
ಮಡಿಕೇರಿ ಜು.10 NEWS DESK : ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪೊನ್ನಂಪೇಟೆ, ವಿರಾಜಪೇಟೆ ಹಾಗೂ ಮಡಿಕೇರಿ ತಾಲೂಕುಗಳ ಅಂಗನವಾಡಿಗಳಲ್ಲಿ ಖಾಲಿ ಇದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ನೂತನವಾಗಿ ಆಯ್ಕೆಯಾದ ಅಭ್ಯರ್ಥಿಗಳಿಗೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಆದೇಶ ಪತ್ರ ವಿತರಿಸಿದರು. ಕ್ಷೇತ್ರದ ಒಟ್ಟು 25 ಅಂಗನವಾಡಿ ಕಾರ್ಯಕರ್ತೆಯರು ಹಾಗೂ 34 ಅಂಗನವಾಡಿ ಸಹಾಯಕಿಯರಿಗೆ ನೇಮಕಾತಿ ಆದೇಶ ಪತ್ರವನ್ನು ಹಸ್ತಾಂತರಿಸಿ, ಮಾತನಾಡಿದ ಶಾಸಕರು, “ಮಕ್ಕಳ ಮತ್ತು ಮಹಿಳೆಯರ ಕಲ್ಯಾಣದಲ್ಲಿ ಅಂಗನವಾಡಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ನಿಮಗೆ ದೊರಕಿರುವ ಈ ಸೇವೆಯ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಅತ್ಯಂತ ಜವಾಬ್ದಾರಿಯಿಂದ ಮತ್ತು ಉತ್ತಮ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬೇಕು” ಎಂದು ನೂತನ ಸಿಬ್ಬಂದಿಗಳಿಗೆ ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು (CDPO), ಪ್ರಮುಖ ಮುಖಂಡರುಗಳಾದ ವಿನೋದ್ ನಾಣಯ್ಯ, ಸುಬೀರ್, ತುಳಸಿ ಗಾಂಧಿ ಪ್ರಸಾದ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.









