಸಂಸ್ಥೆಯ ಸದಸ್ಯರು ಸಾರ್ವಜನಿಕರು ಉಪಸ್ಥಿತರಿದ್ದರು.









