
ಮಡಿಕೇರಿ ಜು.9 NEWS DESK : ಕರ್ನಾಟಕ ರಾಜ್ಯ ಫುಟ್‌ಬಾಲ್ ಸಂಸ್ಥೆಯ ಆಶ್ರಯದಲ್ಲಿ ತುಮಕೂರಿನ ಎಂ.ಜಿ. ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಂತರ ಜಿಲ್ಲಾ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ಫುಟ್‌ಬಾಲ್ ತಂಡವು ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ಪ್ರಶಸ್ತಿಯತ್ತ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ. ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಆತಿಥೇಯ ತುಮಕೂರು ತಂಡವನ್ನು ಎದುರಿಸಿದ ಕೊಡಗು ತಂಡವು ಆರಂಭದಿಂದಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿ 8-0 ಗೋಲುಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿತು. ತಂಡದ ಪರ ಸಬಿತ್ ಎರಡು ಗೋಲು, ಸವಾದ್ ಎರಡು ಗೋಲು, ಫಾರೂಕ್ ಒಂದು ಗೋಲು, ಅಜಿತ್ ಒಂದು ಗೋಲು ಹಾಗೂ ದಿವಾಕರ್ ಒಂದು ಗೋಲು ದಾಖಲಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೊಡಗು ತಂಡದ ಸಮನ್ವಯದ ಆಟ, ವೇಗದ ಪಾಸ್‌ಗಳು ಮತ್ತು ಪರಿಣಾಮಕಾರಿ ದಾಳಿ ಎದುರಾಳಿ ತಂಡವನ್ನು ಸಂಪೂರ್ಣವಾಗಿ ಕಟ್ಟಿಹಾಕಿತು. ಎರಡನೇ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡವನ್ನು ಎದುರಿಸಿದ ಕೊಡಗು ತಂಡವು ಮತ್ತೊಮ್ಮೆ ತನ್ನ ಪ್ರಾಬಲ್ಯ ಮೆರೆದಿತು. ಪಂದ್ಯದುದ್ದಕ್ಕೂ ಎದುರಾಳಿಗೆ ಯಾವುದೇ ಅವಕಾಶ ನೀಡದ ಕೊಡಗು ತಂಡವು 4-0 ಗೋಲುಗಳ ಅಂತರದಿಂದ ಜಯಭೇರಿ ಬಾರಿಸಿತು. ಈ ಪಂದ್ಯದಲ್ಲಿ ರಂಗ ಎರಡು ಗೋಲು, ತಂಡದ ನಾಯಕ ವಿಜು ಒಂದು ಗೋಲು ಹಾಗೂ ಮುಸ್ತಾಕ್ ಒಂದು ಗೋಲು ದಾಖಲಿಸಿ ತಂಡದ ಗೆಲುವನ್ನು ಖಚಿತಪಡಿಸಿದರು.
ಕೊಡಗು ತಂಡದ ನಾಯಕನಾಗಿ ವಿಜು ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದು, ಮುಖ್ಯ ಕೋಚ್ ಜಗದೀಶ್ ಪಾಣತಾಲೆ ಅವರ ಮಾರ್ಗದರ್ಶನದಲ್ಲಿ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ವ್ಯವಸ್ಥಾಪಕರಾಗಿ ದರ್ಶನ್ ಸುಕುಮಾರ್ ಹಾಗೂ ಸಹಾಯಕ ಕೋಚ್ ಆಗಿ ದೀಪು ಮಾಚ್ಚಯ್ಯ ತಂಡದ ಯಶಸ್ಸಿಗೆ ಶ್ರಮಿಸುತ್ತಿದ್ದಾರೆ. ಪಂದ್ಯಾವಳಿಯಲ್ಲಿ ಕೊಡಗು ತಂಡದ ಸತತ ಎರಡು ಗೆಲುವು ಜಿಲ್ಲೆಯ ಫುಟ್‌ಬಾಲ್ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದ್ದು, ಮುಂದಿನ ಪಂದ್ಯಗಳಲ್ಲಿಯೂ ಇದೇ ಪ್ರದರ್ಶನ ಮುಂದುವರಿಸಿ ಪ್ರಶಸ್ತಿ ಗೆಲ್ಲಲಿ ಎಂದು ಜಿಲ್ಲೆಯ ಕ್ರೀಡಾಭಿಮಾನಿಗಳು ಶುಭ ಹಾರೈಸಿದ್ದಾರೆ.









